Advertisement

ಭಾರತದಲ್ಲಿ ಹುಟ್ಟಿದವರಿಗೂ ಸಿಎಎಗೂ ಸಂಬಂಧವಿಲ್ಲ: ಸಂತೋಷ್‌

09:57 PM Jan 24, 2020 | Lakshmi GovindaRaj |

ಮೈಸೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯಿದೆ ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನ ದೇಶಗಳ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ್ದೇ ಹೊರತು, ಭಾರತದ ಮುಸಲ್ಮಾನರು ಹಾಗೂ ಇತರರಿಗೆ ಸಂಬಂಧಿಸಿದ್ದಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಸಮರ್ಥಿಸಿದರು.

Advertisement

ಮೈಸೂರು ನಗರ ಮತ್ತು ಜಿಲ್ಲಾ ಬಿಜೆಪಿ ವತಿಯಿಂದ ನಗರದ ಜೆ.ಕೆ.ಮೈದಾನದ ಆವರಣದ ಅಮೃತೋತ್ಸವ ಭವನದಲ್ಲಿ ಆಯೋಜಿಸಿದ್ದ ಸಿಎಎ ಒಂದು ವಿಮರ್ಶೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ ಜನತೆ ನಮ್ಮ ಮೇಲೆ ನಂಬಿಕೆ ಇಟ್ಟು 303 ಸಂಸದರನ್ನು ಬಿಜೆಪಿಯಿಂದ ಆಯ್ಕೆ ಮಾಡಿ ಸಂಸತ್ತಿಗೆ ಕಳುಹಿಸಿದ್ದಾರೆ. ಹಾಗಾಗಿ ದೇಶದ ಜ್ವಲಂತ ಸಮಸ್ಯೆಗಳನ್ನು ಒಂದೊಂದಾಗಿ ಪರಿಹರಿಸುವತ್ತ ನರೇಂದ್ರ ಮೋದಿ ಸರ್ಕಾರ ಹೆಜ್ಜೆಯಿಡುತ್ತಿದೆ.

ಈ ಹಿಂದೆ ಇದ್ದ ಕಾಶ್ಮೀರ ವಿಶೇಷ ಸ್ಥಾನಮಾನ ವಿವಾದ, ರಾಮ ಜನ್ಮಭೂಮಿ ವಿವಾದ ಬಗೆಹರಿಸಲಾಗಿದೆ. ಇತ್ತೀಚೆಗೆ 644 ತೀವ್ರಗಾಮಿಗಳು ಶರಣಾಗಿದ್ದು, 14 ಸಾವಿರ ಬಂದೂಕು, 3.50ಲಕ್ಷ ಬುಲೆಟ್‌ಗಳನ್ನು ಸರ್ಕಾರಕ್ಕೆ ಒಪ್ಪಿಸಿದ್ದಾರೆ. ಮುಂದೆಯೂ 800 ಮಂದಿ ಉಗ್ರಗಾಮಿಗಳು ಶರಣಾಗತಿಯಾಗುವ ನಿರೀಕ್ಷೆ ಇದೆ ಎಂದರು. ಮುಂದಿನ ದಿನಗಳಲ್ಲಿ ಚೀನಾ ಗಡಿ, ಬೆಳಗಾವಿ ಗಡಿ ಸಮಸ್ಯೆ, ಕಾವೇರಿ, ಕಳಸಾ ಬಂಡೂರಿ ಮುಂತಾದ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ಧವಾಗಿದೆ. ಇಂತಹ ವಿವಾದ ಜೀವಂತವಾಗಿದ್ದರೆ ದೇಶದ ಅಭಿವೃದ್ಧಿಗೆ ಮಾರಕ ಎಂದರು.

ದಾಖಲಾತಿ ಸಲ್ಲಿಸಬೇಕಿಲ್ಲ: ಮಿಜೋರಾಂನಲ್ಲಿ ಬ್ರೂ ರಿಯಾಂಗ್‌ ಎಂಬ ಪಂಗಡ ಕಳೆದ 23 ವರ್ಷಗಳಿಂದ ತೊಂದರೆ ಅನುಭವಿಸಿತ್ತು. ಈಗ ಪುನರ್ವಸತಿ ಕಲ್ಪಿಸಲಾಗುತ್ತಿದೆ. ಸ್ವಾತಂತ್ರ್ಯ ನಂತರ ಮೊದಲ ಪ್ರಧಾನಿ ನೆಹರು ಮತ್ತು ಪಾಕಿಸ್ತಾನದ ಪ್ರಧಾನಿ ಒಂದು ಒಪ್ಪಂದಕ್ಕೆ ಸಹಿ ಹಾಕಿದ್ದರು. ಉಭಯ ದೇಶಗಳಲ್ಲಿನ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವ ಈ ಸಹಿ ಹಾಕಲಾಗಿತ್ತು.

ಆದರೆ, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿದ್ದ ಹಿಂದೂಗಳು, ಶಿಖ್‌, ಪಾರ್ಸಿಗಳು, ಕ್ರಿಶ್ಚಿಯನ್ನರ ಸಂಖ್ಯೆ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘಾನಿಸ್ತಾನವನ್ನು ತೊರೆದು ಭಾರತದ ಗುಜರಾತ್‌, ಪಂಜಾಬ್‌, ಮಹಾರಾಷ್ಟ್ರ, ದೆಹಲಿ, ಹರಿಯಾಣ, ಪಶ್ಚಿಮ ಬಂಗಳಾ, ಅಸ್ಸಾಂ, ತ್ರಿಪುರ, ಕರ್ನಾಟಕದ ಕೆಲವು ಭಾಗದಲ್ಲಿ ನೆಲೆಸಿರುವವರಿಗೆ ಪೌರತ್ವ ನೀಡಲು ಈ ಕಾಯ್ದೆ ಜಾರಿಗೊಳಿಸಲಾಗಿದೆಯೇ ಹೊರತು ಭಾರತದಲ್ಲಿಯೇ ಹುಟ್ಟಿದ ಯಾರೊಬ್ಬರಿಗೂ ಈ ಕಾಯ್ದೆ ಸಂಬಂಧಿಸಿಲ್ಲ ಮತ್ತು ಅವರು ಯಾವುದೇ ದಾಖಲಾತಿ ಸಲ್ಲಿಸಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

ಈ ಕಾಯ್ದೆ ವಿರೋಧಿಸುವ ಹಕ್ಕು ಯಾವುದೇ ಸರ್ಕಾರಕ್ಕೆ ಇಲ್ಲ. ಇದನ್ನು ನ್ಯಾಯಾಲಯದಲ್ಲಿ ಬೇಕಿದ್ದರೆ ಪ್ರಶ್ನಿಸಬಹುದಷ್ಟೆ. ಸಪ್ನ ಭಾಸ್ಕರ್‌ ಎಂಬ ನಟಿ ತನ್ನ ಬಳಿ ಯಾವುದೇ ದಾಖಲಾತಿ ಇಲ್ಲ ಎಂದು ಹೇಳುತ್ತಾರೆ. ಆದರೂ ಪಾಸ್‌ಪೋರ್ಟ್‌ ಬಳಸಿ ಹೊಸ ವರ್ಷಾಚರಣೆಗೆ ವಿದೇಶಕ್ಕೆ ಹೋಗುತ್ತಾರೆ. ಡಿಎಲ್‌ ಪಡೆದು ವಾಹನ ಚಲಾಯಿಸುತ್ತಾರೆ. ಅದೆಲ್ಲವೂ ದಾಖಲಾತಿ ಅಲ್ಲವೇ?. ತಾನು ಯಾವುದೇ ದಾಖಲಾತಿ ಕೊಡುವುದಿಲ್ಲ ಎನ್ನುವ ಶಶಿ ತರೂರ್‌, ದಿಗ್ವಿಜಯ್‌ಸಿಂಗ್‌ ಮುಂತಾದವರು ಮುಂದಿನ ಚುನಾವಣೆಗೆ ನಾಮಪತ್ರದೊಡನೆ ನಿಮ್ಮ ದಾಖಲಾತಿ ಕೊಡುವುದಿಲ್ಲವೇ ಎಂದು ವ್ಯಂಗ್ಯವಾಡಿದರು.

ಚುನಾವಣೆ ಉದ್ದೇಶಕ್ಕೆ ಜಾರಿಗೆ ತಂದಿಲ್ಲ: ಬಾಂಗ್ಲಾದವರು 100 ಕಿ.ಮೀ.ದೂರದ ಚೀನಾವನ್ನು ಅಕ್ರಮವಾಗಿ ಪ್ರವೇಶಿಸುವುದಿಲ್ಲ. ಆದರೆ 2,500 ಕಿ.ಮೀ. ದೂರದ ಭಾರತದ ಕರ್ನಾಟಕದಲ್ಲಿ ಅಕ್ರಮವಾಗಿ ವಾಸಿಸುತ್ತಾರೆ ಎನ್ನುವಾಗ ಈ ಕಾನೂನು ಗಟ್ಟಿಗೊಳಿಸುವುದು ತಪ್ಪೆ?. ಸಾರ್ವಜನಿಕವಾಗಿ ಕೆಟ್ಟದಾಗಿ ಮಾತನಾಡುವ ಭಾರತದಲ್ಲಿನ ಸಿಎಂ ಇಬ್ರಾಹಿಂ, ಜಮೀರ್‌ ಅಹಮದ್‌ಗೆ ಈ ಕಾನೂನಿನಿಂದ ಯಾವ ತೊಂದರೆಯೂ ಆಗಲ್ಲ. 2005ರಲ್ಲಿ ಮಮತಾ ಬ್ಯಾನರ್ಜಿ ಭಾರತಕ್ಕೆ ವಲಸೆ ಬಂದವರಿಗೆ ಪೌರತ್ವ ನೀಡಬೇಕು ಎಂದು ಸದನದ ಬಾವಿಗೆ ಇಳಿದು ಪ್ರತಿಭಟಿಸಿದ್ದರು. ಈಗೇಕೆ ವಿರುದ್ಧವಾಗಿ ಮಾತನಾಡುತ್ತಿದ್ದಾರೆ?. ಇನ್ನು ಚುನಾವಣೆ ಉದ್ದೇಶಕ್ಕೆ ಕಾಯ್ದೆ ಜಾರಿಗೆ ತಂದಿಲ್ಲವೆಂದರು.

ಕರ್ನಾಟಕದಲ್ಲಿ ಸಿಎಂ ಆದ ಯಡಿಯೂರಪ್ಪ ಅವರು ತಿರುವಳ್ಳವರ್‌ ಮತ್ತು ಸರ್ವಜ್ಞ ಪ್ರತಿಮೆ ಸಮಸ್ಯೆ ಬಗೆಹರಿಸಿದರು. ಅವರ ಮೇಲೆ ಆರ್ಥಿಕ ಆರೋಪ, ಮೋದಿ ಅವರ ಮೇಲೆ ಹತ್ಯೆ ಆರೋಪ ಮತ್ತು ಅಮಿತ್‌ ಶಾ ಅವರ ಮೇಲೆ ಆರ್ಥಿಕ ಆರೋಪ ಬಂತು. ಅವುಗಳಿಂದ ಅವರು ವಿಮುಕ್ತರಾಗಿದ್ದಾರೆ ಎಂದರು. ಸಂವಾದದ ಮಾತನಾಡಿ, ಸರ್ಕಾರ ದಲಿತರಿಗೆ ವಿರೋಧಿಯಾಗಿಲ್ಲ. ನಾವು ಸಿಎಎ ಕುರಿತು ಮುಸ್ಲಿಂ ಧಾರ್ಮಿಕ ಮುಖಂಡರ ಜೊತೆಯೂ ಮಾತುಕತೆ ನಡೆಸಿದ್ದೇವೆ ಎಂದು ಹೇಳಿದರು. ಮೈಸೂರು- ಕೊಡಗು ಸಂಸದ ಪ್ರತಾಪಸಿಂಹ, ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ.ರಾಜೇಂದ್ರ, ವಿಭಾಗೀಯ ಪ್ರಭಾರಿ ಮೈ.ವಿ.ರವಿಶಂಕರ್‌, ನಗರ ಬಿಜೆಪಿ ಅಧ್ಯಕ್ಷ ಡಾ.ಬಿ.ಎಚ್‌. ಮಂಜುನಾಥ್‌, ಜಿಲ್ಲಾಧ್ಯಕ್ಷ ಎಂ.ಶಿವಣ್ಣ ಇದ್ದರು.

ಹಕ್ಕು ಕಸಿಯಲು ಸಾಧ್ಯವೇ ಇಲ್ಲ: ದೇಶದಲ್ಲಿ ದಿನಕೊಬ್ಬ ನಿರುದ್ಯೋಗಿ ರಾಜಕಾರಣಿ ಪೌರತ್ವ ಕಾಯ್ದೆ ವಿರೋಧಿಸಿ ಮಾತಾಡುತ್ತಾರೆ. ಆದರೆ ಸಂವಿಧಾನ ಕೊಟ್ಟ ಹಕ್ಕನ್ನು ಯಾವ ಪಕ್ಷವೂ ಕಿತ್ತುಕೊಳ್ಳಲು ಆಗುವುದಿಲ್ಲ. ಹೀಗಿದ್ದರೂ ಅಮಾಯಕ ಜನರಿಗೆ ನಿಮ್ಮ ಆಧಾರ್‌ ಕಾರ್ಡ್‌ ಕಿತ್ತು ಕೊಳ್ಳುತ್ತಾರೆ ಎಂದು ಹೆದರಿಸುತ್ತಿದ್ದಾರೆ. ಆದರೆ ದೇಶದ ಜನರಿಗೆ ನಮ್ಮ ಸಂವಿಧಾನ ನೀಡಿರುವ ಯಾವ ಹಕ್ಕನ್ನು ಬಿಜೆಪಿಯಾಗಲಿ, ಕಾಂಗ್ರೆಸ್‌ ಆಗಲಿ ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಡಾ.ಬಿ.ಆರ್‌. ಅಂಬೇಡ್ಕರ್‌ ಕೊಟ್ಟ ಸಂವಿಧಾನ, ನಮ್ಮ ಪರವಾಗಿದೆ ಎಂದ ಅವರು, ಸಿಎಎ ಕಾನೂನನ್ನು ಮಹಾತ್ಮ ಗಾಂಧೀಜಿ, ಇಂದಿರಾ ಗಾಂಧಿ, ಜವಾಹರ್‌ಲಾಲ್‌ ನೆಹರು ಹೇಳಿದ್ದನ್ನು ಸಂವಿಧಾನ ಬದ್ಧವಾಗಿ ಮಾಡಿದ್ದೇವೆ ಹೊರತು, ಸಿಎಎ ಕಾನೂನನ್ನು ಬಿಜೆಪಿ ಸರ್ಕಾರ ರಾಜಕೀಯ ಉದ್ದೇಶದಿಂದ ಜಾರಿಗೆ ತಂದಿಲ್ಲ. ಅದರ ಅಗತ್ಯವೂ ಬಿಜೆಪಿ ಪಕ್ಷಕ್ಕಿಲ್ಲ.
-ಬಿ.ಎಲ್‌.ಸಂತೋಷ್‌, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next