Advertisement

CAA: ಸಿಎಎ ಜಾರಿ ಈಗ ಸುಪ್ರೀಂ ಕೋರ್ಟ್‌ ಅಂಗಳಕ್ಕೆ…

10:29 PM Mar 12, 2024 | Team Udayavani |

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ-2019ರ ಜಾರಿಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ಇದರ ಜಾರಿಗೆ ತಡೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.

Advertisement

ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ (ಐಯುಎಂಎಲ್‌) ಮತ್ತು ಡೆಮಾಕ್ರಟಿಕ್‌ ಯೂತ್‌ ಫೆಡರೇಶನ್‌ ಆಫ್ ಇಂಡಿಯಾ (ಡಿವೈಎಫ್ಐ) ಸಂಘಟನೆಗಳು ಅರ್ಜಿ ಸಲ್ಲಿಕೆ ಮಾಡಿವೆ. ಸಿಎಎ ಕಾನೂನು ಸಂವಿಧಾನ ವಿರೋಧಿಯಾಗಿದ್ದು, ಮುಸ್ಲಿಮರನ್ನು ತಾರತಮ್ಯ ಮಾಡುತ್ತದೆ. ಇದನ್ನು ಸ್ವೇಚ್ಛಾಚಾರದಿಂದ ಜಾರಿ ಮಾಡಲಾಗಿದೆ ಎಂದು ಈ ಸಂಘಟನೆಗಳು ಹೇಳಿದ್ದು, ಸಿಎಎ ಜಾರಿಗೆ ತಡೆ ನೀಡಬೇಕು ಎಂದು ಕೋರಿವೆ.

2019ರಲ್ಲಿ ಕಾಯ್ದೆಗೆ ಸಂಸತ್‌ ಒಪ್ಪಿಗೆ ನೀಡಿದ ಸಮಯದಲ್ಲೂ ಸಹ ಐಯುಎಂಎಲ್‌ ಸಂಘಟನೆ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ಇದು ಭಾರತದ ನಾಗರಿಕರಿಗೆ ಸಂವಿಧಾನ ನೀಡಿರುವ ಸಮಾನತೆಯ ಹಕ್ಕನ್ನು ಉಲ್ಲಂ ಸುತ್ತದೆ ಎಂದು ಸಂಘಟನೆ ವಾದಿಸಿತ್ತು.

ಸಿಎಎ ಅರ್ಜಿ ಸಲ್ಲಿಸಲು ಆನ್ಲ„ನ್‌ ಪೋರ್ಟಲ್‌ ಆರಂಭ:
2019ರ ಪೌರತ್ವ ತಿದ್ದುಪಡಿ ಕಾಯ್ದೆಯಡಿ ಭಾರತದ ಪೌರತ್ವಕ್ಕೆ ಅರ್ಜಿ ಸಲ್ಲಿಕೆ ಮಾಡುವುದಕ್ಕಾಗಿ ಕೇಂದ್ರ ಗೃಹ ಸಚಿವಾಲಯ ಆನ್ಲ„ನ್‌ ಪೋರ್ಟಲನ್ನು ಆರಂಭಿಸಿದೆ. ಸಿಎಎ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ಪೋರ್ಟಲ್‌ ಹಾಗೂ ಮೊಬೈಲ್‌ ಆ್ಯಪ್‌ಗೆ ಚಾಲನೆ ನೀಡಲಾಗಿದೆ. “indiancitizenshiponline.nic.in,’ ಪೋರ್ಟಲ್‌ ಅಗತ್ಯ ಮಾಹಿತಿ ಭರ್ತಿ ಮಾಡುವ ಮೂಲಕ ಅರ್ಹರು ಪೌರತ್ವಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು ಎಂದು ಸಚಿವಾಲಯದ ವಕ್ತಾರ ಹೇಳಿದ್ದಾರೆ. ಅಲ್ಲದೇ ಇದಕ್ಕಾಗಿ “ಸಿಎಎ-2019′ ಎಂಬ ಮೊಬೈಲ್‌ ಆ್ಯಪ್‌ ಸಹ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

9 ದಾಖಲಾತಿಗಳು:
ಪೌರತ್ವಕ್ಕೆ ಅರ್ಜಿ ಸಲ್ಲಿಸುವ ಅರ್ಹ ವ್ಯಕ್ತಿಗಳು ಪಾಕ್‌, ಬಾಂಗ್ಲಾ, ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದಿದ್ದು ಎಂಬುದನ್ನು ಸಾಬೀತು ಮಾಡಲು 9 ದಾಖಲೆಗಳನ್ನು ಸಲ್ಲಿಸಬಹುದು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಈ ದೇಶಗಳು ನೀಡಿರುವ ಪಾಸ್‌ಪೋರ್ಟ್‌ಗಳು, ಭೂದಾಖಲೆ ಪ್ರಮಾಣ ಪತ್ರಗಳು, ಪೂರ್ವಜರು ಈ ದೇಶಗಳ ಪ್ರಜೆಗಳಾಗಿದ್ದರು ಎಂಬ ದಾಖಲೆಗಳು, ಈ ದೇಶಗಳು ನೀಡಿರುವ ಪರವಾನಗಿಗಳನ್ನು ಸಲ್ಲಿಸಬಹುದು ಎಂದು ಸರ್ಕಾರ ಹೇಳಿದೆ. ಅಲ್ಲದೇ 2014ಕ್ಕಿಂತ ಮೊದಲು ಭಾರತಕ್ಕೆ ಬಂದಿದ್ದಾರೆ ಎನ್ನುವುನ್ನು ಸಾಬೀತು ಮಾಡುವ ಇಮಿಗ್ರೇಶನ್‌ ಸ್ಟಾಂಪ್‌, ಸ್ಥಳೀಯ ಸರ್ಕಾರಗಳು ನೀಡಿರುವ ದಾಖಲಾತಿಗಳನ್ನು ಒದಗಿಸಬಹುದು ಎಂದು ತಿಳಿಸಲಾಗಿದೆ.

Advertisement

ಸಿಎಎ ಜಾರಿಗೆ ಸ್ಟಾಲಿನ್‌, ಮಮತಾ ವಿರೋಧ
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಮಿಳುನಾಡು ಹಾಗೂ ಪಶ್ವಿ‌ಮಬಂಗಾಳ ಮುಖ್ಯಮಂತ್ರಿಗಳು ಮತ್ತೂಮ್ಮೆ ವಿರೋಧಿಸಿದ್ದಾರೆ. ತಮಿಳುನಾಡಿನಲ್ಲಿ ಜಾರಿ ಮಾಡುವುದಿಲ್ಲ ಎಂದು ಸ್ಟಾಲಿನ್‌ ಹೇಳಿದ್ದರೆ, ಅರ್ಜಿ ಸಲ್ಲಿಸುವ ಮೊದಲು ಯೋಚಿಸಿ ಎಂದು ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದಾರೆ.

ಕಾಯ್ದೆಯಿಂದ ದೇಶಕ್ಕೆ ಯಾವುದೇ ಲಾಭವಿಲ್ಲ. ಆದರೆ ಇದು ಜನರ ನಡುವೆ ತಾರತಮ್ಯ ಭಾವನೆಯನ್ನು ಮೂಡಿಸುತ್ತದೆ. ರಾಜ್ಯ ಸರ್ಕಾರ ಇದನ್ನು ವಿರೋಧಿಸುತ್ತದೆ. ಇದನ್ನು ರಾಜ್ಯದಲ್ಲಿ ಜಾರಿಯಾಗಲು ಬಿಡುವುದಿಲ್ಲ ಎಂದು ಸಿಎಂ ಎಂ.ಕೆ.ಸ್ಟಾಲಿನ್‌ ಹೇಳಿದ್ದಾರೆ. ಇದೇ ವೇಳೆ ಸಿಎಎ ಕಾಯ್ದೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದನ್ನು ಸರ್ಕಾರ ಮನ್ನಿಸಬಾರದು ಎಂದು ಸೂಪರ್‌ಸ್ಟಾರ್‌ ವಿಜಯ್‌ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಎಐಎಡಿಎಂಕೆ ಸಹ ಈ ಕಾಯ್ದೆಯನ್ನು ವಿರೋಧಿಸಿದ್ದು, ಇದು ಐತಿಹಾಸಿಕ ಪ್ರಮಾದ ಎಂದು ಹೇಳಿದೆ.

ಎನ್‌ಆರ್‌ಸಿಗೆ ಅರ್ಜಿ ಸಲ್ಲಿಸದವರು ಪೌರತ್ವಕ್ಕೆ ಅರ್ಜಿ ಸಲ್ಲಿಸಿದರೆ ರಾಜೀನಾಮೆ: ಹಿಮಂತ
ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಗೆ ಅರ್ಜಿ ಸಲ್ಲಿಸದವರು ಈಗ ಪೌರತ್ವ ಪಡೆದರೆ ನಾನೇ ಮೊದಲು ರಾಜೀನಾಮೆ ನೀಡುತ್ತೇನೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದಿರುವ ಮುಸ್ಲಿಮೇತರ ಪ್ರಜೆಗಳಿಗೆ ಯಾವುದೇ ದಾಖಲೆಗಳಿಲ್ಲದೇ ಸಿಎಎ ಪೌರತ್ವವನ್ನು ನೀಡುತ್ತದೆ. ಹೀಗಾಗಿ ಈ ಕಾಯ್ದೆ ಬಂದರೆ ಲಕ್ಷಾಂತರ ವಲಸಿಗರು ಭಾರತಕ್ಕೆ ಬರುತ್ತಾರೆ ಎಂಬ ಆರೋಪಗಳು ಕೇಳಿಬಂದಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಶರ್ಮಾ, ಈ ರೀತಿ ನಡೆದರೆ ನಾನೇ ಮೊದಲು ವಿರೋಧಿಸುತ್ತೇನೆ. ನಾನು ಅಸ್ಸಾಂ ಮಣ್ಣಿನ ಮಗನಾಗಿದ್ದು, ಎನ್‌ಆರ್‌ಸಿಗೆ ಅರ್ಜಿ ಸಲ್ಲಿಸದವರು ಸಿಎಎಗೆ ಅರ್ಜಿ ಸಲ್ಲಿಸಿದರೆ ನಾನೇ ಮೊದಲು ರಾಜೀನಾಮೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ವೋಟ್‌ ಬ್ಯಾಂಕ್‌ಗಾಗಿ ಕಾಂಗ್ರೆಸ್‌ನಿಂದ ಸಿಎಎಗೆ ವಿರೋಧ: ಅಮಿತ್‌ ಶಾ
ಕೇಂದ್ರ ಸರ್ಕಾರ ಜಾರಿ ಮಾಡಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವೋಟ್‌ ಬ್ಯಾಂಕ್‌ ಮತ್ತು ತುಷ್ಟೀಕರಣ ರಾಜಕಾರಣಕ್ಕಾಗಿ ಕಾಂಗ್ರೆಸ್‌ ವಿರೋಧಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ನಾವು ಸಿಎಎ ಜಾರಿ ಮಾಡುವುದಾಗಿ ಹೇಳಿದೆವು. ಆದರೆ ಕಾಂಗ್ರೆಸ್‌ ಅದನ್ನು ವಿರೋಧಿಸಿತು. ಭಾರತಕ್ಕೆ ವಲಸೆ ಬಂದವರಿಗೆ ಧರ್ಮಾಧರಿತವಾಗಿ ಪೌರತ್ವ ನೀಡಬೇಕು ಎಂಬುದು ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್‌ ಹಾಗೂ ಸಂವಿಧಾನ ಕತೃìಗಳ ವಾಗ್ಧಾನವಾಗಿತ್ತು. ಆದರೆ ಈಗ ವೋಟ್‌ಬ್ಯಾಂಕ್‌ಗಾಗಿ ಕಾಂಗ್ರೆಸ್‌ ಇದನ್ನು ವಿರೋಧಿಸುತ್ತಿದೆ ಎಂದು ಅವರು ಹೇಳಿದರು.

ಸಿಎಎ ಜಾರಿ ಮಾಡಿದ್ದಕ್ಕೆ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ ಅಮಿತ್‌ ಶಾ, ದೇಶಕ್ಕೆ ವಲಸೆ ಬಂದಿರುವವರಿಗೆ ಪೌರತ್ವ ನೀಡದಿದ್ದರೆ ಅವರನ್ನು ಅವಮಾನಿಸಿದಂತಾಗುತ್ತದೆ. ಸಿಎಎ ಜಾರಿ ಮಾಡುವ ಮೂಲಕ ಪ್ರಧಾನಿ ಮೋದಿ ಅವರು ಹಿಂದೂ, ಬೌದ್ಧ, ಸಿಖ್‌ ಮತ್ತು ಜೈನ ಸಮುದಾಯದವರನ್ನು ಮೋದಿ ಗೌರವಿಸಿದ್ದಾರೆ. ಸಿಎಎ ಜಾರಿಯಿಂದ ಅಲ್ಪಸಂಖ್ಯಾತ ಸಮುದಾಯದ ಪ್ರಜೆಗಳು ಯಾವುದೇ ಕಾರಣಕ್ಕೂ ಪೌರತ್ವವನ್ನು ಕಳೆದುಕೊಳ್ಳುವುದಿಲ್ಲ ಎಂದು ಅಮಿತ್‌ ಶಾ ಹೇಳಿದರು.

ಸಾವಿರ ಬಾರಿ ಯೋಚಿಸಿ
ಒಮ್ಮೆ ನೀವು ಸಿಎಎಗೆ ಅರ್ಜಿ ಸಲ್ಲಿಸಿದ ಕೂಡಲೇ ನೀವು ವಲಸಿಗರು ಎಂಬುದು ಸರ್ಕಾರಕ್ಕೆ ತಿಳಿಯುತ್ತದೆ. ತಕ್ಷಣವೇ ನಿಮ್ಮನ್ನು ಬಂಧಿಸಲಾಗುತ್ತದೆ. ಹೀಗಾಗಿ ಪೌರ ತ್ವಕ್ಕೆ ಅರ್ಜಿ ಸಲ್ಲಿ ಸುವ ಮುನ್ನ ಸಾವಿರ ಬಾರಿ ಯೋಚಿಸಿ.
– ಮಮತಾ ಬ್ಯಾನರ್ಜಿ, ಪ.ಬಂಗಾಳ ಸಿಎಂ

ಭಾರತದ ಮುಸ್ಲಿಮರು ಸ್ವಾಗತಿಸಬೇಕು
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯನ್ನು ಭಾರತದ ಮುಸ್ಲಿಮರು ಸ್ವಾಗತಿಸಬೇಕು. ಇದನ್ನು ಈ ಮೊದಲೇ ಜಾರಿ ಮಾಡಬೇಕಿತ್ತು. ಇದಕ್ಕೆ ಸಂಬಂಧಿಸಿದಂತೆ ಮುಸ್ಲಿಮರಲ್ಲಿ ಸಾಕಷ್ಟು ಗೊಂದಲಗಳಿವೆ. ಇದು ಮುಸ್ಲಿಮರಿಗೆ ಯಾವುದೇ ಹಾನಿ ಮಾಡುವುದಿಲ್ಲ.
– ಮೌಲಾನಾ ಶಹಾಬುದ್ದೀನ್‌, ಅಖೀಲ ಭಾರತ ಮುಸ್ಲಿಂ ಜಮಾತ್‌ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next