ಚಿತ್ರದುರ್ಗ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಏನೇನು ಮಾಡುತ್ತಿದ್ದರು ಅನ್ನೋದನ್ನು ನೆನಪಿಸಿಕೊಂಡು ಈಗ ಆರೋಪ ಮಾಡುತ್ತಿದ್ದಾರೆ. ಪರ್ಸೆಂಟೇಜ್ ಸರ್ಕಾರ ಅವರದ್ದು. ಆಗ ಎಲ್ಲದಕ್ಕೂ ದುಡ್ಡು ಕೊಡಬೇಕಾಗಿತ್ತು. ಅದನ್ನು ನಮ್ಮ ಮೇಲೆ ಹೊರಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
ಸೋಮವಾರ ರಾತ್ರಿ ಮುರುಘಾ ಮಠಕ್ಕೆ ಆಗಮಿಸಿ ಡಾ.ಶ್ರೀ. ಶಿವಮೂರ್ತಿ ಮುರುಘಾ ಶರಣರಿಂದ ಆಶೀರ್ವಾದ ಪಡೆದು ಸುದ್ದಿಗಾರರ ಜತೆ ಮಾತನಾಡಿದರು. ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿಯವರು ಹೆದರಿಸುತ್ತಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಕ್ಕೆ ತಿರುಗೇಟು ನೀಡಿದ ಸಿ.ಟಿ. ರವಿ, ಹೆದರಿಸಿ ಬೆದರಿಸಿ ರಾಜಕಾರಣ ಮಾಡೋದು ಕನಕಪುರದ ಸ್ಟೈಲ್. ಪ್ರಜಾಪ್ರಭುತ್ವದಲ್ಲಿ ಹೆದರಿಸುವುದು, ಜಾತಿ ನಿಂಧನೆ ಪ್ರಕರಣ ದಾಖಲಿಸುವುದು, ಮನೆಗಳ ಮೇಲೆ ಕಲ್ಲು ತೂರುವುದು ಬಿಜೆಪಿ ಸಂಸ್ಕೃತಿ ಅಲ್ಲ. ಇವೆಲ್ಲವೂ ಕನಕಪುರದ ಸಂಸ್ಕೃತಿಯನ್ನು ರಾಜ್ಯಾದ್ಯಂತ ವಿಸ್ತರಿಸಲು ನಾವು ಅವಕಾಶ ಕೊಡುವುದಿಲ್ಲ ಎಂದರು.
ನೆರೆ ಸಂತ್ರಸ್ತರ ನೆರವಿಗೆ ಸರ್ಕಾರ ಸರಿಯಾಗಿ ಧಾವಿಸಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಎಲ್ಲ ಸಚಿವರು, ಉಸ್ತುವಾರಿಗಳು ನೆರೆ ಸಂತ್ರಸ್ಥರಿಗೆ ನೆರವಾಗುತ್ತಿದ್ದಾರೆ. ಮುಖ್ಯಮಂತ್ರಿಗಳು ಕೂಡಾ ನೆರವಿಗೆ ಇದ್ದಾರೆ. ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದಾರೆ. ಅಗತ್ಯ ಹಣಕಾಸಿನ ನೆರವು ಆಗಿದೆ ಎಂದು ತಿಳಿಸಿದರು.
ನೆರೆಯಲ್ಲಿ ಸರ್ಕಾರದ ಪಾತ್ರವಿಲ್ಲ. ಅದು ಪ್ರಕೃತಿಯಿಂದ ಆಗಿದ್ದು, ಆದರೆ, ನೆರೆಯಲ್ಲಿ ಸಂತ್ರಸ್ಥರಾದವರಿಗೆ ನೆರವಾಗುವುದು ಸರ್ಕಾರದ ಜವಾಬ್ದಾರಿ. ಅದನ್ನು ಸಮರ್ಥವಾಗಿ ಮಾಡುತ್ತಿದ್ದೇವೆ. ಒಂದು ಕಡೆ ಕೋವಿಡ್, ಮತ್ತೊಂದು ಕಡೆ ನೆರೆ ಇದೆ. ಆದರೂ ಸರ್ಕಾರ ಎಲ್ಲವನ್ನೂ ನಿಭಾಯಿಸುತ್ತಾ, ಎಲ್ಲರಿಗೂ ಸ್ಪಂದಿಸುತ್ತಿದೆ ಎಂದರು.
ವಿಧಾನ ಪರಿಷತ್ತು, ರಾಜ್ಯಸಭೆಯನ್ನು ವ್ಯಾಪಾರಕ್ಕಿಟ್ಟ ಪಕ್ಷಗಳು ಇದ್ದವು. ಕುದುರೆ ಜೂಜು ಆಡುವವರನ್ನು ಕರೆತಂದು ರಾಜ್ಯಸಭೆ, ವಿಧಾನಸಭೆ ಸದಸ್ಯರನ್ನಾಗಿ ಮಾಡಿದ ಇತಿಹಾಸ ನೋಡಿದ್ದೇವೆ. ಆದರೆ, ಬಾಡಿಗೆ ಮನೆಯಲ್ಲಿರುವ ಸಾಮಾನ್ಯ ಕಾರ್ಯಕರ್ತರನ್ನು ವಿಧಾನ ಪರಿಷತ್, ರಾಜ್ಯಸಭೆ ಸದಸ್ಯರನ್ನಾಗಿ ಮಾಡಿದ್ದು ಬಿಜೆಪಿ. ನಮ್ಮ ಪಕ್ಷದ ಮಾಲಿಕರು ಕಾರ್ಯಕರ್ತರು. ಬೇರೆ ಬೇರೆ ಪಕ್ಷಗಳಿಗೆ ಬೇರೆ ಬೇರೆ ಮಾಲಿಕರಿದ್ದಾರೆ. ಆದರೆ, ನಮಗೆ ಕಾರ್ಯಕರ್ತರೇ ಮಾಲಿಕರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.