ಬೆಂಗಳೂರು: ಇತ್ತೀಚೆಗಷ್ಟೇ ಸಚಿವ ಸ್ಥಾನ ಪಡೆದಿರುವ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ಇದೀಗ ಕೊಠಡಿ ರಾಜಕೀಯ ಆರಂಭಿಸಿದ್ದಾರೆ. ತಮ್ಮ ರಾಜಕೀಯ ಬದ್ಧವೈರಿ ಡಿ ಕೆ ಶಿವಕುಮಾರ್ ಅವರು ಸಚಿವರಾಗಿದ್ದ ಪಡೆದಿದ್ದ ಕೊಠಡಿಯನ್ನೇ ಪಡೆದಿದ್ದಾರೆ.
ಹೌದು. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಡಿ ಕೆ ಶಿವಕುಮಾರ್ ಪಡೆದಿದ್ದ ಕೊಠಡಿಗೆ ಇಂದು ಸಿ.ಪಿ ಯೋಗೇಶ್ವರ್ ಪ್ರವೇಶಿಸಿದ್ದಾರೆ. ವಿಧಾನಸೌಧದ ಮೂರನೇ ಮಹಡಿಯ ಕೊಠಡಿ ಸಂಖ್ಯೆ 336, 337 ಪಡೆದಿರುವ ಸಿ.ಪಿ.ಯೋಗೇಶ್ವರ್, ಇಂದು ಪೂಜೆ ನೆರವೇರಿಸುವ ಮೂಲಕ ಕೊಠಡಿ ಪ್ರವೇಶಿಸಿದರು.
ಇದನ್ನೂ ಓದಿ:ಹಳ್ಳಿಹಕ್ಕಿ ‘ಸಚಿವ’ ಆಸೆಗೆ ತಣ್ಣೀರೆರಚಿದ ಕೋರ್ಟ್: ಹೈಕೋರ್ಟ್ ತೀರ್ಪು ಎತ್ತಿಹಿಡಿದ ಸುಪ್ರೀಂ
ರಮೇಶ್ ಜಾರಕಿಹೊಳಿ ಪಾತ್ರ? ಯೋಗೇಶ್ವರ್ ಅವರ ಈ ನಡೆಯ ಹಿಂದೆ ರಮೇಶ್ ಜಾರಕಿಹೊಳಿ ಪಾತ್ರವಿದೆ ಎಂಬ ಚರ್ಚೆ ಆರಂಭವಾಗಿದೆ. ಈ ಹಿಂದೆ ಮೈತ್ರಿ ಸರ್ಕಾರದ ಸಮಯದಲ್ಲಿ ಜಾರಕಿಹೊಳಿ ಅವರು ಡಿ ಕೆ ಶಿವಕುಮಾರ್ ವಿರುದ್ಧ ಸವಾಲು ಹಾಕಿ ಮೈತ್ರಿ ಸರ್ಕಾರ ಪತನಕ್ಕೆ ನಾಂದಿ ಹಾಡಿದ್ದರು. ಡಿಕೆಶಿ ಹೊಂದಿದ್ದ ಇಂಧನ ಖಾತೆಯನ್ನೇ ಪಡೆಯುತ್ತೇನೆಂದು ರಮೇಶ್ ಪ್ರತಿಜ್ಞೆ ಮಾಡಿದ್ದರು.
ಸದ್ಯ ಇಂಧನ ಖಾತೆ ಸಿಎಂ ಯಡಿಯೂರಪ್ಪ ಅವರ ಬಳಿಯೇ ಇದ್ದರೂ, ರಮೇಶ್ ಜಾರಕಿಹೊಳಿ ಅವರು ಪ್ರಮುಖ ಜಲ ಸಂಪನ್ಮೂಲ ಖಾತೆ ಹೊಂದಿದ್ದಾರೆ. ಯೋಗೇಶ್ವರ್ ಗೆ ಸಚಿವ ಸ್ಥಾನ ದೊರಕುವಲ್ಲಿ ರಮೇಶ್ ಜಾರಕಿಹೊಳಿ ಹೈಕಮಾಂಡ್ ಮಟ್ಟದಲ್ಲಿ ದೊಡ್ಡ ಲಾಬಿ ನಡೆಸಿದ್ದರು.
ಇದನ್ನೂ ಓದಿ: ಮಹಾರಾಷ್ಟ್ರ ಸಿಎಂ ‘ಬೆಳಗಾವಿ’ ಹೇಳಿಕೆ: ರಾಜ್ಯದ ನಾಯಕರ ಖಂಡನೆ, ಸಚಿವೆ ಜೊಲ್ಲೆ ಎಚ್ಚರಿಕೆ
ಮಿತ್ರಮಂಡಳಿ ಶಾಸಕರ ವಿರೋಧದ ನಡುವೆಯೂ ಯೋಗೇಶ್ವರ್ ಗೆ ಸಚಿವ ಸ್ಥಾನ ಕೊಡಿಸುವಲ್ಲಿ ಸಾಹುಕಾರ್ ಯಶಸ್ವಿಯಾಗಿದ್ದರು. ಇದೀಗ ಸಿಪಿವೈ ಗೆ ಕೊಠಡಿ ಹಂಚಿಕೆಯ ಹಿಂದೆಯೂ ರಮೇಶ್ ಜಾರಕಿಹೊಳಿ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.