ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನವು ಬಿಜೆಪಿಯ ಕೊಳಕು ಮತಬ್ಯಾಂಕ್ ರಾಜಕೀಯ” ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಿಡಿ ಕಾರಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜನರು ಈ ಕಾನೂನನ್ನು ರದ್ದುಗೊಳಿಸಬೇಕೆಂದು ಪ್ರತಿಪಾದಿಸಿದ್ದಾರೆ. ಈ ಕಾನೂನಿನ ಮೂಲಕ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಪಾಕಿಸ್ಥಾನ ಮತ್ತು ಬಾಂಗ್ಲಾದೇಶದಿಂದ ಹೆಚ್ಚಿನ ಸಂಖ್ಯೆಯ ಬಡ ಅಲ್ಪಸಂಖ್ಯಾತರು ಭಾರತಕ್ಕೆ ಬರಲು ಪ್ರವಾಹದ ಬಾಗಿಲು ತೆರೆದಿದೆ’ ಎಂದರು.
ಪಾಕಿಸ್ಥಾನ, ಅಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶದಲ್ಲಿ 3.5 ಕೋಟಿ ಅಲ್ಪಸಂಖ್ಯಾತರಿದ್ದಾರೆ. ಪಾಕಿಸ್ಥಾನ ಮತ್ತು ಬಾಂಗ್ಲಾದೇಶದ ಬಡ ವಲಸಿಗರಿಗೆ ಇಲ್ಲಿ ಮನೆ ಮತ್ತು ಉದ್ಯೋಗ ನೀಡುವ ಮೂಲಕ ನಮ್ಮ ಜನರ ಹಣವನ್ನು ಖರ್ಚು ಮಾಡಲು ಬಿಜೆಪಿ ಬಯಸಿದೆ” ಎಂದು ಆರೋಪಿಸಿದರು.
ನೆರೆಯ ರಾಷ್ಟ್ರಗಳ ಬಡ ಅಲ್ಪಸಂಖ್ಯಾತರು ಭಾರತದಲ್ಲಿ ನೆಲೆಯೂರುವುದರಿಂದ ಬಿಜೆಪಿಗೆ ಮುಂಬರುವ ಚುನಾವಣೆಯಲ್ಲಿ ಲಾಭವಾಗಲಿದೆ . ದೇಶವು ಸಿಎಎ ರದ್ದುಗೊಳಿಸಬೇಕೆಂದು ಒತ್ತಾಯಿಸುತ್ತದೆ ಮತ್ತು ಕಾನೂನನ್ನು ರದ್ದುಗೊಳಿಸದಿದ್ದರೆ ಬಿಜೆಪಿ ವಿರುದ್ಧ ಮತ ಚಲಾಯಿಸಲು ಹೇಳಿದರು.
ಪೌರತ್ವ ತಿದ್ದುಪಡಿ ಕಾಯ್ದೆಯು ಡಿಸೆಂಬರ್ 31, 2014 ರ ಮೊದಲು ಪಾಕಿಸ್ಥಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ಥಾನದಿಂದ ಭಾರತಕ್ಕೆ ಬಂದ ದಾಖಲೆರಹಿತ ಮುಸ್ಲಿಮೇತರ ವಲಸಿಗರಿಗೆ ಪೌರತ್ವವನ್ನು ನೀಡುವುದಾಗಿದೆ.