ಮೈಸೂರು: ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಉಂಟಾಗಿರುವ ಪ್ರಚೋದನೆಗಳಿಗೆ ಕಿಗೊಡದೇ ಭಾವೈಕ್ಯತೆ, ಸಹೋದರತ್ವದಿಂದ ಬದುಕುವ ಮೂಲಕ ವಿವಿಧತೆಯಲ್ಲಿ ಏಕತೆ ಸಂದೇಶ ಸಾರೋಣ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.
ಪೌರತ್ವ ಕಾಯ್ದೆ ಕುರಿತು ಮುಸ್ಲಿಮರಲ್ಲಿ ಉಂಟಾಗಿರುವ ಆತಂಕ ಹೋಗಲಾಡಿಸುವ ನಿಟ್ಟಿನಲ್ಲಿ ಮೈಸೂರಿನ ಕೆ.ಆರ್. ಕ್ಷೇತ್ರದ 270 ಬೂತ್‌ಗಳಲ್ಲಿ ಪೋಸ್ಟ್ ಕಾರ್ಡ್ ಅಭಿಯಾನ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ನಗರದ ವಿವೇಕಾನಂದ ವೃತ್ತದಲ್ಲಿ ನಡೆದ ಪೋಸ್ಟ್ ಕಾರ್ಡ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿವಿಧತೆಯಲ್ಲಿ ಏಕತೆಯ ಸಂದೇಶ ಸಾರಬೇಕು: ದೇಶದಲ್ಲಿ ಪೌರತ್ವ ಕಾಯ್ದೆಗೆ ಸಂಬಂಧಿಸಿದಂತೆ ದೇಶದ ಜನರಲ್ಲಿ, ಪ್ರಮುಖವಾಗಿ ಮುಸಲ್ಮಾನರಲ್ಲಿ ವಿನಾಃಕಾರಣ ಹಲವು ಗೊಂದಲ ಮೂಡಿಸಿ ಪ್ರಚೋದನೆ ನೀಡುವ ಕೆಲಸ ಮಾಡಲಾಗುತ್ತಿದೆ. ಕಾಯ್ದೆಯನ್ನು ರಾಜಕೀಯ ಅಸ್ತ್ರವನ್ನಾಗಿಸಿಕೊಂಡು ಅದರ ಮೂಲಕ ಗಲಭೆಗಳನ್ನು ಉಂಟುಮಾಡಲು ಪ್ರಯತ್ನಿಸಲಾಗುತ್ತಿದೆ.
ಇಂತಹ ಮನಸ್ಥಿತಿ ಖಂಡಿಸಿ, ಇಂತಹ ಗೊಂದಲ ಮತ್ತು ಪ್ರಚೋದನೆಗಳಿಗೆ ಒಳಗಾಗದೆ, ನಾವೆಲ್ಲರೂ ಭಾವೈಕತ್ಯೆ ಮತ್ತು ಸಹೋದರತ್ವದ ಬದುಕು ನಡೆಸಬೇಕು. ಆ ಮೂಲಕ ದೇಶದ ಐಕ್ಯತೆ ಮತ್ತು ಸಾರ್ವಭೌಮತ್ವವನ್ನು ಎತ್ತಿ ಹಿಡಿದು ವಿವಿಧತೆಯಲ್ಲಿ ಏಕತೆಯ ಸಂದೇಶ ಸಾರಬೇಕಿದೆ ಎಂದರು.
ಜನರಿಗೆ ಅರಿವು ಮೂಡಿಸಿ: ಸಿಎಎ ಕಾಯ್ದೆಯಿಂದ ದೇಶದ ಜನರಿಗೆ, ವಿಶೇಷವಾಗಿ ಮುಸಲ್ಮಾನರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಹೀಗಾಗಿ ಈ ಮಸೂದೆ ತಿದ್ದುಪಡಿಗೆ ಸ್ವತಃ ಮುಸಲ್ಮಾನರೇ ಬೆಂಬಲ ವ್ಯಕ್ತಪಡಿಸುತ್ತಾರೆ ಎನ್ನುವ ವಿಶ್ವಾಸದೆ ಎಂದ ಅವರು, ಪೌರತ್ವ ತಿದ್ದುಪಡಿ ಮಸೂದೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಕಾಯ್ದೆ ಬಗ್ಗೆ ಮಾಹಿತಿ ಪಡೆದಿರುವ ಸಾರ್ವಜನಿಕರು, ಮುಂದಿನ ದಿನಗಳಲ್ಲಿ ಈ ಬಗ್ಗೆ ಜನರಿಗೆ ಅರಿವು ಮೂಡಿಸಲು ಮುಂದಾಗಬೇಕು ಎಂದು ಹೇಳಿದರು.
ಪ್ರಧಾನಿಗೆ ಪತ್ರ ರವಾನೆ: ಇದೇ ಸಂದರ್ಭದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ಸೂಚಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ರವಾನಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಸಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು, ಸಿಎಎಗೆ ನಮ್ಮ ಬೆಂಬಲದೆ ಎಂದು ಅಂಚೆ ಪತ್ರದಲ್ಲಿ ಬರೆದು, ಪ್ರಧಾನ ಮಂತ್ರಿಯವರ ನಿವಾಸಕ್ಕೆ ಪತ್ರ ರವಾನಿಸಿದರು.
ಪಾಲಿಕೆ ಸದಸ್ಯರಾದ ಬಿ..ಮಂಜುನಾಥ್, ಸುನಂದಾ ಪಾಲನೇತ್ರ, ಶಿವಕುಮಾರ್, ಗೀತಾಶ್ರೀ ಯೋಗಾನಂದ್, ಸೌಮ್ಯ ಉಮೇಶ್, ಶಾರದಮ್ಮ, ರೂಪ, ಛಾಯಾದೇ, ಕೆ.ಆರ್. ಕ್ಷೇತ್ರದ ಬಿಜೆಪಿ ಅಧ್ಯಕ್ಷ ವಡಿವೇಲು ಸೇರಿದಂತೆ ಇನ್ನಿತರರು ಹಾಜರಿದ್ದರು.