ಹೊಸದಿಲ್ಲಿ: ಕರ್ನಾಟಕದ ಹಾನಗಲ್ ಮತ್ತು ಸಿಂಧಗಿ ಸೇರಿದಂತೆ ದೇಶದ 14 ರಾಜ್ಯಗಳ 30 ವಿಧಾನಸಭಾ ಕ್ಷೇತ್ರಗಳು ಹಾಗೂ ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣ ದಿನಾಂಕ ಮಂಗಳವಾರ ಘೋಷಣೆಯಾಗಿದೆ.
ಅಕ್ಟೋಬರ್ 30ರಂದು ಈ ಎಲ್ಲ ಕ್ಷೇತ್ರಗಳಿಗೂ ಉಪಚುನಾವಣೆ ನಡೆಯಲಿದ್ದು, ನ.2ರಂದು ಫಲಿತಾಂಶ ಪ್ರಕಟವಾಗಲಿದೆ.
ದಾದ್ರಾ ಮತ್ತು ನಗರ್ ಹವೇಲಿ, ಹಿಮಾಚಲಪ್ರದೇಶದ ಮಂಡಿ ಮತ್ತು ಮಧ್ಯಪ್ರದೇಶದ ಖಾಂಡ್ವಾದಲ್ಲಿ ಲೋಕಸಭೆ ಉಪಚುನಾವಣೆ ನಡೆಯಲಿದೆ. ಹಾಲಿ ಲೋಕಸಭಾ ಸಂಸದರ ನಿಧನದ ಹಿನ್ನೆಲೆಯಲ್ಲಿ ತೆರವಾದ ಕ್ಷೇತ್ರಗಳಿವು.
ಇನ್ನು, ಅಸ್ಸಾಂನ 5, ಪಶ್ಚಿಮ ಬಂಗಾಲದ 4, ಮಧ್ಯಪ್ರದೇಶ, ಹಿಮಾಚಲಪ್ರದೇಶ ಮತ್ತು ಮೇಘಾಲಯದ ತಲಾ ಮೂರು, ಕರ್ನಾಟಕ, ಬಿಹಾರ ಮತ್ತು ರಾಜಸ್ಥಾನದ ತಲಾ ಎರಡು ಮತ್ತು ಆಂಧ್ರಪ್ರದೇಶ, ಹರಿಯಾಣ, ಮಹಾರಾಷ್ಟ್ರ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ತೆಲಂಗಾಣದ ತಲಾ ಒಂದು ಸೇರಿದಂತೆ ಒಟ್ಟಾರೆ 14 ರಾಜ್ಯಗಳ 30 ವಿಧಾನಸಭಾ ಕ್ಷೇತ್ರಗಳಿಗೂ ಚುನಾವಣೆ ನಡೆಯಲಿದೆ.
ಇದನ್ನೂ ಓದಿ:ಭವಾನಿಪುರ ಸಮರಕ್ಕೆ ಕೋಲ್ಕತಾ ಹೈಕೋರ್ಟ್ ಒಪ್ಪಿಗೆ
ನಿರ್ಬಂಧಗಳೇನು?: ನಾಮಪತ್ರ ಸಲ್ಲಿಸುವ ಮುನ್ನ ಮತ್ತು ಅನಂತರ ಮೆರವಣಿಗೆ ಮಾಡುವುದಕ್ಕೆ ನಿಷೇಧ ಹೇರಲಾಗಿದೆ. ಹೊರಾಂಗಣದಲ್ಲಿ ಪ್ರಚಾರ ನಡೆಸಬೇಕೆಂದರೆ ಶೇ.50ರಷ್ಟು ಆಸನ ಸಾಮರ್ಥ್ಯಕ್ಕೆ ಮಾತ್ರ ಅವಕಾಶ, ರಾಷ್ಟ್ರೀಯ ಮತ್ತು ರಾಜ್ಯ ಮಾನ್ಯತೆ ಹೊಂದಿರುವ ಪಕ್ಷಗಳ ಗರಿಷ್ಠ 20 ಸ್ಟಾರ್ ಪ್ರಚಾರಕರಿಗಷ್ಟೇ ಅವಕಾಶ ನೀಡಲಾಗಿದೆ ಎಂದು ಚುನಾವಣ ಆಯೋಗ ತಿಳಿಸಿದೆ.