Advertisement

ಸಾಕಾರಗೊಳ್ಳುತ್ತಿದೆ ಬೈಂದೂರು ತಾ|ಕೇಂದ್ರದ ಪೂರ್ಣತೆಯ ಕನಸು

07:25 PM Aug 10, 2021 | Team Udayavani |

ಬೈಂದೂರು: ಜಿಲ್ಲೆಯ ಗಡಿಭಾಗ ವಾದ ಬೈಂದೂರು ತಾ|  ಕೇಂದ್ರದ ಮಹತ್ತರ ಯೋಜನೆಗಳು ಹಂತ ಹಂತವಾಗಿ ಸಾಕಾರಗೊಳ್ಳುತ್ತಿದೆ. ಸಂಸದರು, ಶಾಸಕರ ಪ್ರಯತ್ನದ ಫಲವಾಗಿ ಒಂದೊಂದೇ ಕನಸುಗಳು ನನಸಾಗುತ್ತಿವೆ.

Advertisement

ಕೆಲವು ಇಲಾಖೆಗಳನ್ನು  ಹೊರತುಪಡಿಸಿದರೆ ಉಳಿದ ಯೋಜನೆಗಳ ಪ್ರಗತಿ ವೇಗ ಕಂಡಿದೆ. ಮಿನಿ ವಿಧಾನಸೌಧ, ಪ.ಪಂ, ಅಗ್ನಿಶಾಮಕ ಠಾಣೆ, ಆಹಾರ ಇಲಾಖೆ ಸೇರಿದಂತೆ ಬಹುತೇಕ ಎಲ್ಲ ಮೂಲಸೌಕರ್ಯಗಳನ್ನು ಒಳಗೊಂಡು ಪೂರ್ಣ ಪ್ರಮಾಣದ ತಾ| ಕೇಂದ್ರವಾಗಿ ಮಾರ್ಪಾಡುಗೊಳ್ಳುವ ಹಂತದಲ್ಲಿದೆ.

ಕಳೆದ ನಾಲ್ಕು ವರ್ಷದ ಹಿಂದೆ ಅಂದಿನ ಶಾಸಕ ಕೆ. ಗೋಪಾಲ ಪೂಜಾರಿ ಅವರ ವಿಶೇಷ ಕಾಳಜಿಯಿಂದಾಗಿ ರಾಜ್ಯದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೈಂದೂರು ಸೇರಿದಂತೆ 43 ನೂತನ ತಾಲೂಕನ್ನು ರಚನೆ ಮಾಡಿದ್ದರು, ಆದರೆ ನೂತನ ತಾಲೂಕು ಕೇಂದ್ರಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸುವ ಮುನ್ನ ಅವರ ಅವಧಿ ಪೂರ್ಣಗೊಂಡಿತ್ತು.  ಆ ಬಳಿಕ ಸಿಎಂ ಆಗಿದ್ದ ಯಡಿಯೂರಪ್ಪ ಮುಂದಾಳತ್ವದಲ್ಲಿ ಸಂಸದ ಬಿ.ವೈ. ರಾಘವೇಂದ್ರ,  ಬೈಂದೂರು ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ  ಅವರ ವಿಶೇಷ ಮುತುರ್ವಜಿ ವಹಿಸಿದ್ದರು. ಇದೀಗ ನೂತನ ಬೈಂದೂರು ಅಭಿವೃದ್ಧಿಯೆಡೆಗೆ ದಾಪುಗಾಲಿಡುತ್ತಿದೆ. ಪೂರ್ಣ ಪ್ರಮಾಣದ ತಾಲೂಕಾಗಿ ಮೇಲ್ದರ್ಜೆಗೇರುವ ನಿರೀಕ್ಷೆ ಮೂಡಿಸುತ್ತಿದೆ.

ಸಿಬಂದಿಯನ್ನು  ನಿಯೋಜನೆ:

ತಾ| ಕೇಂದ್ರದಲ್ಲಿ ಹಲವು ತಿಂಗಳುಗಳಿಂದ ತಹಶೀಲ್ದಾರ್‌ ಸೇರಿದಂತೆ ಹಲವು ಸಿಬಂದಿಯ ಕೊರತೆ ಕಂಡು ಬಂದಿತ್ತು, ಉದಯವಾಣಿ ಈ ಕುರಿತು ಗಮನ ಸೆಳೆದಿತ್ತು, ಇದಕ್ಕೆ ಸ್ಪಂದಿಸಿದ ಶಾಸಕ, ಸಂಸದರು ನೂತನ ತಹಶೀಲ್ದಾರ್‌ ಸೇರಿದಂತೆ ಅಗತ್ಯ ಸಿಬಂದಿಯನ್ನು  ನಿಯೋಜಿಸಲಾಗಿದೆ. ಪ. ಪಂ.ಗೆ ಎಂಜಿನಿಯರ್‌, ಕಂದಾಯ ನಿರೀಕ್ಷಕರು ಸೇರಿದಂತೆ ಖಾಲಿಯಿರುವ ಎಲ್ಲ ಸಿಬಂದಿ ನಿಯೋಜನೆಗೊಂಡಿದ್ದಾರೆ.

Advertisement

ಪಡಿತರ ಚೀಟಿಗಾಗಿ ಅಲೆದಾಟವಿಲ್ಲ:

ಸಂಸದರು, ಶಾಸಕರು ಕಳೆದ ಒಂದು ತಿಂಗಳ ಹಿಂದೆ  ಆಹಾರ ಇಲಾಖೆ  ಬೈಂದೂರಿನಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅಗತ್ಯ ವ್ಯವಸ್ಥೆ ಕಲ್ಪಿಸಿಕೊಟ್ಟರು. ಇದರಿಂದ  ಇಲ್ಲಿನ ಜನ ಪಡಿತರ ಚೀಟಿಗಾಗಿ ದೂರದ ಕುಂದಾಪುರಕ್ಕೆ ಅಲೆಯುವುದು ತಪ್ಪಿದಂತಾಗಿದೆ.

ವಸತಿಗೃಹ ನಿರ್ಮಾಣಕ್ಕಾಗಿ ಜಾಗ ಗುರುತು:

ಬೈಂದೂರಿನಲ್ಲಿ ನ್ಯಾಯಾಲಯ ನಿರ್ಮಾಣ, ನ್ಯಾಯಾಧೀಶರ ವಸತಿಗೃಹ ನಿರ್ಮಾಣಕ್ಕಾಗಿ ಇಲ್ಲಿನ ಕೇಂದ್ರಸ್ಥಾನದಲ್ಲಿ  ಈಗಾಗಲೇ ಎರಡು ಎಕ್ರೆ ಜಾಗ ಗುರುತಿಸುವ ಕಾರ್ಯ ನಡೆದಿದೆ, ಶೀಘ್ರ ನ್ಯಾಯಾಲಯ ನಿರ್ಮಾಣಕ್ಕೆ ಸಂಬಂಧಪಟ್ಟ ಇಲಾಖೆ ಹಸುರು ನಿಶಾನೆ ತೋರಿಸಿದೆ. ಇದರ ಜತೆಗೆ ರಥಬೀದಿ ಸಂಚಾರ ಸಮಸ್ಯೆ, ಪಟ್ಟಣ ವ್ಯಾಪ್ತಿಯ ಟ್ರಾಫಿಕ್‌ ಗೊಂದಲ , ಪ.ಪಂ., ಪೊಲೀಸ್‌,  ತಹಶೀಲ್ದಾರ್‌ ಜಂಟಿಯಾಗಿ ಇದುವರೆಗೂ ಕ್ರಮ ಕೈಗೊಂಡಿಲ್ಲ. ಒಟ್ಟಾರೆ ಬೈಂದೂರು ತಾ|  ನಿರೀಕ್ಷಿತ ವೇಗ ಕಾಣಲು ಸಂಸದರ ವೇಗದ ಜತೆಗೆ ಅಧಿಕಾರಿಗಳೂ ಹೆಜ್ಜೆ ಹಾಕಬೇಕಿದೆ.

 ಮಿನಿ ವಿಧಾನಸೌಧ :

ತಾ| ಮಟ್ಟದ ಎಲ್ಲ  ಇಲಾಖೆಗಳು ಒಂದೇ ಸೂರಿನಡಿಯಲ್ಲಿ ಕರ್ತವ್ಯ ನಿರ್ವಹಿಸಲು ಅನುಕೂಲ ವಾಗುವಂತೆ ಬೈಂದೂರಿನಲ್ಲಿ ಸುಮಾರು 10 ಕೋ.ರೂ. ವೆಚ್ಚದಲ್ಲಿ ಸುಸಜ್ಜಿತ ಮಿನಿ ವಿಧಾನಸೌಧ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ, ಇದರ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ಬಳಿಕ ತಾ| ಮಟ್ಟದ ಎಲ್ಲ ಇಲಾಖೆಗಳು ಇಲ್ಲಿ  ಕಾರ್ಯನಿರ್ವಹಿಸಲು ಅನುಕೂಲವಾಗಲಿದೆ.

ಬೈಂದೂರು ತಾ| ಪೂರ್ಣ ಪ್ರಮಾಣದ ತಾಲೂಕಾಗಿ ಮೇಲ್ದರ್ಜೆಗೇರಿಸುವ ಸಂಬಂಧ ಈಗಾಗಲೇ ತಾ|  ಕೇಂದ್ರಕ್ಕೆ ಅಗತ್ಯ ಸಿಬ್ಬದಿ, ಮಿನಿ ವಿಧಾನಸೌಧ ಸೇರಿದಂತೆ ಬಹುತೇಕ ಎಲ್ಲ  ಮೂಲಸೌಕರ್ಯ ಕಲ್ಪಿಸಲಾಗಿದೆ, ಇಲ್ಲಿನ ಮಿನಿ ವಿಧಾನಸೌಧ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ಬಳಿಕ ತಾಲೂಕು ಮಟ್ಟದ ಎಲ್ಲ  ಇಲಾಖೆಗಳು ಕಾರ್ಯಾರಂಭಗೊಳ್ಳಲು ಅಗತ್ಯ ಕ್ರಮ ಕೈಗೊಂಡು ಇದನ್ನು ಮಾದರಿ ಗ್ರಾಮವಾಗಿ ರೂಪಿಸಲಾಗುವುದು .-ಬಿ. ವೈ. ರಾಘವೇಂದ್ರ, ಸಂಸದರು, ಶಿವಮೊಗ್ಗ  ಲೋಕಸಭಾ ಕ್ಷೇತ್ರ

 

– ಅರುಣಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next