Advertisement

ಬೈಪಾಸ್‌ ರಸ್ತೆ: ಇಲ್ಲಿ ಟಾರ್ಚ್‌ ಹಿಡಿದೇ ರಸ್ತೆ ದಾಟಬೇಕು!

10:58 PM Feb 10, 2021 | Team Udayavani |

ಕಾರ್ಕಳ: ಕತ್ತಲಾದೊಡನೆ ಇಲ್ಲಿನ ರಸ್ತೆ ದಾಟಬೇಕಿದ್ದರೆ, ಟಾರ್ಚ್‌ ಹಿಡಿದೇ ತೆರಳಬೇಕು. ಯಾಕೆಂದರೆ ರಸ್ತೆ ಬದಿ ಬೀದಿ ದೀಪಗಳಿಲ್ಲ. ಹೈಮಾಸ್ಟ್‌ ದೀಪ ಕೂಡ ಸರಿಯಾಗಿ ಉರಿಯುತ್ತಿಲ್ಲ. ಕಾರ್ಕಳ ಬೈಪಾಸ್‌ನ ಸರ್ವಜ್ಞ ವೃತ್ತ ಹಾಗೂ ಬೈಪಾಸ್ ‌ ರಸ್ತೆಯುದ್ದಕ್ಕೂ ಇದೇ ಸ್ಥಿತಿಯಿದೆ.

Advertisement

ಜನ ಮತ್ತು ವಾಹನ ನಿಬಿಡ ಬೈಪಾಸ್‌ ರಸ್ತೆಯ ಸರ್ವಜ್ಞ ಜಂಕ್ಷನ್‌ನಲ್ಲಿ ಬೀದಿದೀಪ ಕಳೆದ ಕೆಲ ಸಮಯಗಳಿಂದ ಸರಿಯಾಗಿ
ಉರಿಯುತ್ತಿಲ್ಲ. ವೃತ್ತದ ಬಳಿ ಅಳವಡಿ ಸಿರುವ ಕಂಬದಲ್ಲಿ 4 ಹೈಮಾಸ್ಟ್‌ ದೀಪ ಗಳಿವೆ. ಆದರೆ ಉರಿಯುವುದು ಮಾತ್ರ ಒಂದೇ ದೀಪ.

ರಸ್ತೆ ದಾಟುವುದು ಸವಾರರಿಗೆ ಕಾಣಿಸದು ಉರಿಯುತ್ತಿರುವ ಏಕೈಕ ದೀಪ ಬೆಳಕು ಅಷ್ಟಾಗಿ ಬೆಳಕು ನೀಡುತ್ತಿಲ್ಲ. ಹೀಗಾಗಿ ಸರ್ವಜ್ಞ ವೃತ್ತದ ಬುಡ ಕತ್ತಲಲ್ಲಿ ಮುಳುಗಿದೆ. ಇಲ್ಲಿ ಹಗಲು ರಾತ್ರಿ ಸಾವಿರಾರು ವಾಹನಗಳು ಸಂಚರಿಸುತ್ತಿರುತ್ತವೆ. ಇದೇ ಸ್ಥಳದಲ್ಲಿ ಪಾದಚಾರಿಗಳು ಓಡಾಡುತ್ತಿರುತ್ತಾರೆ. ವಾಹನಗಳು ಸಂಚರಿಸುವಾಗ, ಪಾದಚಾರಿಗಳ ಚಲನವಲನ ಪಕ್ಕನೆ ಅರಿವಿಗೆ ಬರುವುದಿಲ್ಲ. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚು. ರಾತ್ರಿ ಹೊತ್ತು ಹೊರಗೆ ಬಂದವರು ಬೆಳಕು ಇಲ್ಲದೆ ಪರದಾಟ ನಡೆಸುತ್ತಾರೆ. ಸರಕಾರಿ ಕಚೇರಿಗಳು ಇರುವುದರಿಂದ ಪಕ್ಕದಲ್ಲಿ ಬಾಡಿಗೆ ಕೊಠಡಿ ಪಡೆದು ವಾಸಿಸುವ ಉದ್ಯೋಗಿಗಳು, ಕುಟುಂಬದವರು ಅಗತ್ಯಕ್ಕೆಂದು ರಾತ್ರಿ ಅತ್ತಿತ್ತ ತೆರಳುತ್ತಿರುವಾಗೆಲ್ಲ ಬೆಳಕಿಲ್ಲದೆ ತೊಂದರೆ ಪಡುತ್ತಾರೆ.

ಯಾರಿಗೆ ಸೇರಿದ್ದೆನ್ನುವುದೇ ಗೊಂದಲ!
ಸರ್ವಜ್ಞ ಜಂಕ್ಷನ್‌ನಲ್ಲಿ ವರ್ಷದ ಹಿಂದೆ ಲೋಕೋಪಯೋಗಿ ಇಲಾಖೆ 1.70 ಲಕ್ಷ ರೂ. ವೆಚ್ಚದಲ್ಲಿ ಹೈಮಾಸ್ಟ್‌ ದೀಪ ಅಳವಡಿಸಿತ್ತು ಎನ್ನಲಾಗುತ್ತಿದೆ. ಅದರ ನಿರ್ವಹಣೆ ಪಕ್ಕದಲ್ಲಿರುವ ಕುಕ್ಕುಂದೂರು ಗ್ರಾಮ ಪಂಚಾಯತ್‌ಗೆ ಬರುತ್ತದೋ ಅಲ್ಲ ಪುರಸಭೆಗೆ ಸೇರುತ್ತದೋ ಎನ್ನುವ ಬಗ್ಗೆ ಗೊಂದಲವಿದೆ. ಯಾಕೆಂದರೆ ಜಂಕnನ್‌ ಮತ್ತು ಹೈಮಾಸ್ಟ್‌ ದೀಪವಿರುವ ಸ್ಥಳ
ಗ್ರಾ.ಪಂ., ಪುರಸಭೆಯ ಗಡಿಯಲ್ಲಿದೆ.

ಹೈಮಾಸ್ಟ್‌ ದೀಪದ ನಿರ್ವಹಣೆ ಯಾರು ಹೊತ್ತುಕೊಂಡಿದ್ದಾರೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಈ ಬಗ್ಗೆ ಕುಕ್ಕುಂದೂರು ಪಿಡಿಒ ಅವರಲ್ಲಿ ವಿಚಾರಿಸಿದರೆ ಅದು ಪುರಸಭೆ ವ್ಯಾಪ್ತಿಗೆ ಸೇರಿದ್ದು ಎನ್ನುತ್ತಾರೆ. ನಮ್ಮಲ್ಲೂ ಈ ಬಗ್ಗೆ ಗೊಂದಲವಿದೆ ಎನ್ನುತ್ತಾರೆ.
ಕುಕ್ಕುಂದೂರು ಗ್ರಾ.ಪಂ. ಕಚೇರಿ ಇರುವ ಸ್ವಲ್ಪ ದೂರದಲ್ಲೇ ಜಂಕ್ಷನ್‌ ಇದ್ದು, ಬೀದಿದೀಪಗಳು ಹಾಳಾಗಿರುವುದು ಗಮನಕ್ಕೆ ಬಂದಿಲ್ಲವೇ ಎಂಬ ಪ್ರಶ್ನೆಗಳು ಸ್ಥಳೀಯರನ್ನು ಕಾಡುತ್ತವೆ. ಯಾರಾದರೂ ದಾರಿದೀಪ ದುರಸ್ತಿ ಪಡಿಸಿ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

Advertisement

ಬೈಪಾಸ್‌ನಲ್ಲೂ ಬೀದಿದೀಪಗಳಿಲ್ಲ
ಬೈಪಾಸ್‌ ರಸ್ತೆಯ ಕಥೆ ಕೂಡ ಅಷ್ಟೆ. ಬೈಪಾಸ್‌ ರಸ್ತೆಯ ಎಲ್ಲಿಯೂ ಬೀದಿ ದೀಪಗಳಿಲ್ಲ. ಕಾಮಗಾರಿ ಕೆಲ ವರ್ಷಗಳ ಹಿಂದೆ ನಡೆದಿದ್ದರೂ ಅದಿನ್ನೂ ಅಪೂರ್ಣವಾಗಿದೆ. ಇತ್ತೀಚೆಗೆ ಡಿವೈಡರ್‌ ನಿರ್ಮಿಸುವ ಕೆಲಸ ಆರಂಭವಾಗಿವೆ. ಡಿವೈಡರ್‌ ಕಾಮಗಾರಿ ಪೂರ್ಣಗೊಳಿಸಿ, ದೀಪಗಳನ್ನು ಅಳವಡಿಸುವುದು ಬಾಕಿಯಿದೆ. ಬಂಗ್ಲೆಗುಡ್ಡೆಯಿಂದ ಸರ್ವಜ್ಞ ಜಂಕ್ಷನ್‌ ಕಳೆದು ಮುಂದಕ್ಕೂ ಎಲ್ಲಿಯೂ ಬೀದಿ ದೀಪಗಳಿಲ್ಲ. ಕಾಮಗಾರಿ ಪೂರ್ಣಗೊಂಡು ದಾರಿದೀಪ ಅಳವಡಿಸುವ ತನಕವೂ ಕತ್ತಲೆಯಲ್ಲಿ ರಸ್ತೆ ದಾಟುವುದು, ಓಡಾಡುವುದು ತಪ್ಪಿದ್ದಲ್ಲ. ಇದಕ್ಕೆ ಮುಕ್ತಿ ನೀಡಬೇಕೆಂಬುದು ಸಾರ್ವಜನಿಕರ ಆಗ್ರಹ.

ಪರಿಶೀಲಿಸಿ ಕ್ರಮ
ಸರ್ವಜ್ಞ ಜಂಕ್ಷನ್‌ನ ಹೈಮಾಸ್ಟ್‌ ದೀಪ ಪುರಸಭೆಗೆ ಅಥವಾ ಗ್ರಾಮ ಪಂಚಾಯತ್‌, ಇದರಲ್ಲಿ ಯಾರಿಗೆ ಸೇರುತ್ತದೆ ಎನ್ನುವ ಬಗ್ಗೆ ಸ್ಪಷ್ಟವಾಗಿ ತಿಳಿದಿಲ್ಲ. ಪುರಸಭೆ ವ್ಯಾಪ್ತಿಗೆ ಸೇರುವ ಸಾಧ್ಯತೆಯೇ ಹೆಚ್ಚು. ಈ ಬಗ್ಗೆ ಪರಿಶೀಲಿಸುವೆ.

– ಮಾಧವ ದೇಶ್‌ಪಾಂಡೆ, ಪಿಡಿಒ. ಕುಕ್ಕುಂದೂರು ಗ್ರಾ.ಪಂ.

ಬೆಳಕಿನ ವ್ಯವಸ್ಥೆ ಅಗತ್ಯ
ಜಂಕ್ಷನ್‌ನಲ್ಲಿ ರಾತ್ರಿ ಕಗ್ಗತ್ತಲು ಇರುವುದರಿಂದ ಮಂದ ಬೆಳಕಿನಲ್ಲಿ ಪಾದಚಾರಿಗಳು ರಸ್ತೆ ದಾಟುತ್ತಿದ್ದರೆ, ಗೊತ್ತೇ ಆಗುವುದಿಲ್ಲ. ಇಲ್ಲಿ ಹೆಚ್ಚು ಬೆಳಕಿನ ವ್ಯವಸ್ಥೆ ಮಾಡಬೇಕಿದೆ.

-ರಾಮಾನುಜಂ, ವಾಹನ ಸವಾರ

Advertisement

Udayavani is now on Telegram. Click here to join our channel and stay updated with the latest news.

Next