ಚಾಮರಾಜನಗರ: ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸೇರಿದಂತೆ ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರಕಾರಗಳು ರೂಪಿಸಿರುವ ಹತ್ತಾರು ಚಾರಿತ್ರಿಕ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವ ಹಾಗೂ ಈ ಬಗ್ಗೆ ಅರಿವು ಮೂಡಿಸುವ ಮಹತ್ವದ ಕೆಲಸವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಮಾಡಬೇಕು. ಇದರಿಂದ ಸದೃಢ ಮತ್ತು ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸಬಹುದಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಇಲ್ಲಿ ನಡೆಯುತ್ತಿರುವ ಎಬಿವಿಪಿ 41ನೇ ರಾಜ್ಯ ಸಮ್ಮೇಳನದಲ್ಲಿ ಮಂಗಳವಾರದಂದು ಪಾಲ್ಗೊಂಡು ಮಾತನಾಡಿದ ಅವರು, ಎಬಿವಿಪಿ ದಶಕಗಳಿಂದ ಆಗ್ರಹಿಸುತ್ತಿದ್ದ ಮತ್ತು ನಿರೀಕ್ಷಿಸುತ್ತಿದ್ದಂತಹ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುವಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ ಎಂದರು.
ಎನ್ಇಪಿ ನೀತಿಯಲ್ಲಿ ಭಾರತೀಯತೆಯೊಂದಿಗೆ ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ನಿರ್ಮಾಣಕ್ಕೆ ಆದ್ಯತೆ ಕೊಡಲಾಗಿದೆ. ಇದರಿಂದ ಸಮಾಜದಲ್ಲಿ ಸಮಭಾವ ಬರಲಿದ್ದು, ಭಾರತವು ಜಾಗತಿಕ ಪಂಕ್ತಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲಲಿದೆ. ಇದಕ್ಕೆ ತಕ್ಕಂತೆ ವಿಶ್ವವಿದ್ಯಾಲಯ ನಿರ್ವಹಣೆಯಿಂದ ಹಿಡಿದು ಬೋಧನೆ ಮತ್ತು ಅಂಕಪಟ್ಟಿ ವಿತರಣೆವರೆಗೆ ಎಲ್ಲವನ್ನೂ ತಂತ್ರಜ್ಞಾನದ ನೆರವಿನಿಂದ ಪಾರದರ್ಶಕಗೊಳಿಸಲಾಗಿದೆ ಎಂದರು.
ದೇಶದಲ್ಲಿ ಕಾಂಗ್ರೆಸ್ಸಿಗೆ ಪರ್ಯಾಯವಾದ ರಾಜಕಾರಣವನ್ನು ರೂಪಿಸುವಲ್ಲಿ ಮತ್ತು ಸಮಾಜದಲ್ಲಿ ಪಿಡುಗಾಗಿ ಪರಿಣಮಿಸಿದ್ದ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವತ್ತ ಎಬಿವಿಪಿ ನಡೆಸಿರುವ ಹೋರಾಟ ಐತಿಹಾಸಿಕವಾಗಿದೆ. 30 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಈ ಸಂಘಟನೆಯ ಸದಸ್ಯರು ಈಗ ನಮ್ಮ ಸರಕಾರ ರೂಪಿಸಿರುವ ಹತ್ತಾರು ಶೈಕ್ಷಣಿಕ ಉಪಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಹುಟ್ಟಿಸಬೇಕು ಎಂದು ಅಶ್ವತ್ಥನಾರಾಯಣ ಕರೆ ಕೊಟ್ಟರು.
ಇದನ್ನೂ ಓದಿ:ಚಾಮರಾಜನಗರ ಜಿಲ್ಲೆಗೆ ವಿವಿ: ಸದ್ಯದಲ್ಲೇ ತೀರ್ಮಾನ- ಅಶ್ವತ್ಥನಾರಾಯಣ
ದೇಶದ ವಿಜ್ಞಾನ, ತಂತ್ರಜ್ಞಾನ. ರಾಜಕೀಯ, ಆಡಳಿತ, ಸಮಾಜಸೇವೆ ಮುಂತಾದ ಕ್ಷೇತ್ರಗಳಿಗೆ ಎಬಿವಿಪಿ ಕೊಟ್ಟಿರುವ ಕೊಡುಗೆಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದರಲ್ಲೂ ತುರ್ತು ಪರಿಸ್ಥಿತಿಯನ್ನು ಹೇರಿದ್ದ ಕಾಲದಲ್ಲಿ ಅದರ ವಿರುದ್ಧ ಹೋರಾಡಿದ ಸಂಘಟನೆಯು ದೇಶದಲ್ಲಿ ಪ್ರಜಾಸತ್ತೆಯನ್ನು ಉಳಿಸಲು ಅವಿರತವಾಗಿ ಶ್ರಮಿಸುತ್ತಿದೆ ಎಂದು ಸಚಿವರು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಒಡೆಯರ್, ಸಮ್ಮೇಳನಾಧ್ಯಕ್ಷೆ ಬಾಗೇಶ್ರೀ, ಎಬಿವಿಪಿ ರಾಷ್ಟ್ರೀಯ ಅಧ್ಯಕ್ಷ ಛಗನ್ ಭಾಯಿ ಪಟೇಲ್, ರಾಜ್ಯಾಧ್ಯಕ್ಷ ವೀರೇಶ್ ಬಾಳೇಕಾಯಿ, ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್ ಕುಮಾರ್, ಸುಬ್ಬಣ್ಣ ಮುಂತಾದವರು ಉಪಸ್ಥಿತರಿದ್ದರು.