ಹೊಳೆಹೊನ್ನೂರು: ಸಮೀಪದ ಹಂಚಿನ ಸಿದ್ದಾಪುರದಲ್ಲಿ ಸುಶೀಲಮ್ಮ ಎಂಬುವರ 30 ಗ್ರಾಂ ಚಿನ್ನಾಭರಣಕ್ಕೆ ಪಾಲಿಶ್ ಹಾಕಿಕೊಡುವುದಾಗಿ ನಂಬಿಸಿ ಇಬ್ಬರು ಅಪರಿಚಿತರು ಎಗರಿಸಿಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.
ಮನೆಯ ಮುಂದೆ ಬಟ್ಟೆ ಒಗೆಯುತ್ತಿದ್ದ ಸುಶೀಲಮ್ಮರ ಬಳಿ ಬೈಕ್‌ನಲ್ಲಿ ಬಂದ ಅಪರಿಚಿತರಿಬ್ಬರು ಹಿತ್ತಾಳೆ, ಬೆಳ್ಳಿ ಸಾಮಾಗ್ರಿಗಳಿಗೆ ಪಾಲಿಶ್ ಹಾಕ್ತೀವಿ ಪಾತ್ರೆಗಳು ಆಭರಣಗಳು ಇದ್ದರೆ ಕೊಡಿ ಎಂದು ಪೌಡರ್ ತೋರಿಸಿದ್ದಾರೆ.
ಯಾವ ಪಾತ್ರೆನೂ ಇಲ್ಲ ನಡೆಯಿರಿ ಎಂದು ಮಹಿಳೆ ಹೇಳಿದ್ದಾಳೆ. ಅಷ್ಟರಲ್ಲಿ ಹೊರಗೆ ಬಂದ ಗೋವಿಂದಮ್ಮಳನ್ನು ಕಂಡ ಸುಶೀಲಮ್ಮ ಈ ಇಬ್ಬರು ಪೌಡರ್ ತೋರಿಸಿ ಪಾಲಿಶ್ ಮಾಡಿಕೊಡುವುದಾಗಿ ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಗೋವಿಂದಮ್ಮನಿಗೂ ಈ ಅಪರಿಚಿತರು ಪಾಲಿಶ್ ಮಾಡಿಕೊಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಸ್ವಾತಂತ್ರ್ಯದ ಅಮೃತೋತ್ಸವ : 75 ಲಕ್ಷ ಮನೆಗಳ ಮೇಲೆ ತ್ರಿವರ್ಣ ಧ್ವಜಾರೋಹಣ : ಎನ್.ರವಿಕುಮಾರ್
ಅಷ್ಟರಲ್ಲಿ ಒಂದು ಪಾತ್ರೆ ಹಿಡಿದುಕೊಂಡು ಬಂದ ಗೋವಿಂದಮ್ಮರಿಗೆ ಪಾತ್ರೆಯನ್ನು ಲಕಲಕಾ ಅಂತ ಹೊಳೆಯುವಂತೆ ಮಾಡಿಕೊಟ್ಟಿದ್ದಾರೆ. ಉಂಗುರವನ್ನೂ ತೊಳೆದುಕೊಟ್ಟಿದ್ದಾರೆ. ಯಾವಾಗ ಗೋವಿಂದಮ್ಮ ಪಾತ್ರೆ ಮತ್ತು ಉಂಗುರವನ್ನು ತೆಗೆದುಕೊಂಡು ಮನೆಗೆ ತೆರಳುತ್ತಿದ್ದಂತೆ ಸುಶೀಲಮ್ಮರ ಮಾಂಗಲ್ಯ ಸರ ಕೊಡಮ್ಮ ಪಾಲಿಶ್ ಮಾಡಿಕೊಡ್ತೀವಿ ಎಂದು ಹೇಳಿದ್ದಾರೆ.
ಗೋವಿಂದಮ್ಮರ ಪಾಲಿಶ್ ಮಾಡಿಕೊಟ್ಟಿರುವುದನ್ನು ಕಂಡು ನಂಬಿಕೆ ಹುಟ್ಟಿಸಿಕೊಂಡ ಸುಶೀಲಮ್ಮ ಮಾಂಗಲ್ಯ ಸರವನ್ನು ಅಪರಿಚಿತರ ಕೈಗೆ ಇಟ್ಟಿದ್ದಾರೆ. ಕೈಗೆ ಇಡುತ್ತಿದ್ದಂತೆ ಒಂದು ಲೋಟ ನೀರು ತೆಗೆದುಕೊಂಡು ಬಾರಮ್ಮಎನ್ನುತ್ತಿದ್ದಂತೆ ಅಪರಿಚಿತರು ಮಹಿಳೆ ಮನೆಯೊಳಗೆ ಕಾಲಿಡುತ್ತಿದ್ದಂತೆ ಪರಾರಿಯಾಗಿದ್ದಾರೆ.
ಎಲ್ಲಡೆ ಹುಡುಕಿದರೂ ಅಪರಿಚಿತರು ಕಾಣದೆ ಇರುವುದರಿಂದ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸುಶೀಲಮ್ಮ 1 ಲಕ್ಷದ 20 ಸಾವಿರ ರೂ ಮೌಲ್ಯದ ಚಿನ್ನಾಭರಣ ಕಳುವಾಗಿರುವುದಾಗಿ ದೂರು ದಾಖಲಿಸಿದ್ದಾರೆ.