ಮಂಡ್ಯ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉರುಳಿಸಲು ಪ್ರಮುಖ ಪಾತ್ರ ವಹಿಸಿದ್ದ ಬಿಜೆಪಿ ಹಾಗೂ ಕೈ ಮುಖಂಡ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಮದ್ದೂರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕದಲೂರು ಉದಯ್ ಪಕ್ಕದ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದ್ದು, ಕಾಂಗ್ರೆಸ್‌ಗೆ ಬರುವಂತೆ ಸಿ.ಪಿ.ಯೋಗೇಶ್ವರ್‌ಗೆ ಆಫರ್ ನೀಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮೂಲಗಳ ಪ್ರಕಾರ ಚನ್ನಪಟ್ಟಣದಲ್ಲಿ ಜೆಡಿಎಸ್ ನ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಚುನಾವಣೆಯಲ್ಲಿ ಮಣಿಸುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತನ್ನ ಶಿಷ್ಯನ ಮೂಲಕ ಕಾಂಗ್ರೆಸ್‌ಗೆ ಕರೆತರುವ ಪ್ರಯತ್ನ ನಡೆಸಿದ್ದಾರೆ. ಸೂಚನೆ ಹಿನ್ನೆಲೆಯಲ್ಲಿ ಕದಲೂರು ಉದಯ್, ಸಿ.ಪಿ.ಯೋಗೇಶ್ವರ್ ಅವರು ಚುನಾವಣೆ ಪ್ರಚಾರದ ಸ್ಥಳಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಇದಕ್ಕೆ ಸಿ.ಪಿ.ಯೋಗೇಶ್ವರ್ ನಯವಾಗಿಯೇ ಕಾಂಗ್ರೆಸ್ ಆಫರ್ ಅನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.
ಟಿಕೆಟ್‌ಗಾಗಿ ಕಸರತ್ತು: ಕದಲೂರು ಉದಯ್ ಈಗಾಗಲೇ ಮದ್ದೂರು ಕಾಂಗ್ರೆಸ್ ಟಿಕೆಟ್‌ಗಾಗಿ ಕಸರತ್ತು ನಡೆಸುತ್ತಿದ್ದಾರೆ. ಆದರೆ, ಮತ್ತೂಂದೆಡೆ ಎಸ್.ಗುರುಚರಣ್ ಕೂಡ ಟಿಕೆಟ್‌ಗಾಗಿ ಒತ್ತಡ ಹಾಕುತ್ತಿದ್ದಾರೆ. ಈ ನಡುವೆ ಕದಲೂರು ಉದಯ್‌ಗೆ ಸಿ.ಪಿ.ಯೋಗೇಶ್ವರ್ ಕರೆತರುವ ಜವಾಬ್ದಾರಿ ನೀಡಿದ್ದರೇ ಎಂಬ ಅನುಮಾನಗಳು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಹೇಳಿಕೇಳಿ ಸಿ.ಪಿ.ಯೋಗೇಶ್ವರ್ ಹಾಗೂ ಕದಲೂರು ಉದಯ್ ಅವರು ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ಅಸ್ಥಿರಗೊಳಿಸುವ ಮೂಲಕ ಸರ್ಕಾರ ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಉಡುಗೊರೆ, ಸಾಮಾಜಿಕ ಕಾರ್ಯಗಳಿಂದ ಗುರುತಿಸಿಕೊಂಡ ಉದಯ್, ಮೊದಲು ಬಿಜೆಪಿ ಪಕ್ಷ ಸೇರ್ಪಡೆಯಾಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡ ಉದಯ್, ಟಿಕೆಟ್ ಗಾಗಿ ಕಸರತ್ತು ನಡೆಸುತ್ತಿದ್ದಾರೆ.
ಇತ್ತ ಎಸ್.ಗುರುಚರಣ್ ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದು, ಮಾಜಿ ಸಿಎಂ ಎಸ್.ಎಂ.ಕೃಷ್ಣ ಮೂಲಕ ಪ್ರಭಾವ ಬೀರುತ್ತಿದ್ದಾರೆ. ಇದರಿಂದ ಮದ್ದೂರು ಕೈ ಟಿಕೆಟ್ ಗೊಂದಲಮಯವಾಗಿ ಪರಿಣಮಿಸಿದೆ. ಇದೀಗ ಟಿಕೆಟ್ ಫೈಟ್ ಡಿ.ಕೆ. ಶಿವಕುಮಾರ್ ಹೆಗಲಿಗೆ ಬಿದ್ದಿದ್ದು, ಶಿಷ್ಯ ಉದಯ್ ಸಿಗುವುದೇ ಅಥವಾ ಮೊದಲೇ ಘೋಷಿಸಿದಂತೆ ಗುರುಚರಣ್ ಸಿಗಲಿದೆಯೇ ಕಾದು ನೋಡಬೇಕು.