Advertisement

ಬೈಂದೂರು ಮಾದರಿ ತಾ|ರಚನೆಗೆ ಅನಧಿಕೃತ ಕಟ್ಟಡಗಳೇ ಅಡ್ಡಿ

02:13 AM Feb 04, 2021 | Team Udayavani |

ಬೈಂದೂರು: ಜಿಲ್ಲೆಯ ಬಹುನಿರೀಕ್ಷಿತ ಹಾಗೂ ವೇಗದ ಪ್ರಗತಿ ಕಾಣುತ್ತಿರುವ ತಾಲೂಕು ಕೇಂದ್ರದ ಅಭಿವೃದ್ಧಿಗೆ ಅಕ್ರಮ ಕಟ್ಟಡಗಳೇ ಸಮಸ್ಯೆ ಯಾಗಿ ಕಾಡುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಜಿಲ್ಲಾಡಳಿತ ಎಚ್ಚರ ವಹಿಸಬೇಕಿದೆ.

Advertisement

ದಿನೇ ದಿನೇ ಹಲವು ಅಕ್ರಮ ಕಟ್ಟಡಗಳು ತಲೆ ಎತ್ತುತ್ತಿದ್ದು, ಸಂಬಂಧಪಟ್ಟ ಇಲಾಖೆಗಳು ಗಮನಹರಿಸದಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಹೀಗಾಗಿ ಮಾದರಿ ಬೈಂದೂರು ತಾಲೂಕೂ ಉಳಿದ ಕೆಲವು ತಾಲೂಕುಗಳಂತೆಯೇ ಅಡ್ಡಾದಿಡ್ಡಿಯಾಗಿ ರೂಪುಗೊಳ್ಳುತ್ತದೋ ಎಂಬ ಆತಂಕ ಜನರನ್ನು ಆವರಿಸಿದೆ.

ಹತ್ತು ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಊಹೆಗೂ ನಿಲುಕದಷ್ಟು ಬೆಳವಣಿಗೆಯಾಗುತ್ತಿದೆ. ಸೂಕ್ತ ದಾಖಲೆಗಳಿಲ್ಲದೇ ಪ್ರತಿ ಗ್ರಾಮದಲ್ಲೂ ನೂರಾರು ಕಟ್ಟಡ ಗಳು ನಿರ್ಮಾಣವಾಗಿವೆ ಎಂಬ ಆರೋಪವೂ ಕೇಳಿಬಂದಿದೆ.

ಜಿಲ್ಲಾಧಿಕಾರಿಗೆ ದೂರು

ಯಡ್ತರೆಯಿಂದ ಹೊಸ ಬಸ್‌ ನಿಲ್ದಾಣದವರೆಗೆ ಹಾಗೂ ರಥಬೀದಿ ಗಳಲ್ಲಿ ಹಲವು ಕಟ್ಟಡಗಳು ನಿಯಮವನ್ನು ಪಾಲಿಸದ ಆರೋಪಕ್ಕೆ ಗುರಿಯಾಗಿವೆ. ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ 108/15ರಲ್ಲಿ ನಿಯಮಾನುಸಾರ ಅನುಮತಿ ಪಡೆಯದೆ ಬಹುಮಹಡಿ ಕಟ್ಟಡ ನಿರ್ಮಿಸುತ್ತಿರುವ ಕುರಿತೂ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ. ಹೆದ್ದಾರಿ ಇಲಾಖೆ, ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ಜನರು ದಾವೆ ಹೂಡಿದ್ದಾರೆ.

Advertisement

ರಥಬೀದಿಯಲ್ಲಿ ಸಂಚಾರವೇ ದುಸ್ತರ

ಬೈಂದೂರಿನ ಬಹುತೇಕ ಕಚೇರಿಗಳಿಗೆ ಪ್ರಮುಖ ಸಂಪರ್ಕ ಕಲ್ಪಿಸುವುದು ಇಲ್ಲಿನ ರಥಬೀದಿ ರಸ್ತೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇಲ್ಲಿ ನಡೆದು ಕೊಂಡು ಹೋಗುವುದು ಕೂಡ ಅಸಾಧ್ಯ ಎಂಬಂತಾಗಿದೆ. ಒಂದೆಡೆ ರಸ್ತೆಗೆ ತಾಗಿಕೊಂಡಿರುವ ಕಟ್ಟಡ, ಅನಧಿಕೃತ ಪೆಟ್ಟಿಗೆ ಅಂಗಡಿಗಳು, ರಸ್ತೆಯುದ್ದಕ್ಕೂ ಸಾಲಾಗಿ ವ್ಯಾಪಾರ ಮಾಡುವ ತರಕಾರಿ, ಹಣ್ಣು ವ್ಯಾಪಾರಿಗಳು, ರಸ್ತೆ ಯಂಚಿನಲ್ಲೇ ವಾಹನ ಪಾರ್ಕಿಂಗ್‌ ಒಟ್ಟಾರೆ ಅರ್ಧ ಕಿ.ಮೀ.  ಕ್ರಮಿಸಬೇಕಾದರೆ ಬೆವರಿಳಿಯು ವಂತಾಗುತ್ತದೆ. ಹೀಗಾಗಿ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಗಳು ಗಂಭೀರವಾಗಿ ಪರಿಗಣಿಸಬೇಕಿದೆ. ಬೈಂದೂರಿನ ಭವಿಷ್ಯದ ಹಿತದೃಷ್ಟಿ ಯಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉದ್ಯಮಿಗಳ ಪರ ನಿಲ್ಲದೆ ಸಾರ್ವಜನಿಕ ಸೌಲಭ್ಯಗಳ ಬಗ್ಗೆ ಒತ್ತು ನೀಡಬೇಕಾಗಿದೆ.

ಅತಿಕ್ರಮಣ ತೆರವಿಗೆ ಹಲವು ನಿಯಮಗಳು

ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ರಾಜ್ಯ ಸರಕಾರ ಅತಿಕ್ರಮಣ ತೆರವಿಗೆ ಬಹಳಷ್ಟು ಪ್ರಾಮುಖ್ಯ  ನೀಡಿದೆ ಮತ್ತು ಕಠಿನವಾದ ನಿಯಮಗಳನ್ನು ರೂಪಿಸಿದೆ. ಇದರ ಪ್ರಕಾರ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಕಟ್ಟಡ ನಿರ್ಮಿಸಬೇಕಾದವರು ಕಡ್ಡಾಯವಾಗಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಅನುಮತಿ ಪಡೆಯಬೇಕು ಮತ್ತು ಹೆದ್ದಾರಿ ಮಧ್ಯ ಭಾಗದಿಂದ 40 ಕಿ.ಮೀ. ಅಂತರ ಇರಬೇಕು. ಜಿಲ್ಲಾ ಪಂಚಾಯತ್‌ ರಸ್ತೆ ಪಕ್ಕದಲ್ಲಿ ಕಟ್ಟಡ ನಿರ್ಮಿಸಬೇಕಾದರೆ ಕನಿಷ್ಠ 12.5 ಮೀಟರ್‌ ಅಂತರ ಬಿಡಬೇಕು. ಬಳಿಕ ಸೆಟ್‌ಬ್ಯಾಕ್‌ ಎರಡಕ್ಕಿಂತ ಅಧಿಕ ಮಹಡಿ ನಿರ್ಮಿಸಬೇಕಾದರೆ ಪ್ರತ್ಯೇಕ ಅನುಮತಿ, ಪಾರ್ಕಿಂಗ್‌, ಅಗ್ನಿಶಾಮಕ ಸೇರಿದಂತೆ ಹಲವು ನಿಯಮಗಳಿವೆ.

ಇದನ್ನೂ ಓದಿ:ಶಾಲಾ-ಕಾಲೇಜು ಶುಲ್ಕ ಸಮಸ್ಯೆ ಪರಿಹಾರಕ್ಕೆ ಸಮಿತಿಗಳ ರಚನೆ:  ಸುರೇಶ್ ಕುಮಾರ್

ಮಾಹಿತಿಗೆ ಸ್ವಾತಂತ್ರ್ಯ ಪೂರ್ವದ ಕಡತ ಪರಿಶೀಲಿಸಬೇಕು. ಗಂಗನಾಡು ರಸ್ತೆಯಿಂದ ಪ್ರತಿ ಹಂತದಲ್ಲೂ ನಿಯಮ ಬಾಹಿರವಾಗಿ ಕಟ್ಟಡ ನಿರ್ಮಾಣವಾಗುತ್ತಿದೆ. ಪರವಾನಿಗೆ ಇಲ್ಲದೆ ಬಹುಮಹಡಿ ಕಟ್ಟಡ ನಿರ್ಮಾಣವಾಗುತ್ತಿದೆ. ಜಂಕ್ಷನ್‌ ನಿಂದಹೊಸ ಬಸ್‌ ನಿಲ್ದಾಣ, ರಥ ಬೀದಿ ಗಳಲ್ಲಿ  ಬಹುತೇಕ ಕಟ್ಟಡಗಳು ನಿಯಮಬಾಹಿರವಾಗಿವೆ. ಹಣ ಹಾಗೂ  ರಾಜಕೀಯ ಪ್ರಭಾವ ಮೇಳೈಸಿದೆ. ಹೀಗಾಗಿ ಜಿಲ್ಲಾಡಳಿತ ಪುನರ್‌ ಪರಿಶೀಲನೆ ನಡೆಸಿ ಅನಧಿಕೃತ ಕಟ್ಟಡಗಳನ್ನು ಕೆಡವಬೇಕು. ಬೈಂದೂರು ಸಂಚಾರ ಸುಗಮಗೊಳಿಸಬೇಕು.

ವೆಂಕಟೇಶ ಕಾರಂತ, ಸಾಮಾಜಿಕ ಕಾರ್ಯಕರ್ತ, ಬೈಂದೂರು

ಅರುಣ್ ಕುಮಾರ್ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next