ಮಂಡ್ಯ: ಚನ್ನಪಟ್ಟಣ ಮೈತ್ರಿ ಟಿಕೆಟ್ ಗೊಂದಲ ವಿಚಾರವಾಗಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಬಿಜೆಪಿ ನಾಯಕರ ವಿರುದ್ದವೇ ಕಿಡಿಕಾರಿದ್ದಾರೆ. “ಎಲ್ಲಾ ಸುಗಮವಾಗಿ ಮಾಡಬೇಕೆಂದಿದೆ. ಯಾರು ಯಾರ ಮೇಲೂ ದಬ್ಬಾಳಿಕೆ ಮಾಡಲಾಗಲ್ಲ. ಪ್ರೀತಿ ವಿಶ್ವಾಸದಿಂದ ಚುನಾವಣೆ ನಡೆಸಬೇಕು. ವಿಶ್ವಾಸಕ್ಕೆ ಧಕ್ಕೆಯಾಗಬಾರದು. ಅದನ್ನು ಎರಡು ಪಕ್ಷದ ನಾಯಕರು ಮನವರಿಕೆ ಮಾಡಿಕೊಳ್ಳಬೇಕು. ಒಂದು ಕಡೆ ಪ್ರೀತಿ ವಿಶ್ವಾಸವಿದ್ದರೆ ಸಾಲದು. ಎರಡು ಕಡೆಯೂ ಪರಸ್ಪರ ಸ್ಪಂದನೆ ಇರಬೇಕು” ಎಂದು ಖಾರವಾಗಿಯೇ ಹೇಳಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜೆಡಿಎಸ್ ಗೆ ಮರುಜನ್ಮ ಕೊಟ್ಟಿದ್ದೇವೆ ಎಂಬ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿದ್ದು, ಯಾರಿಗೆ ಯಾರು ಮರುಜನ್ಮ ಕೊಟ್ಟಿದ್ದಾರೆ ಎಂದು ಬೀದಿಯಲ್ಲಿ ಚರ್ಚೆ ಮಾಡಲು ಆಗಲ್ಲ ಎಂದು ಟಾಂಗ್ ನೀಡಿದರು.
ಯಾವ ರೀತಿ ಶಕ್ತಿ ತುಂಬಿದೆ ಎಂಬ ಚರ್ಚೆ ಈಗ ಉಪಯೋಗವಾಗಲ್ಲ. ದೆಹಲಿ ನಾಯಕರಿಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯಿದೆ. ಅದನ್ನು ನಾನು ಬೀದಿಯಲ್ಲಿ ನಿಂತು ಚರ್ಚೆ ಮಾಡಲೇ? ಅದರ ಅವಶ್ಯಕತೆಯಿಲ್ಲ ಎಂದರು.
ನಾನು ಈ ಕ್ಷಣದವರೆಗೂ ಜನತಾದಳ ಬಿಜೆಪಿ ಎಂದು ಬೇರ್ಪಡಿಸಿ ಮಾತನಾಡಿಲ್ಲ. ಎನ್‌ಡಿಎ ಅಭ್ಯರ್ಥಿ ಎಂದೆ ಮಾತನಾಡಿದ್ದೇನೆ. ತ್ಯಾಗದ ಬಗ್ಗೆ ಮಾತನಾಡುವವರು ಅವರ ಆತ್ಮಕ್ಕೆ ಪ್ರಶ್ನೆ ಹಾಕಿಕೊಳ್ಳಬೇಕು. ನಮ್ಮ ಮೈತ್ರಿಗೆ ಅಡ್ಡಿ ಆಗಬಾರದು ಎಂದು ನಡೆದುಕೊಳ್ಳುತ್ತಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
ಚನ್ನಪಟ್ಟಣ ಉಪಚುನಾವಣೆಯ ಎನ್‌ಡಿಎ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಇಂದು ಸಂಜೆ ಬೆಂಗಳೂರಿನಲ್ಲಿ ಸಭೆಯಿದೆ. ಯಡಿಯೂರಪ್ಪ ಅವರಂತಹ ನಾಯಕರು ಸೇರುತ್ತಿದ್ದು ಕೂತು ಚರ್ಚೆ ಮಾಡುತ್ತೇವೆ ಎಂದರು.