Advertisement
ಬೈಂದೂರು ತಾಲೂಕು ನಿರ್ಮಾಣದಲ್ಲಿರುವ ನಿರೀಕ್ಷೆಗಳೇನು?ಬೈಂದೂರು ತಾಲೂಕು ನಿರ್ಮಾಣದ ಬೇಡಿಕೆ ಇದ್ದಿರುವ ಕಾರಣ ಈಗಾಗಲೇ ಬಹುತೇಕ ಕಚೇರಿಗಳು ಹಾಗೂ ಮೂಲಸೌಕರ್ಯಗಳ ಪೂರೈಕೆಯಾಗಿದೆ. ಆದರೆ ಅಧಿಕೃತವಾಗಿ ಅಂತಿಮಗೊಳಿಸಬೇಕಾದ ಸಂದರ್ಭದಲ್ಲಿ ಭವಿಷ್ಯದ ಪರಿಕಲ್ಪನೆಯನ್ನು ಮನಗಂಡು ಕಚೇರಿಗಳನ್ನು ಸ್ಥಾಪಿಸಬೇಕಾಗಿದೆ. ಬಹುತೇಕವಾಗಿ ತಾಲೂಕು ಕೇಂದ್ರಕ್ಕೆ ಪ್ರಮುಖವಾಗಿರುವುದು ಕಂದಾಯ ಕಚೇರಿ. ಬೈಂದೂರಿನಲ್ಲಿ ಈಗಾಗಲೇ ವಿಶೇಷ ತಹಶೀಲ್ದಾರರ ಕಚೇರಿಯಿದೆ. ಪಶು ಆಸ್ಪತ್ರೆಯನ್ನು ಸ್ಥಳಾಂತರಿಸಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಅವಶ್ಯವಿರುವ ಜಾಗ ಕಾದಿರಿಸಲಾಗಿದೆ. ಇದರ ಜತೆಗೆ ಈ ಸ್ಥಳದ ಎದುರುಗಡೆ ಅಂದಾಜು ಎಂಬತ್ತು ಸೆಂಟ್ಸ್ ಜಾಗ ಅಂಚೆ ಕಚೇರಿಗೆ ಮೀಸಲಿಡಲಾಗಿದೆ.ಆದರೆ ಅಂಚೆ ಇಲಾಖೆ ಈ ಜಾಗವನ್ನು ಉಪಯೋಗಿಸಿಕೊಂಡಿಲ್ಲ. ಈ ಜಾಗವನ್ನು ಕಂದಾಯ ಇಲಾಖೆಯ ವ್ಯಾಪ್ತಿಗೆ ಸೇರಿಸಿದರೆ ರಾಷ್ಟ್ರೀಯ ಹೆದ್ದಾರಿ ಸಮೀಪದಿಂದಲೇ ಕಂದಾಯ ಇಲಾಖೆಯ ಕಚೇರಿ ಪ್ರಾರಂಬಿಸಲು ಸಾಧ್ಯವಾಗುತ್ತದೆ. ಮಾತ್ರವಲ್ಲದೆ ಉಡುಪಿ ಜಿಲ್ಲೆಯಲ್ಲಿಯೇ ಮಾದರಿ ತಾಲೂಕು ಕಚೇರಿಗಳ ಸಂಕೀರ್ಣ ಸ್ಥಾಪಿಸಬಹುದಾಗಿದೆ. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಯಬೇಕಾಗಿದೆ. ಬೈಂದೂರಿನಲ್ಲಿ ಹೆದ್ದಾರಿಯ ಸಮೀಪ ಬಸ್ಸು ನಿಲ್ದಾಣವಿದೆ. ನಿಲ್ದಾಣದ ಸಮೀಪ ವಿವಿಧ ಕಚೇರಿಗಳು ದೊರೆಯುವುದರಿಂದ ಸಾರ್ವಜನಿಕರು ಅಲೆದಾಡಬೇಕಾದ ಸಮಸ್ಯೆ ತಪ್ಪುತ್ತದೆ.
ಬಸ್ಸಿನ ವ್ಯವಸ್ಥೆ ಕಲ್ಪಿಸಬೇಕು
ಬೈಂದೂರು ತಾಲೂಕು ರಚನೆಯಾದಾಗ ಪ್ರಮುಖವಾಗಿ ಸಮಸ್ಯೆಯಾಗುವುದು ಹಳ್ಳಿಹೊಳೆ, ಶಂಕರನಾರಾಯಣ ಮುಂತಾದ ಊರುಗಳಿಗೆ. ಕಾರಣವೆಂದರೆ ಇಲ್ಲಿಯ ಜನರಿಗೆ ಕುಂದಾಪುರಕ್ಕೆ ಸೂಕ್ತ ಬಸ್ಸಿನ ವ್ಯವಸ್ಥೆಯಿದೆ.ಆದರೆ ಬೈಂದೂರಿಗೆ ಬರಬೇಕಾದರೆ ಎರಡೆರಡು ಬಸ್ಸುಗಳನ್ನು ಬದಲಾಯಿಸಬೇಕು. ಹೀಗಾಗಿ ಹಳ್ಳಿಹೊಳೆ, ಸಿದ್ದಾಪುರ, ಜಡ್ಕಲ್, ಆಲೂರು, ನಾಡ ಮುಂತಾದ ಊರುಗಳಿಂದ ಬೈಂದೂರಿಗೆ ನೇರ ಬಸ್ಸಿನ ವ್ಯವಸ್ಥೆ ಕಲ್ಪಿಸಬೇಕು.ಈಗಾಗಲೆ ಒಳ ರಸ್ತೆಗಳು ಅಭಿವೃದ್ಧಿಯಾದುದರಿಂದ ಸಂಪರ್ಕ ವ್ಯವಸ್ಥೆ ಸಮೀಪವಿದೆ. ಒಂದೊಮ್ಮೆ ಒಳರಸ್ತೆಗಳಿಗೆ ಬಸ್ಸು ಸಂಪರ್ಕ ಕಲ್ಪಿಸಿದರೆ ಬೈಂದೂರು ಕುಂದಾಪುರಕ್ಕಿಂತ ಸನಿಹವಾಗಲಿದೆ.ಬೈಂದೂರು ಶಾಸಕರು ರಾಜ್ಯ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿರುವ ಕಾರಣ ಬಸ್ಸು ಸಂಪರ್ಕ ಕಲ್ಪಿಸುವ ವಿಪುಲ ಅವಕಾಶಗಳಿವೆ. ಮಾತ್ರವಲ್ಲದೆ ಕಮಲಶಿಲೆ ಮುದೂರು, ಜಡ್ಕಲ್, ಮಾರ್ಗವಾಗಿ ಬೈಂದೂರು ನೇರ ಸಂಪರ್ಕ ಕಲ್ಪಿಸುವ ಬಸ್ಸುಗಳು ಸದ್ಯದಲ್ಲೆ ಪ್ರಾರಂಭವಾಗುವ ನಿರೀಕ್ಷೆಗಳಿವೆ. ಅಭಿವೃದ್ಧಿಗೆ ರಾಜಕೀಯ ಲಾಬಿ ಮರೆಯಬೇಕಿದೆ
ಬೈಂದೂರು ತಾಲೂಕು ರಚನೆಗೆ ಪ್ರತಿಯೊಬ್ಬರ ಸಹಕಾರಬೇಕು. ಆದರೆ ರಾಜಕೀಯ ಲೆಕ್ಕಾಚಾರ ಮತ್ತು ಉದ್ದಿಮೆದಾರರ ಲಾಬಿ ಅನಗತ್ಯ ಗೊಂದಲಕ್ಕೆ ಎಡೆಮಾಡಿಕೊಡುತ್ತಿದೆ. ಕುಂದಾಪುರ ನ್ಯಾಯಾಲಯದಲ್ಲಿರುವ ಪ್ರಕರಣಗಳಲ್ಲಿ ಅಧಿಕ ಸಂಖ್ಯೆಯ ಪ್ರಕರಣ ಬೈಂದೂರು ಭಾಗದ್ದಾಗಿದೆ.ಬೈಂದೂರು ಭಾಗದಲ್ಲಿ ನ್ಯಾಯಾಲಯ ನಿರ್ಮಾಣವಾದರೆ ಕುಂದಾಪುರಕ್ಕೆ ತೆರಳುವವರ ಸಂಖ್ಯೆ ಕಡಿಮೆಯಾಗುತ್ತದೆ. ಇದರಿಂದ ಕುಂದಾಪುರದ ವ್ಯವಹಾರದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ತೆರೆಮರೆಯ ಉದ್ಯಮ ಲಾಬಿ, ರಾಜಕೀಯ ಚಿಂತನೆಗಳು ಹಿನ್ನಡೆ ನೀಡುತ್ತಿವೆ.
Related Articles
ಬೈಂದೂರು ತಾಲೂಕು ರಚನೆಯಾದರೆ ತಾಲೂಕು ಪಂಚಾಯತ್ ಸಂಕೀರ್ಣ, ನ್ಯಾಯಾಲಯ, ಕೃಷಿ ಕಚೇರಿ, ಚುನಾವಣಾ ವಿಭಾಗ, ಆಹಾರ, ಭೂ ನ್ಯಾಯಮಂಡಳಿ, ಹೋಬಳಿ ಕಂದಾಯ ಪರಿವೀಕ್ಷಕರು, ಭೂ ಮಾಪನ ಅಧಿಕಾರಿಗಳು ನೇಮಕವಾಗಬೇಕು. ಈಗಾಗಲೇ ಶಿರೂರಿನಲ್ಲಿ ಮೂವತ್ತು ಕೋಟಿ ರುಪಾಯಿ ಅನುದಾನದಲ್ಲಿ ಉಪ್ಪುನೀರು ಸಂಸ್ಕರಣ ಘಟಕ ಸ್ಥಾಪನೆ ಪ್ರಕ್ರಿಯೆ ನಡೆಯುತ್ತಿದೆ. ಇವುಗಳೂ ಬಹುಗ್ರಾಮ ಪರಿಕಲ್ಪನೆಯಾದರೆ ಕುಡಿಯುವ ನೀರು ಸಮಸ್ಯೆ ನೀಗಿಸಬಹುದಾಗಿದೆ. ಪ್ರವಾಸೋದ್ಯಮಅಭಿವೃದ್ಧಿಗೆ ವಿಶೇಷ ಒತ್ತು ನೀಡುವ ಮೂಲಕ ಸೋಮೇಶ್ವರ, ಮರವಂತೆ, ಕೊಸಳ್ಳಿ ಜಲಪಾತ, ಕೊಲ್ಲೂರು ಸೇರಿದಂತೆ ಪ್ರಮುಖ ಸ್ಥಳಗಳ ಪ್ರಗತಿಗೆ ಯೋಜನೆ ರೂಪಿಸಬೇಕು.
Advertisement
ಬೈಂದೂರು ಹೋಬಳಿ ವಿಂಗಡನೆಯಾಗದುತಾಲೂಕಿಗೆ ಅವಶ್ಯವಿರುವ ಯೋಜನೆಗಳು ಎಪ್ರಿಲ್ 7 ರ ಬಳಿಕ ಹಂತ ಹಂತ ವಾಗಿ ಜಾರಿಯಾಗಲಿವೆ. ಮಾತ್ರವಲ್ಲದೆ ಬೈಂದೂರು ಹೋಬಳಿಗೆ ಒಳಪಡುವ ಯಾವುದೇ ಪ್ರದೇಶಗಳನ್ನು ವಿಂಗಡನೆ ಮಾಡಲಾಗುವುದಿಲ್ಲ.ಇವೆಲ್ಲವು ಬೈಂದೂರು ತಾಲೂಕಿಗೆ ಸೇರ್ಪಡೆಯಾಗುತ್ತವೆ. ಮಾತ್ರವಲ್ಲದೆ ಕಾನೂನಾತ್ಮಕವಾಗಿ ವಿಂಗಡನೆ ಸಾಧ್ಯವಿಲ್ಲ.ವಂಡ್ಸೆ ಕುಂದಾಪುರ ಕುರಿತು ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಜನರ ಅನುಕೂಲದ ಆಧಾರದಲ್ಲಿ ಆದ್ಯತೆ ಪರಿಗಣಿಸಲಾಗುವುದು.
-ಕೆ. ಗೋಪಾಲ ಪೂಜಾರಿ, ಬೈಂದೂರು ಶಾಸಕ ಮೂಲ ಸೌಕರ್ಯ ಶೀಘ್ರ ಒದಗಿಸಬೇಕು
ತಾಲೂಕು ಘೋಷಣೆಗೆ ಮಾತ್ರ ಸೀಮಿತವಾಗಬಾರದು. ಯೋಜನೆಗಳ ಶೀಘ್ರ ಅನುಷ್ಠಾನ ಗೊಳ್ಳಬೇಕು. ಜನಸಾಮಾನ್ಯರ ನಿರೀಕ್ಷೆಗಳಿಗೆ ಮನ್ನಣೆ ನೀಡಬೇಕು. ಪ್ರಾಂತೀಯ ವಿಭಾಗದ ಸಮಸ್ಯೆಗಳು ಸಾರ್ವಜನಿಕರಿಗೆ ತೊಂದರೆಯಾಗದಂತೆ ವಿಂಗಡಿಸಬೇಕಾಗಿದೆ.ತಾಲೂಕು ಕೇಂದ್ರದಲ್ಲಿ ಎಲ್ಲ ಸೌಲಭ್ಯಗಳು ದೊರೆಯಬೇಕು.
-ಬಿ.ಎಂ. ಸುಕುಮಾರ ಶೆಟ್ಟಿ, ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ – ಅರುಣ ಕುಮಾರ್ ಶಿರೂರು