ಕುಂದಾಪುರ: ಬೈಂದೂರಿನ ಶಿರೂರಿನಲ್ಲಿ ಕಳೆದ 11 ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ಒಬ್ಬರ ಸಾವಿಗೆ ಕಾರಣನಾದ ಚಾಲಕನಿಗೆ ಬೈಂದೂರು ಸಂಚಾರಿ ನ್ಯಾಯಾಲಯ ಪೀಠ 1 ವರ್ಷ ಜೈಲು ಶಿಕ್ಷೆ ನೀಡಿದೆ.
ಯಡ್ತರೆ ಗ್ರಾಮದ ಕಡ್ಕೆ ನಿವಾಸಿ ಚಂದ್ರ ಗೊಂಡ (33) ಶಿಕ್ಷೆಗೊಳಗಾದವ. 2011ರ ಅ.27ರಂದು ನೋಂದಣಿಯಾಗದ ಆಮ್ನಿ ಕಾರನ್ನು ಚಲಾಯಿಸುತ್ತಿದ್ದ ಚಂದ್ರ ಗೊಂಡ ರಸ್ತೆ ಹೊಂಡ ತಪ್ಪಿಸಲು ವಾಹನವನ್ನು ರಸ್ತೆ ಬದಿಗೆ ಕೊಂಡೊಯ್ದಾಗ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಢಿಕ್ಕಿ ಹೊಡೆದಿತ್ತು. ಕಾರಿನಲ್ಲಿದ್ದ ವೆಂಕಟೇಶ ನಾಯ್ಕ ಮೃತಪಟ್ಟಿದ್ದು ಚಾಲಕ ಸಹಿತ ಇತರರು ಗಾಯಗೊಂಡಿದ್ದರು. ಚಾಲಕನ ಬಳಿ ಲೈಸೆನ್ಸ್ ಇರಲಿಲ್ಲ. ವಿಚಾರಣೆ ನಡೆಸಿದ ನ್ಯಾಯಾಲಯ ಚಂದ್ರ ಗೊಂಡ ದೋಷಿ ಎಂದು ತೀರ್ಪು ನೀಡಿದ್ದು ವಿವಿಧ ಕಲಮುಗಳಡಿ ಶಿಕ್ಷೆ ವಿಧಿಸಿದೆ. ಗಾಯಾಳುಗಳಿಗೆ ತಲಾ 1 ಸಾವಿರ ರೂ., ಮೃತರ ಮನೆಯವರಿಗೆ 2 ಸಾವಿರ ರೂ. ಪರಿಹಾರ ನೀಡಬೇಕು ಎಂದು ಜೆಎಂಎಫ್ಸಿ ನ್ಯಾಯಾಧೀಶ ಧನೇಶ ಮುಗಳಿ ಅವರು ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ವರ್ಷಶ್ರೀ ಶೆಟ್ಟಿ ವಾದಿಸಿದ್ದರು. ನ್ಯಾಯಾಲಯ ಕಲಾಪ ಬೈಂದೂರಿಗೆ ವರ್ಗವಾದ ಬಳಿಕ ಪ್ರಕಟವಾದ ಮೊದಲ ಶಿಕ್ಷೆ ತೀರ್ಪು ಇದಾಗಿದೆ.
ಸೆ.255 ಅಡಿಯಲ್ಲಿ 2 ತಿಂಗಳು ಶಿಕ್ಷೆ, 500 ರೂ. ದಂಡ, ದಂಡ ತೆರಲು ತಪ್ಪಿದರೆ ಹೆಚ್ಚುವರಿ 15 ದಿನಗಳ ಶಿಕ್ಷೆ, ಸೆ.337ರಲ್ಲಿ 2 ತಿಂಗಳು ಜೈಲು, 300 ರೂ. ದಂಡ, ದಂಡ ನೀಡಲು ತಪ್ಪಿದರೆ 10 ದಿನಗಳ ಹೆಚ್ಚುವರಿ ಜೈಲು, ಸೆ.338ರಲ್ಲಿ 3 ತಿಂಗಳ ಜೈಲು, 500 ರೂ. ದಂಡ, ದಂಡ ತೆರಲು ತಪ್ಪಿದರೆ 15 ದಿನಗಳ ಜೈಲು, ಸೆ.304ಎಯಲ್ಲಿ 1 ವರ್ಷ ಜೈಲು, 5 ಸಾವಿರ ರೂ. ದಂಡ, ದಂಡ ನೀಡಲು ತಪ್ಪಿದರೆ 1 ತಿಂಗಳ ಶಿಕ್ಷೆ, ಮೋಟಾರು ವಾಹನ ಕಾಯ್ದೆ ಸೆ.3 ಪ್ರಕಾರ 500 ರೂ. ದಂಡ, ಅದಕ್ಕೆ ತಪ್ಪಿದರೆ 15 ದಿನಗಳ ಜೈಲು, ಮೋ. ಕಾಯ್ದೆ ಸೆ.39 ಪ್ರಕಾರ 3 ಸಾವಿರ ರೂ. ದಂಡ, ತಪ್ಪಿದರೆ 45 ದಿನಗಳ ಜೈಲು ಶಿಕ್ಷೆ ವಿಧಿಸಲಾಗಿದೆ.