ನವದೆಹಲಿ : 6 ರಾಜ್ಯಗಳಲ್ಲಿ 7 ವಿಧಾನಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, ಹರಿಯಾಣದ ಆದಂಪುರ, ಉತ್ತರ ಪ್ರದೇಶದ ಗೋಲ ಗೋಕರ್ಣನಾಥ ಮತ್ತು ಬಿಹಾರದ ಗೋಪಾಲ್‌ಗಂಜ್ ಅನ್ನು ಬಿಜೆಪಿ ಉಳಿಸಿಕೊಂಡಿದ್ದು, ಬಿಹಾರದ ಮೊಕಾಮಾ ಕ್ಷೇತ್ರವನ್ನು ಆರ್‌ಜೆಡಿ ಉಳಿಸಿಕೊಂಡಿದೆ.
ಒಡಿಶಾದ ಧಮ್‌ನಗರ ವಿಧಾನಸಭಾ ಕ್ಷೇತ್ರವನ್ನೂ ಬಿಜೆಪಿ ಗೆದ್ದುಕೊಂಡಿದ್ದು, ಆಡಳಿತಾರೂಢ ಬಿಜೆಡಿಯನ್ನು 9,881 ಮತಗಳಿಂದ ಸೋಲಿಸಿದೆ.
ಹೈ ವೋಲ್ಟೇಜ್ ಕದನ ತೆಲಂಗಾಣದ ಮುನುಗೋಡು ಉಪಚುನಾವಣೆಯಲ್ಲಿ ಆಡಳಿತಾರೂಢ ಟಿಆರ್‌ಎಸ್ ಗೆಲುವು ಸಾಧಿಸಿದ್ದು, ಬಿಜೆಪಿ ತೀವ್ರ ಪೈಪೋಟಿ ನೀಡಿ ಸೋಲು ಅನುಭವಿಸಿದೆ. ಜಿದ್ದಾಜಿದ್ದಿನ ಕದನದಲ್ಲಿ ಟಿಆರ್‌ಎಸ್ ಅಭ್ಯರ್ಥಿ ಕೂಸುಕುಂಟ್ಲ ಪ್ರಭಾಕರ ರೆಡ್ಡಿ ಅವರು ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಕೋಮಟಿರೆಡ್ಡಿ ರಾಜ್ ಗೋಪಾಲ್ ರೆಡ್ಡಿ 11,666 ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ.
ಮಹಾರಾಷ್ಟ್ರದ ಅಂಧೇರಿ ಪೂರ್ವದಲ್ಲಿ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣದ ಅಭ್ಯರ್ಥಿ ರುತುಜಾ ಲಟ್ಕೆ ಅವರು ಗೆಲುವು ಸಾಧಿಸಿದ್ದಾರೆ.
ಎಲ್ಲಾ 7 ಕ್ಷೇತ್ರಗಳಿಗೆ ನವೆಂಬರ್ 3 ರಂದು ಮತದಾನ ನಡೆದಿತ್ತು.
ಎಲ್ಲಾ 40 ಸ್ಥಾನಗಳನ್ನು ಗೆಲ್ಲುತ್ತೇವೆ
“ಜೆಡಿಯು ಬಿಜೆಪಿಯೊಂದಿಗಿನ ಸಂಬಂಧವನ್ನು ಕಡಿದುಕೊಂಡು ಆರ್‌ಜೆಡಿಗೆ ಹೋದರು ಗೋಪಾಲ್ ಗಂಜ್‌ನಲ್ಲಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಾಗಲಿಲ್ಲ ಎಂಬ ಸ್ಪಷ್ಟ ಸಂದೇಶ. ಮೊಕಾಮಾದಲ್ಲಿ ಅವರ ಗೆಲುವಿನ ಅಂತರ ಕಡಿಮೆಯಾಗಿದೆ. ಇದು ಬಿಜೆಪಿಯ ಭವಿಷ್ಯವನ್ನು ತೋರಿಸುತ್ತದೆ. ಲೋಕಸಭೆ ಚುನಾವಣೆಯಲ್ಲಿ ನಾವು ಎಲ್ಲಾ 40 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಬಿಜೆಪಿ ನಾಯಕ ಶಾನವಾಜ್ ಹುಸೇನ್ ಹೇಳಿದ್ದಾರೆ.