ಬೀದರ: ಸಂವಿಧಾನ ವಿರೋಧಿ ಪೌರತ್ವ ಸಂಶೋಧನಾ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ಸೋಮವಾರ ನಗರದಲ್ಲಿ ಮಾನವ ಬಂಧುತ್ವ ವೇದಿಕೆ ಹಾಗೂ ಯುವ ಚಿಂತಕರ ವೇದಿಕೆ ಆಶ್ರಯದಲ್ಲಿ ಸೈಕಲ್ ಜಾಥಾ ನಡೆಯಿತು.
ಶಹಾಪೂರಗೇಟ್, ನೌಬಾದ, ಮೈಲೂರು, ಗವಾನ ಚೌಕ್ ಹೀಗೆ ನಗರದ ವಿವಿಧಡೆಯಿಂದ ಆಗಮಿಸಿದ್ದ ಸೈಕಲ್ ಜಾಥಾದ ಕಾರ್ಯಕರ್ತರು ನಗರದ ಅಂಬೇಡ್ಕರ ವೃತ್ತದಲ್ಲಿ ಸೇರಿದರು. ಬಾಬಾ ಸಾಹೇಬರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ವೇದಿಕೆ ಜಿಲ್ಲಾ ಸಂಚಾಲಕ ಮಹೇಶಕುಮಾರ ಗೋರನಾಳಕರ್ ಚಾಲನೆ ನೀಡಿದರು. ಅಂಬೇಡ್ಕರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಜಾಥಾ ನಡೆಸಲಾಯಿತು.
ಬಳಿಕ ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಗೋರನಾಳಕರ್, ದೇಶದಲ್ಲಿರುವ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು, ಯುವಕರು, ವಿದ್ಯಾರ್ಥಿಗಳು ಸಂವಿಧಾನ ವಿರೋಧಿ ಪೌರತ್ವ ಸಂಶೋಧನಾ ಕಾಯ್ದೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಕಾಯ್ದೆಯಿಂದ ದೇಶದಲ್ಲಿ ಅಶಾಂತಿ ಮೂಡುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಕೂಡಲೇ ಪೌರತ್ವ ಕಾಯ್ದೆ ಹಿಂಪಡೆಯಬೇಕು. ಆ ಮೂಲಕ ದೇಶದಲ್ಲಿ ರಾಷ್ಟ್ರೀಯ ಭಾವೈಕ್ಯ ಮತ್ತು ಭಾತೃತ್ವ ಖಾಯಂಆಗಿ ಉಳಿಯುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಶ್ರೀಕಾಂತ ಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಬರೀ ದೇಶದ ಜನತೆಯನ್ನು ಒಡೆಯುವ ಹುನ್ನಾರ ಮಾಡುತ್ತಿದೆ. ಈ ಕಾಯ್ದೆಯಿಂದ ದೇಶದಲ್ಲಿ ಅಶಾಂತಿ ಮೂಡಿದೆ ಎಂದರು.
ಜಾಥಾದಲ್ಲಿ ವೇದಿಕೆಯ ರಾಜರತನ ಶಿಂಧೆ, ಸಂದೀಪ ಕಾಂಟೆ, ಸೈಯ್ಯದ್ ವಹೀದ ಲಖನ, ದಲಿತ ಮುಖಂಡರಾದ ರಾಜಕುಮಾರ ಮೂಲಭಾರತಿ, ರವಿಕುಮಾರ ವಾಘಮಾರೆ, ಮಲ್ಲಿಕಾರ್ಜುನ ಚಿಟ್ಟಾ, ಅಭಿ ಕಾಳೆ, ಉಮೇಶಕುಮಾರ ಸ್ವಾರಳ್ಳಿಕರ್, ಪವನ ಗುನ್ನಳ್ಳಿಕರ್, ಕಿಶೋರ ನವಲಸಪೂರಕರ್, ವಿನಯ ಮಾಳಗೆ, ಮುಬಾಶೀರ ಶಿಂಧೆ, ಸರ್ಫಾರಾಜ ಹಾಶ್ಮಿ, ವಿನೋದ ರತ್ನಾಕರ್, ಶೇಖ ಅನ್ಸಾರ್, ಗೌತಮ ಮುತ್ತಂಗೀರ್, ಶಿವಕುಮಾರ ಗುನ್ನಳ್ಳಿ, ಅಮರ ಅಲ್ಲಾಪೂರ, ಶಿವಕುಮಾರ ಮನ್ನಾಏಖೇಳ್ಳಿ, ಸಂಜುಕುಮಾರ ಬಲ್ಲೂರೆ, ರಾಜಕುಮಾರ ಡೊಂಗ್ರೆ, ಶಿವಕುಮಾರ ದೇವಕರ್, ನರಸಿಂಗ ದೊಡ್ಡಿ ಮತ್ತಿತರರು ಭಾಗವಹಿಸಿದ್ದರು.