ವಿಧಾನಸಭೆ: ಅರಸಿಕೆರೆ ಶಾಸಕ ಶಿವಲಿಂಗೇಗೌಡರನ್ನು ಸುತ್ತುವರಿದ ದುರ್ಯೋಧನಾದಿಗಳು ಯಾರು ? ಇಂಥದ್ದೊಂದು ಪ್ರಶ್ನೆಯ ಸುತ್ತ ವಿಧಾನಸಭೆಯಲ್ಲಿ ಸೋಮವಾರ ಸ್ವಾರಸ್ಯಕರ ಚರ್ಚೆ ನಡೆಯಿತು.
ವಂದನಾ ನಿರ್ಣಯ ಮಂಡಿಸಿ ಶಾಸಕ ಸಿ.ಟಿ.ರವಿ ಮಾತನಾಡುತ್ತಿದ್ದಾಗ ಶಿವಲಿಂಗೇಗೌಡ ಸದನಕ್ಕೆ ಆಗಮಿಸಿದರು. ಅರಸಿಕೆರೆಯಲ್ಲಿ ನಡೆದ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಹಾಜರಿದ್ದ ಸದಸ್ಯರು ಅವರತ್ತ ಲಕ್ಷ್ಯ ಹರಿಸಿದಾಗ “ಶಿವಲಿಂಗೇಗೌಡರು ಎಣ್ಣೆ ಬರುವಾಗ ಕಣ್ಣು ಮುಚ್ಚಿಕೊಂಡರು. ಹೀಗಾಗಿ ಅವರಿಗೆ ದ್ವಂದ್ವ ಕಾಡುತ್ತಿದೆ. ಅವರೀಗ ಡಬಲ್ ಮೂಡ್‌ನಲ್ಲಿ ಇದ್ದಾರೆ. ಈ ಹಿಂದೆ ನನ್ನ ಮಾತನ್ನು ಕೇಳಿದ್ದರೆ ಈ ರೀತಿ ಆಗುತ್ತಿರಲಿಲ್ಲ ‘ ಎಂದು ಸಿ.ಟಿ.ರವಿ ಕುಟುಕಿದರು. ಇದಕ್ಕೆ ಆರ್.ಅಶೋಕ, ಬಸನಗೌಡ ಪಾಟೀಲ್ ಯತ್ನಾಳ್, ವೀರಣ್ಣ ಚರಂತಿಮಠ ಮೊದಲಾದವರು ಧ್ವನಿಗೂಡಿಸಿದರು.
ಇಷ್ಟು ಸಾಲದು ಎಂಬಂತೆ “ಶಿವಲಿಂಗೇಗೌಡರು ಚಕ್ರವ್ಯೂಹದಲ್ಲಿ ಸಿಕ್ಕಿ ಬಿದ್ದಿದ್ದಾರಾ ? ಅವರನ್ನು ಸುತ್ತುವರಿದಿರುವ ದುರ್ಯೋಧನಾದಿಗಳು ಯಾರು ? ದುಶ್ಯಾಸನ, ಕರ್ಣ, ಶಕುನಿ ಯಾರು ? ನೀವು ಈ ಚಕ್ರವ್ಯೂಹದಲ್ಲಿ ಅಭಿಮನ್ಯು ಆಗುತ್ತೀರೋ, ಅರ್ಜುನನ ಪಾತ್ರ ಮಾಡುತ್ತೀರೋ ? ಎಂದು ಕಾಲೆಳೆದರು.
ಇದರಿಂದ ಕೆರಳಿದ ಶಿವಲಿಂಗೇಗೌಡ, ನಾನು ಅರಸಿಕೆರೆಯ ಜನರ ಬೆಂಬಲ ಇರುವವರೆಗೆ ಅರ್ಜುನನಾಗಿಯೇ ಇರುತ್ತೇನೆ. ಯಾವ ಕಾರಣಕ್ಕೂ ಅಭಿಮನ್ಯು ಆಗಲಾರೆ. ನಾನು ಚಕ್ರವ್ಯೂಹದಲ್ಲಿ ಸಿಕ್ಕಿಕೊಂಡಿಲ್ಲ ಎಂದರು.
ನಿನ್ನೆ ಅರಸಿಕೆರೆಯಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಇದ್ದ ಜನರು ನೋಡಿದಾಗ ನೀವು ಎಲ್ಲಿ ಸಿಕ್ಕಿಕೊಂಡಿದ್ದೀರಿ ಎಂದು ಗೊತ್ತಾಗುತ್ತದೆ ಎಂದು ಅಶೋಕ ಛೇಡಿಸಿದಾಗ, ಶಿವಲಿಂಗೇಗೌಡರದು ದುರ್ಯೋಧನನ ಪಾತ್ರ ಎಂದು ಜೆಡಿಎಸ್ ಶಾಸಕರು ಕಾಲೆಳೆದರು. ಇದರಿಂದ ಕೆರಳಿದ ಶಿವಲಿಂಗೇಗೌಡ “ಹೋಯತ್ಲಾಗೆ, ನಾನು ದುರ್ಯೋಧನ ಅಲ್ಲ, ಭೀಮನ ಪಾತ್ರ ಮಾಡ್ತೇನೆ’ ಎಂದು ಸವಾಲು ಹಾಕಿದರು.