Advertisement

ಪ್ರಯಾಣಿಕ ತಂಗುದಾಣ ಇಲ್ಲದ ಬೈಂದೂರು

07:15 AM May 05, 2018 | Team Udayavani |

ಬೈಂದೂರು: ಬೈಂದೂರಿನ ಹೃದಯ ಭಾಗವಾದ ಜಂಕ್ಷನ್‌ ವ್ಯಾಪ್ತಿಯಲ್ಲಿ ಪ್ರತಿದಿನ ಪ್ರಯಾಣಿಕರು ಇಲಾಖೆಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಸುವ ಕಂಪೆನಿಗೆ ಹಿಡಿಶಾಪ ಹಾಕುವಂತಾಗಿದೆ. ಕಾರಣ ಇಲ್ಲಿ ತಾತ್ಕಾಲಿಕ ತಂಗುದಾಣವೂ ಇಲ್ಲದ್ದರಿಂದ ನಿತ್ಯ ಬಿಸಿಲಲ್ಲೇ ಬಸ್‌ಗೆ ಕಾಯುವಂತಾಗಿದೆ. 
 
ಪ್ರಯಾಣಿಕರಿಗೆ ಕಿರಿಕಿರಿ 
ತಾಲೂಕು ಕೇಂದ್ರವಾದ ಬೈಂದೂರಿನ ರಥಬೀದಿ ಹಲವು ರಸ್ತೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇದಕ್ಕೆ ತಾಗಿಕೊಂಡು ಇರುವ ಜಂಕ್ಷನ್‌ ದಟ್ಟನೆಯಿಂದ ಕೂಡಿದ್ದು, ಗಂಗನಾಡು,ಬೈಂದೂರು ಮುಂತಾದ ಕಡೆ ಸಂಪರ್ಕ ಕಲ್ಪಿಸುವ ಜೊತೆಗೆ ಕೊಲ್ಲೂರು, ಕುಂದಾಪುರ ಕಡೆ ಸಾಗುವ ಪ್ರಯಾಣಿಕರು ಇಲ್ಲೇ ಬಸ್ಸಿಗಾಗಿ ಕಾಯುತ್ತಾರೆ. ಹೆದ್ದಾರಿ ಕಾಮಗಾರಿಗೂ ಮೊದಲು ಇಲ್ಲೊಂದು ಪ್ರಯಾಣಿಕರ ತಂಗುದಾಣವನ್ನು ಸ್ಥಳೀಯ ಗ್ರಾ.ಪಂ ನಿರ್ಮಿಸಿತ್ತು. ಚತುಷ್ಪಥ ಕಾಮಗಾರಿ ಬಳಿಕ ಅದನ್ನು ತೆರವುಗೊಳಿಸಲಾಗಿದ್ದು, ಈಗ ಸಮರ್ಪಕ ಬಸ್ಸು ತಂಗುದಾಣವಿಲ್ಲದೆ ಪರದಾಡುವಂತಾಗಿದೆ.

Advertisement

ಅಪಾಯಕಾರಿ ಅಂಡರ್‌ಪಾಸ್‌ ಕಾಮಗಾರಿ 
ಬಸ್‌ ನಿಲ್ದಾಣ ಇಲ್ಲದಿದ್ದರೂ, ಇಲ್ಲಿನ ರಿಕ್ಷಾ ನಿಲ್ದಾಣದ ಬಳಿ ಆಲದ ಮರದಡಿ ಪ್ರಯಾಣಿಕರು ನೆರಳು ಪಡೆಯುತ್ತಿದ್ದರು. ಆದರೆ ಅಂಡರ್‌ಪಾಸ್‌ ಕಾಮಗಾರಿಗೆ ಇದನ್ನೂ ತೆರವುಗೊಳಿಸಲಾಗಿದೆ. ಇದರಿಂದಾಗಿ ಬಿರು ಬಿಸಿಲಿಗೆ ಬೇಯುವಂತಾಗಿದೆ. ಇದರೊಂದಿಗೆ   ಕಾಮಗಾರಿ ನಡೆಸುವ ಕಂಪೆನಿ ಯಾವುದೇ ಮುನ್ನೆಚ್ಚರಿಕೆ ಫಲಕಗಳನ್ನು ಅಳವಡಿಸದಿರುವುದರಿಂದ ಅಪಾಯಕಾರಿ ಜಂಕ್ಷನ್‌ ಆಗಿ ಮಾರ್ಪಟ್ಟಿದೆ.

ಪ್ರಯಾಣಿಕರ ಸಂಖ್ಯೆ ಅಧಿಕ
ಬೇಸಗೆಯಲ್ಲಿ ಪ್ರಯಾಣಿಕರ ಸಂಖ್ಯೆ ಅಧಿಕವಾಗಿರುತ್ತದೆ. ಶಾಲಾ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವಯೋವೃದ್ದರಿಗೆ ತಾತ್ಕಾಲಿಕವಾದರೂ ಬಿಸಿಲಿನಿಂದಾಗಿ ಕುಳಿತುಕೊಳ್ಳಲು ಹಾಗೂ ನೆರಳಿನ ವ್ಯವಸ್ಥೆ ಮಾಡದಿರುವುದು ಇಲಾಖೆಯ ನಿರ್ಲಕ್ಷ ಎಂದು ಪ್ರಯಾಣಿಕ ಚಂದ್ರ ಬೈಂದೂರು ಹೇಳುತ್ತಾರೆ

ತಂಗುದಾಣವಿಲ್ಲದೆ ನಿತ್ಯದ ಸಮಸ್ಯೆ
ಸೂಕ್ತ ತಂಗುದಾಣವಿಲ್ಲದಿರುವುದು ನಿತ್ಯದ ಸಮಸ್ಯೆಯಾಗಿದೆ. ಹೆದ್ದಾರಿ ಕಾಮಗಾರಿ ಮುಗಿದ ಬಳಿಕ ತಂಗುದಾಣ ನಿರ್ಮಾಣ ಮಾಡುವುದಾಗಿ ಕಾಮಗಾರಿ ನಡೆಸುವ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಬೇಸಗೆ ಕಾರಣ ತಾತ್ಕಾಲಿಕ ಬಸ್‌ ನಿಲ್ದಾಣ ನಿರ್ಮಿಸುವ ಕುರಿತು ಐಆರ್‌ಬಿ ಕಂಪೆನಿ ಅಧಿಕಾರಿಗಳಿಗೆ ತಿಳಿಸಲಾಗುವುದು.
– ರುಕ್ಕನಗೌಡ, ಪಿಡಿಒ, ಯಡ್ತರೆ

ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲು ಕ್ರಮ
ಬೈಂದೂರಿನಲ್ಲಿ ಈಗಿರುವ ಮುಖ್ಯರಸ್ತೆ ಸರ್ವಿಸ್‌ ರಸ್ತೆಯಾಗಿ ಮಾರ್ಪಡಲಿದೆ. ಚರಂಡಿ ಹಾಗೂ ಅಂಗಡಿ ಕಟ್ಟಡ ತೆರವು ಕಾರ್ಯ ನಡೆಯುತ್ತಿದೆ. ಕಾಮಗಾರಿ ಮುಗಿದ ಬಳಿಕ ಪ್ರಯಾಣಿಕರಿಗೆ ಅನುಕೂಲವಾಗುವಂತೆ ತಂಗುದಾಣ ಯಡ್ತರೆ ಹಾಗೂ ಬೈಂದೂರಿನಲ್ಲಿ ನಿರ್ಮಿಸುವ ಪ್ರಸ್ತಾವನೆ ಕಳುಹಿಸಲಾಗಿದೆ. ಬೇಸಗೆಯಲ್ಲಿ ಪ್ರಯಾಣಿಕರಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ.
– ಯೋಗೇಂದ್ರಪ್ಪ, ಪ್ರೊಜೆಕ್ಟ್ ಮೆನೇಜರ್‌ ಐ.ಆರ್‌.ಬಿ.

Advertisement

– ಅರುಣ್‌ ಕುಮಾರ್‌ ಶಿರೂರು 

Advertisement

Udayavani is now on Telegram. Click here to join our channel and stay updated with the latest news.

Next