ವಿಜಯಪುರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಠಾಧೀಶರು, ಹಿತೈಸಿಗಳ ಸಲಹೆ ಮೇರೆಗೆ ಪಕ್ಷ ನನಗೆ ನೀಡಿದ್ದ ನೋಟೀಸ್ ಗೆ ಐದು ದಿನಗಳ ಹಿಂದೆಯೇ ಉತ್ತರಿಸಿದ್ದೇನೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ಪಷ್ಟಪಡಿಸಿದ್ದಾರೆ.
ಭಾನುವಾರ ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕೇಂದ್ರ ಶಿಸ್ತು ಸಮೀತಿ ನೀಡಿದ ನೊಟೀಸ್ ಗೆ ಅ.15 ರಂದು ಉತ್ತರ ನೀಡಿದ್ದೇನೆ.
ನದಿಗಳ ಪ್ರವಾಹದಿಂದ ಬದುಕು ಕಳೆದುಕೊಂಡಿದ್ದ ಸಂತ್ರಸ್ಥರ ನೋವಿಗೆ ಧ್ವನಿಯಾಗಿದ್ದೇನೆಯೇ ಹೊರತು ಪಕ್ಷಕ್ಕೆ ಮುಜುಗುರ ಅಥವಾ ಹಾನಿಯಾಗುವಂಥ ಯಾವುದೇ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದೇನೆ ಎಂದರು.
ಪ್ರಧಾನಿ ಮೋದಿ ಅವರಲ್ಲಿ ನೇತಾಜಿ ಸುಭಾಷ್ಚಂದ್ರ ಭೋಸ್ ಅವರನ್ನು, ಅಮೀತ ಶಾ ಅವರಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರನ್ನು ಕಾಣುತ್ತಿರುವುದಾಗಿ ಪತ್ರದಲ್ಲಿ ನನ್ನ ಭಾವನೆಗಳನ್ನು ಬಿಚ್ಚಿಟ್ಟಿದ್ದೇನೆ. ನಾನಂತೂ ಉತ್ತರಿಸಿದ್ದೇನೆ, ಮುಂದಿನದು ಪಕ್ಷಕ್ಕೆ ಬಿಟ್ಟದ್ದು ಎಂದರು.
ಈ ವಿಷಯದಲ್ಲಿ ಪೇಜಾವರ ಶ್ರೀಗಳು, ಶ್ರೀಶೈಲ ಜಗದ್ಗುರುಗಳು, ಕೂಡಲಸಂಗಮ ಶ್ರೀಗಳು, ಮೂರುಸಾವಿರ ಮಠದ ಶ್ರೀಗಳು ನನ್ನೊಂದಿಗೆ ಮಾತನಾಡಿ, ನೀವು ಕರ್ನಾಟಕದ ಜನತೆಯ ಅದರಲ್ಲೂ ಪ್ರವಾಹ ಸಂತ್ರಸ್ತರ ಧ್ವನಿಯಾಗಿದ್ದೀರಿ, ನಾವು ನಿಮ್ಮ ಜೊತೆಗೆ ಇದ್ದೇವೆ ಎಂದು ಮಠಾಧೀಶರು ಭರವಸೆ ನೀಡಿದ್ದಾರೆ ಎಂದು ಯತ್ನಾಳ ವಿವರಿಸಿದರು.
ಹಿಂದೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಇದ್ದಾಗ, ಆಲಮಟ್ಟಿ ವಿಚಾರವಾಗಿ ಧ್ವನಿ ಎತ್ತಿದ್ದೆ ಆಗಲೂ ಕೆಲವರು ಸಹ ಪಕ್ಷ ವಿರೋಧಿ ಎಂದು ಹುಯಿಲೆಬ್ಬಿಸಿದ್ದರು.
ಆದರೆ ಅಟಲ್ ಬಿಹಾರಿ ವಾಜಪೇಯಿ ಅವರು ನನ್ನ ನಡೆಯನ್ನು ಪ್ರಶಂಸಿದ್ದರು. ಜೊತೆಗೆ ಮುಂದೆಲಿನ ಮೂರೇ ತಿಂಗಳಲ್ಲಿ ನನ್ನನ್ನು ಕೇಂದ್ರದ ಮಂತ್ರಿ ಮಾಡಿದ್ದರು ಎಂದು ಸ್ಮರಿಸಿದರು.
ಪ್ರಧಾನ ಮಂತ್ರಿ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮೀತ್ ಶಾ ಇಬ್ಬರು ಸೇರಿ ಭವಿಷ್ಯದಲ್ಲಿ ನನಗೆ ಒಂದು ಒಳ್ಳೆ ಆಶೀರ್ವಾದ ಮಾಡ್ತಾರೆ ಎಂಬ ವಿಶ್ವಾಸ ಇದೆ ಎಂದರು.