ಬೆಳಗಾವಿ: ರೈತರ ವಿರೋಧದ ಮಧ್ಯೆಯೂ ತಾಲೂಕಿನ ಹಲಗಾ-ಮಚ್ಛೆ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಜೆಸಿಬಿ, ಹಿಟಾಚಿ, ಟಿಪ್ಪರ್ ವಾಹನಗಳ ಮೂಲಕ ಜಮೀನು ಸಮತಟ್ಟು ಮಾಡಿ ಕೆಲಸ ನಡೆಸಲಾಗುತ್ತಿದೆ. ಬೈಪಾಸ್ ರಸ್ತೆಗೆ ಅಗತ್ಯ ಇರುವ ಜಮೀನು ಸ್ವಾಧೀನ ಪಡಿಸಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾ ಧಿಕಾರದವರು ಕಾಮಗಾರಿ ನಡೆಸಿದ್ದಾರೆ. ಈ ಪ್ರದೇಶದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಟಿಪ್ಪರ್‌ಗಳಲ್ಲಿ ಮಣ್ಣು ಸಾಗಿಸಿ ಜಮೀನು ಸಮತಟ್ಟು ಮಾಡಿಕೊಳ್ಳುವ ಕಾರ್ಯ ಮುಂದುವರಿದಿದೆ. ಇನ್ನೊಂದೆಡೆ ಭೂಸ್ವಾ ಧೀನ ಪ್ರಕ್ರಿಯೆ ವಿರೋಧಿಸಿ ಕೆಲವು ರೈತರು ಕ್ಯಾರೆಟ್ ಬೆಳೆ ಇರುವ ಜಮೀನಿನಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ನಮ್ಮ ಫಲವತ್ತಾದ ಜಮೀನು ಬಿಟ್ಟು ಕೊಡುವುದಿಲ್ಲ.
ಈ ಜಮೀನು ಕಸಿದುಕೊಳ್ಳಲು ಜಿಲ್ಲಾಡಳಿತ ಮುಂದಾಗಬಾರದು. ಸಾವಿರಾರು ಖರ್ಚು ಮಾಡಿ ಕ್ಯಾರೆಟ್ ಬೆಳೆಯಲಾಗಿದೆ. ನಮ್ಮ ಜಮೀನು ನಮಗೆ ಬಿಟ್ಟು ಕೊಡಬೇಕು. ಬದುಕಿಗೆ ಆಸರೆ ಆಗಿರುವ ಜಮೀನಿನಲ್ಲಿ ಬೆಳೆ ಬೆಳೆದು ಜೀವನ ನಡೆಸುತ್ತೇವೆ ಎಂದು ತಮ್ಮ ಭಾಗದಲ್ಲಿ ರಸ್ತೆ ನಿರ್ಮಿಸದಂತೆ ಪಟ್ಟು ಹಿಡಿದು ಕುಳಿತಿದ್ದಾರೆ. ರೈತರು ಕಬ್ಬು, ಭತ್ತ, ಕ್ಯಾರೆಟ್ ಸೇರಿದಂತೆ ಇತರೆ ದಾಖಲೆಗಳನ್ನು ಪ್ರದರ್ಶಿಸುತ್ತ ಪ್ರತಿಭಟಿಸಿದರು.
ರೈತ ರವಿ ಸೂರ್ಯವಂಶಿ ಕಾಮಗಾರಿಗೆ ವಿರೋಧಿಸಿದರು. ಜೆಸಿಬಿ ಮುಂದೆ ಬಂದು ಬೆಳೆ ಹಾನಿ ಮಾಡದಂತೆ ಎಚ್ಚರಿಕೆ ನೀಡಿದರು. ಬೆಳೆ ಹಾನಿ ಮಾಡುವುದಿಲ್ಲ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ. ಈಗ ಮತ್ತೆ ಏಕೆ ಹಾನಿ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಜಿಲ್ಲಾಧಿಕಾರಿ ಭೇಟಿ: ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಜಿಲ್ಲಾ ಧಿಕಾರಿ ಎಂ.ಜಿ. ಹಿರೇಮಠ ಭೇಟಿ ನೀಡಿದರು. ಈ ವೇಳೆ ರೈತ ರವಿ ಸೂರ್ಯವಂಶಿ ಪ್ರತಿಭಟನೆ ನಡೆಸಿ, ತಮ್ಮ ಗದ್ದೆಯಲ್ಲಿ ಬಾವಿ ಇದೆ. ಅದೂ ಹೋಗಲಿದೆ. ನಮ್ಮ ಜಮೀನಿಗೆ ಪರ್ಯಾಯವಾಗಿ ನೀರಿನ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು. ಆಗ ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಎಲ್ಲ ರೀತಿಯ ವ್ಯವಸ್ಥೆ ಮಾಡುತ್ತೇವೆ. ಕಾಮಗಾರಿ ನಡೆಸಲು ಸಹಕರಿಸಬೇಕು. ಕಾಮಗಾರಿಗೆ ಯಾರೂ ಅಡ್ಡಿಪಡಿಸಬಾರದು ಎಂದು ಮನವಿ ಮಾಡಿದರು.ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಡಿಸಿಪಿ ಡಾ. ವಿಕ್ರಂ ಅಮಟೆ ಇದ್ದರು.
ನ್ಯಾಯಾಂಗ ನಿಂದನೆ ಕೇಸ್ ಹಾಕುತ್ತೇವೆ
ಬೆಳಗಾವಿ ಬಾಸಮತಿ ಭತ್ತ ಬೆಳೆಯುತ್ತಿದ್ದ ಜಮೀನಿನಲ್ಲಿ ರಸ್ತೆ ಕಾಮಗಾರಿ ಆರಂಭಿಸಿದ್ದನ್ನು ರೈತ ಮುಖಂಡ ರಾಜು ಮರವೆ ವಿರೋಧಿಸಿದರು. ಫಲವತ್ತಾದ ಭೂಮಿಯಲ್ಲಿ ರಸ್ತೆ ಕಾಮಗಾರಿ ಮಾಡುತ್ತಿರುವುದು ಸರಿಯಲ್ಲ ಎಂದು ಭತ್ತ ಪ್ರದರ್ಶನ ಮಾಡಿ ಅಳಲು ತೋಡಿಕೊಂಡರು. ಪೊಲೀಸರನ್ನು ಕರೆದುಕೊಂಡು ಬಂದು ಕಾಮಗಾರಿ ನಡೆಸಲಾಗುತ್ತಿದೆ. ಕಾಮಗಾರಿ ಆರಂಭದ ಕುರಿತು ನ್ಯಾಯಾಂಗ ನಿಂದನೆ ಕೇಸ್ ಹಾಕಿ ಕೆಲಸ ನಿಲ್ಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ರೈತರ ಜತೆ ಚರ್ಚಿಸಿ ಶೀಘ್ರವೇ ಸಮಸ್ಯೆ ಬಗೆಹರಿಸಿ: ಸತೀಶ ಗೋಕಾಕ: ಹಲಗಾ-ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ ನಡೆಸಲು ಉಂಟಾಗಿರುವ
ಸಮಸ್ಯೆಯನ್ನು ಜಿಲ್ಲಾ ಧಿಕಾರಿಗಳು ರೈತರೊಂದಿಗೆ ಚರ್ಚಿಸಿ ಬಗೆಹರಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಇಲ್ಲಿನ ಹಿಲ್ ಗಾರ್ಡನ್ ಗೃಹಕಚೇರಿಯಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರೈತರ ಪ್ರತಿಭಟನೆಯ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ, ಜಿಲ್ಲಾಧಿಕಾರಿಗಳು ರೈತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಸಭೆ ನಡೆಸಿ, ಸಂಧಾನದ ಮೂಲಕ ಸಮಸ್ಯೆ ಪರಿಹರಿಸಬೇಕು ಎಂದರು.