Advertisement

ಚುನಾವಣಾ ಅಕ್ರಮ ತಡೆಗೆ ಸಿ-ವಿಜಿಲ್‌

11:11 AM Mar 14, 2019 | Team Udayavani |

ಕೊಪ್ಪಳ: ಲೋಕಸಭಾ ಚುನಾವಣೆಯಲ್ಲಿ ಪಕ್ಷ, ಅಭ್ಯರ್ಥಿಗಳು ಅಕ್ರಮ ಹಣದ ವಹಿವಾಟು, ನೀತಿ ಸಂಹಿತೆ ಉಲ್ಲಂಘನೆ ಸೇರಿ ಇತರೆ ಅನಧಿಕೃತ ಚಟುವಟಿಕೆಗಳ ತಡೆಗೆ ಭಾರತ ಚುನಾವಣಾ ಆಯೋಗ ಮೊಟ್ಟ ಮೊದಲ ಬಾರಿಗೆ ಸಿ-ವಿಜಿಲ್‌ ಆ್ಯಪ್‌ ಒಂದನ್ನು ಅನುಷ್ಠಾನಗೊಳಿಸಿದೆ. ದೇಶದ ಜನ ಸಾಮಾನ್ಯನೂ ನಿಂತ ಸ್ಥಳದಲ್ಲಿಯೇ ಈ ಆ್ಯಪ್‌ ಮೂಲಕ ಅಕ್ರಮದ ದೂರು ಕೊಡಲು ಅವಕಾಶವಿದೆ.

Advertisement

ದೇಶದಲ್ಲಿ 16ನೇ ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ದೇಶಾದ್ಯಂತ ನೀತಿ ಸಂಹಿತೆ
ಜಾರಿಯಲ್ಲಿದೆ. ರಾಷ್ಟ್ರೀಯ, ಪ್ರಾದೇಶಿಕ ಹಾಗೂ ಸ್ಥಳೀಯ ಪಕ್ಷಗಳು ಆಕಾಂಕ್ಷಿ, ಅಭ್ಯರ್ಥಿಗಳ ಆಯ್ಕೆಯಲ್ಲಿ ತಲ್ಲೀನವಾಗಿವೆ. ಪ್ರತಿ ಚುನಾವಣೆಯಲ್ಲಿಯೂ ಮತದಾರನ ಮೇಲೆ ಪ್ರಭಾವ ಬೀರಲು ಹಾಗೂ ಓಟು ಕೇಳಲು ಅವರಿಗೆ ವಿವಿಧ ಆಮಿಷ ಒಡ್ಡುವುದು ಎಲ್ಲೆಡೆಯೂ ಕೇಳಿ ಬರುತ್ತಿವೆ. ಚುನಾವಣಾ ಆಯೋಗ ಎಷ್ಟೇ ಕಟ್ಟು ನಿಟ್ಟಿನ ನೀತಿ, ವಿವಿಧ ಸ್ಕ್ತ್ರ್ಯಾ ಡ್‌, ಸಮಿತಿ, ವಿಚಕ್ಷಣ ದಳ ರಚನೆ ಮಾಡಿ ನಿಯಮ ಜಾರಿ ಮಾಡಿದ್ದರೂ ಅದರ ಕಣ್ತಪ್ಪಿಸಿ ಅಭ್ಯರ್ಥಿಗಳು, ಪಕ್ಷಗಳ ಬೆಂಬಲಿಗರು ನೀತಿ ಸಂಹಿತೆ ಉಲ್ಲಂಘನೆ ಮಾಡಿ ಅನಧಿಕೃತವಾಗಿ ಜನರಿಗೆ ಹಣ ಹಂಚುವುದು, ಸಾಮಗ್ರಿ ನೀಡುವ ಮೂಲಕ ಓಟು ಪಡೆಯುವ ಮಾತು ಹಲವೆಡೆ ಸಾಮಾನ್ಯವಾಗುತ್ತಿದೆ.

ಇದನ್ನು ತಡೆಗಟ್ಟುವ ಉದ್ದೇಶದಿಂದಲೇ ಚುನಾವಣಾ ಆಯೋಗವು ಆಧುನಿಕ ತಾಂತ್ರಿಕತೆಗೆ ಕಾಲಿಡುತ್ತಿದೆ. ಈ ಮೊದಲು ಜಿಲ್ಲಾ, ತಾಲೂಕು, ಬೂತ್‌ ಮಟ್ಟದ ಅಧಿ ಕಾರಿಗಳನ್ನು ನಿಯೋಜಿಸಿ ಅಕ್ರಮದ ಬಗ್ಗೆ ನಿಗಾ ವಹಿಸುತ್ತಿತ್ತು. ಅಧಿ ಕಾರಿಗಳೊಟ್ಟಿಗೆ ಜನ ಸಾಮಾನ್ಯನೂ ಚುನಾವಣಾ ಅಕ್ರಮದಲ್ಲಿ ತೊಡಗುವ, ವ್ಯಕ್ತಿ ಹಾಗೂ ಪಕ್ಷಗಳ ವಿರುದ್ಧ ದೂರು ನೀಡಲು ‘ಸಿ-ವಿಜಿಲ್‌’ ಎನ್ನುವ ಆ್ಯಪ್‌ ಒಂದನ್ನು ಸಿದ್ಧಪಡಿಸಿ ಜಾರಿ ಮಾಡಿದೆ. ಆಯಾ ವಿಧಾನಸಭಾ, ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ
ಏನಾದರೂ ಚುನಾವಣಾ ಅಕ್ರಮದ ದೂರುಗಳಿದ್ದರೂ ಕಚೇರಿಗೆ ಬಂದು ಕೊಡಬೇಕೆಂದಿಲ್ಲ. ಆ್ಯಪ್‌ ಮೂಲಕ ಅಪ್‌ಲೋಡ್‌ ಮಾಡಬಹುದು.

ಸಿವಿಜಿಲ್‌ ಹೇಗೆ ಕೆಲಸ ಮಾಡುತ್ತೆ?: ಸಿ-ವಿಜಿಲ್‌ ಆ್ಯಪ್‌ ಅನ್ನು ಜನ ಸಾಮಾನ್ಯನು ಪ್ಲೇ ಸ್ಟೋರ್‌ಗೆ ತೆರಳಿ ಡೌನ್‌ ಲೋಡ್‌ ಮಾಡಿಕೊಳ್ಳಬಹುದು. ಅದರಲ್ಲಿ ಎರಡು ರೀತಿಯ ಆಯ್ಕೆಗಳಿದ್ದು, ಒಂದು ನಿಮ್ಮ ಹೆಸರು, ಫೋನ್‌ ನಂಬರ್‌ ನೋಂದಣಿ ಮಾಡಿಕೊಳ್ಳಬೇಕು. ನಂತರ ರಾಜ್ಯ, ಜಿಲ್ಲೆ ಆಯ್ಕೆ ಮಾಡಿ ವಿಧಾನಸಭಾ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬೇಕು. ಆಗ ನೀವು ಅಧಿಕೃತ ನೋಂದಣಿದಾರರಾಗುತ್ತೀರಿ. 2ನೇಯದ್ದು ಗೌಪ್ಯ ವ್ಯಕ್ತಿ ಎಂದಾದರೂ ನೋಂದಣಿ ಮಾಡಿಕೊಳ್ಳಬಹುದು. ಇಲ್ಲಿ ನಿಮ್ಮ ಹೆಸರು ನೋಂದಣಿಯಾಗಲ್ಲ. ನೀವು ಇದ್ದ ಸ್ಥಳದಲ್ಲಿ ಏನಾದರೂ ನೀತಿ ಸಂಹಿತೆ ಉಲ್ಲಂಘನೆ, ಅಕ್ರಮ ಚಟುವಟಿಕೆ ನಡೆದರೆ ಆ್ಯಪ್‌ ಮೂಲಕವೇ ತಕ್ಷಣ ಫೋಟೋ ಅಥವಾ ವೀಡಿಯೋ ಮಾಡಿ ಅಪ್‌ಲೋಡ್‌ ಮಾಡಬಹುದು. ನೀವು ಹೆಸರು ನೋಂದಣಿ ಮಾಡಿಕೊಂಡಿದ್ದರೆ ನಿಮ್ಮ ಹೆಸರಿನಡಿ ಸಿವಿಜಿಲ್‌ನಲ್ಲಿ ದೂರು ದಾಖಲಾಗುತ್ತದೆ. ಒಂದು ವೇಳೆ ಗೌಪ್ಯ ವ್ಯಕ್ತಿ ಎಂದು ನೋಂದಣಿಯಾದರೆ ದೂರು ದಾಖಲಾಗಿರುತ್ತದೆ. ಆದರೆ ನಿಮ್ಮ ಹೆಸರಿನಡಿ ದೂರು ದಾಖಲಾಗಿರಲ್ಲ.

ವೆಬ್‌ಸೈಟ್‌ನಲ್ಲಿ ದೂರು ದಾಖಲು: ನೀವು ಆ್ಯಪ್‌ ಮೂಲಕ ಮಾಡಿದ ದೂರು ಆನ್‌ಲೈನ್‌ ಮೂಲಕವೇ ನೇರವಾಗಿ ಆಯಾ ಜಿಲ್ಲಾ ಮಟ್ಟದ ತಂಡದ ವೆಬ್‌ ಸೈಟ್‌ನಲ್ಲಿ ದಾಖಲಾಗುತ್ತದೆ. ಆ ತಂಡವು ನೀವು ಯಾವ ಕ್ಷೇತ್ರದಿಂದ ದೂರು ಕೊಟ್ಟಿದ್ದೀರಿ ಎಂದು ಪರಿಶೀಲನೆ ಮಾಡಿ ಆಯಾ ಸಂಬಂಧಿಸಿದ ಚುನಾವಣಾ ಅಧಿಕಾರಿಗೆ ದೂರು ವರ್ಗಾವಣೆ ಮಾಡಿ ವಿವಿಧ ಹಂತದಲ್ಲಿ ಪರಿಶೀಲನೆ ಮಾಡುತ್ತಿರುತ್ತಾರೆ. ನಿಮ್ಮ ಹೆಸರಿನಡಿ ದೂರು ದಾಖಲಾಗಿದ್ದರೆ ದೂರಿನ ಸ್ಥಿತಿಗತಿ ನಿಮಗೆ ಕಾಲ ಕಾಲಕ್ಕೆ ಮಾಹಿತಿ ತಿಳಿಯುತ್ತ ಹೋಗುತ್ತದೆ. ಒಂದು ವೇಳೆ ಗೌಪ್ಯವಾಗಿ ದೂರು ದಾಖಲಿಸಿದ್ದರೆ, ನಿಮಗೆ ದೂರಿನ ಸ್ಥಿತಿಗತಿ ತಿಳಿಯಲ್ಲ. ಆದರೆ ಅಧಿಕಾರಿ ಹಂತದಲ್ಲಿಯೇ ಅದರ ಕ್ರಮದ ಪ್ರಕ್ರಿಯೆ ನಡೆಯುತ್ತಿರುತ್ತದೆ.

Advertisement

ಒಟ್ಟಿನಲ್ಲಿ ಚುನಾವಣಾ ಆಯೋಗವೂ ಅಭ್ಯರ್ಥಿಗಳ ಮೇಲೆ ವಿವಿಧ ಪಕ್ಷಗಳ ಕಾರ್ಯ ವೈಖರಿ ಮೇಲೆ ನಿಗಾ ವಹಿಸಲು ಆಧುನಿಕತೆಗೆ ತಕ್ಕಂತೆ ಕಾರ್ಯ ನಿರ್ವಹಿಸುತ್ತಿದ್ದು, ಎಷ್ಟರ ಮಟ್ಟಿಗೆ ಅಕ್ರಮದ ಮೇಲೆ ನಿಗಾ ವಹಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಭಾರತ ಚುನಾವಣಾ ಆಯೋಗ ಮೊದಲ ಬಾರಿಗೆ ಸಿ-ವಿಜಿಲ್‌ ಆ್ಯಪ್‌ ಜಾರಿ ಮಾಡಿದೆ. ಇದರಿಂದ ಚುನಾವಣೆಯಲ್ಲಿ ಅಕ್ರಮ ನಡೆದರೆ, ನೀತಿ ಸಂಹಿತೆ ಉಲ್ಲಂಘನೆಯಾದರೆ ಈ ಆ್ಯಪ್‌ ಮೂಲಕ ಜನ ಸಾಮಾನ್ಯನೂ ನೇರವಾಗಿ ಫೋಟೋ, ವೀಡಿಯೋ ಸಮೇತ ದೂರು ನೀಡಬಹುದು. ಆ್ಯಪ್‌ನಲ್ಲಿ ಎರಡು ರೀತಿಯ ಆಯ್ಕೆಗಳಿವೆ. ಇದರ ಕುರಿತು ನಾವು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ.
ಪಿ.ಸುನೀಲ್‌ ಕುಮಾರ,
ಜಿಲ್ಲಾ ಚುನಾವಣಾಧಿಕಾರಿ, ಕೊಪ್ಪಳ

ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next