ನವದೆಹಲಿ: ಪೌರತ್ವ ಕಾಯ್ದೆಯು ನಿರ್ದಿಷ್ಟ ಪ್ರಾಂತ್ಯಕ್ಕಾಗಿ ರೂಪಿಸಲಾಗಿರುವ ಶಾಸನವಾಗಿದ್ದು ಅದರ ಸ್ವರೂಪ ಹಾಗೂ ವ್ಯಾಪ್ತಿಗಳು ಸೀಮಿತವಾಗಿವೆ ಎಂದು ಕೇಂದ್ರ ಗೃಹ ಇಲಾಖೆ, ಮಂಗಳವಾರ ಬಿಡುಗಡೆ ಮಾಡಲಾಗಿರುವ ತನ್ನ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಿದೆ.
ಕೆಲವು ದೇಶಗಳಲ್ಲಿ ದೌರ್ಜನ್ಯಕ್ಕೀಡಾಗಿರುವ, ಸೌಲಭ್ಯ ವಂಚಿತರಾಗಿರುವ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಹಾಗೂ ಕ್ರೈಸ್ತರಿಗೆ ಭಾರತದಲ್ಲಿ ನೆಲೆಯೂರಲು ಅವಕಾಶ ಕಲ್ಪಿಸಿ ಅವರಿಗೆ ಭಾರತೀಯ ಪೌರತ್ವ ನೀಡುವಂಥ ಕಾಯ್ದೆ ಇದಾಗಿದೆ.
2019ರಲ್ಲಿ ಪೌರತ್ವ ತಿದ್ದುಪಡಿ ವಿಧೇಯಕಕ್ಕೆ ಲೋಕಸಭೆ, ರಾಜ್ಯಸಭೆಗಳ ಒಪ್ಪಿಗೆ ಸಿಕ್ಕಿದ್ದರೂ ಶಾಸನವಾಗಿ ಈ ಕಾಯ್ದೆ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ.
ಇದನ್ನೂ ಓದಿ:ಒಂದು ವೇಳೆ ಜನರು ನಾರಾಯಣ ಗುರುಗಳ ಸಂದೇಶ ಪಾಲಿಸಿದ್ದರೆ ದೇಶದಲ್ಲಿ ಒಗ್ಗಟ್ಟು: ಪ್ರಧಾನಿ ಮೋದಿ
ಮತ್ತೊಂದೆಡೆ, 1990ರ ದಶಕದಲ್ಲಿ ಕಾಶ್ಮೀರದಲ್ಲಿ ಹೆಚ್ಚಿದ ಉಗ್ರರ ಹಿಂಸಾಚಾರದಿಂದಾಗಿ 64,827 ಕಾಶ್ಮೀರಿ ಪಂಡಿತರು ಕಣಿವೆಯಿಂದ ಬೇರೆಡೆಗಳಿಗೆ ವಲಸೆ ಹೋಗಿದ್ದಾರೆ ಎಂದು ಗೃಹ ಇಲಾಖೆಯ ವರದಿಯಲ್ಲಿ ತಿಳಿಸಲಾಗಿದೆ.
ಅಲ್ಲದೆ, 2013ರಲ್ಲಿ ದೇಶಾದ್ಯಂತ ನಡೆದಿದ್ದ ನಕ್ಸಲರ ದುಷ್ಕೃತ್ಯಗಳಿಗೆ ಹೋಲಿಸಿದರೆ 2020ರಲ್ಲಿ ನಡೆದ ದುಷ್ಕೃತ್ಯಗಳ ಪ್ರಮಾಣ ಶೇ. 41ರಷ್ಟು ಕಡಿಮೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.