ದಾವಣಗೆರೆ: ಭಾರತೀಯರು ಇಂದು ಸುರಕ್ಷಿತವಾಗಿದ್ದಾರೆಂದರೆ ಅದಕ್ಕೆ ಆರೆಸ್ಸೆಸ್ ಕಾರಣ. ಇದನ್ನು ಎಂದು ಅರಿಯದೇ ಕಾಂಗ್ರೆಸ್‌ನವರು ಆರೆಸ್ಸೆಸ್ ಬಗ್ಗೆ ಹುಚ್ಚು, ಹುಚ್ಚಾಗಿ ಮಾತನಾಡುತ್ತಿದ್ದು ಅದು ಅವರಿಗೆ ಶೋಭೆ ತರುವಂಥದ್ದಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದರು.
ಅವರು ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದಲೇ ಇಂದು ದೇಶದ ಸಂಸ್ಕೃತಿ ಹಾಗೂ ಘನತೆ ಉಳಿದಿದೆ. ದೇಶಕ್ಕೆ ಆರೆಸ್ಸೆಸ್ ಕೊಡುಗೆ ಅಪಾರ. ಸಿದ್ದರಾಮಯ್ಯ ಇರಲಿ, ಉಳಿದ ಕಾಂಗ್ರೆಸ್ ಮುಖಂಡರೇ ಇರಲಿ ಆರೆಸ್ಸೆಸ್ ಹಾಗೂ ಸಂಘ ಪರಿವಾರದ ಬಗ್ಗೆ ಮಾತಾಡುವಾಗ ಬಹಳ ಎಚ್ಚರಿಕೆಯಿಂದ ಮಾತನಾಡಬೇಕು ಎಂದರು.
ಬಾಬ್ರಿ ಮಸೀದಿ ಕೆಡವಿದ್ದೆ ದೊಡ್ಡ ಸಾಧನೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಬಾಬ್ರಿ ಮಸೀದಿ ಒಡೆದರು ಎನ್ನುತ್ತಾರೆ. ಆದರೆ, ಅದೇ ಸ್ಥಳದಲ್ಲಿ ಈಗ ಭವ್ಯ ರಾಮ ಮಂದಿರ ನಿರ್ಮಾಣ ಆಗುತ್ತಿರುವುದು ಐತಿಹಾಸಿಕ ಸಾಧನೆ. ಕಾಂಗ್ರೆಸ್‌ಗೆ ಸೋಲಿನ ಭಯ ಕಾಡುತ್ತಿದೆ. ದೇಶದಲ್ಲಿ ಕಾಂಗ್ರೆಸ್‌ಗೆ ಅಡ್ರೆಸ್ ಇಲ್ಲದ ಪರಿಸ್ಥಿತಿ ಇದೆ. ಆದ್ದರಿಂದ ಕಾಂಗ್ರೆಸ್ಸಿನವರು ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಚುನಾವಣೆಗೆ ಸಿದ್ಧ:
ಚುನಾವಣೆಗೆ ಹೋಗುವುದು ಪಕ್ಷದ ಹೈಕಮಾಂಡ್ ಗೆ ಬಿಟ್ಟ ವಿಚಾರ. ಆದರೆ, ಡಿಸೆಂಬರ್‌ನಲ್ಲಿ ಚುನಾವಣೆ ನಡೆದರೂ ಎದುರಿಸಲು ಬಿಜೆಪಿ ಸಿದ್ಧವಾಗಿದೆ. ಸಿಎಂ ನೀಡಿರುವ ಜನಪ್ರಿಯ ಹಾಗೂ ನಾವು ಕೊಟ್ಟಿರುವ ಅಭಿವದ್ಧಿ ಕೆಲಸಗಳು ನಮ್ಮ ಕೈ ಹಿಡಿಯಲಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಂಟು ವರ್ಷಗಳ ಕಾಲ ಉತ್ತಮ ಅಧಿಕಾರ ನಡೆಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವ ಹೆಚ್ಚಿಸಿದ್ದಾರೆ. ಇದೆಲ್ಲವೂ ನಮಗೆ ವರವಾಗಲಿವೆ ಎಂದರು.