ಕುಂದಾಪುರ: ಕಸ್ತೂರಿ ರಂಗನ್ ವರದಿ ಇರಬಹುದು, ಇನ್ನಾವುದೇ ಇರಬಹುದು ಅರಣ್ಯದಂಚಿನ ವಾಸಿಗಳನ್ನು ಒಕ್ಕಲೆಬ್ಬಿಸುವುದಕ್ಕೆ ನನ್ನ ಪ್ರಬಲ ವಿರೋಧವಿದೆ. ಅರಣ್ಯ ವಾಸಿಗಳು ಪರಿಸರ ನಾಶ ಮಾಡುವುದಿಲ್ಲ. ಅವರು ಅರಣ್ಯರಕ್ಷಕರು, ಅರಣ್ಯದ ಜತೆಜತೆಗೇ ಬಾಳುವವರು. ಕಾಡಿನ ನಾಶ, ಪರಿಸರಹಾನಿ ಏನಿದ್ದರೂ ನಾಡಿನ ಜನರಿಂದ ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದ್ದಾರೆ.
ಅವರು ಶನಿವಾರ “ಉದಯವಾಣಿ’ ಮಣಿಪಾಲ ಕಚೇರಿಯಲ್ಲಿ ನಡೆದ “ಶಾಸಕರ ಜತೆ ನಮ್ಮ ಮಾತುಕತೆ’ ಸರಣಿಯಲ್ಲಿ ಮಾತನಾಡಿದರು.
ಬೊಮ್ಮಾಯಿ ನೇತೃತ್ವದ ಸರಕಾರ ಈಗಾಗಲೇ ಕಸ್ತೂರಿ ರಂಗನ್ ವರದಿಗೆ ವಿರೋಧ ಸೂಚಿ ಸಿದೆ. ಕೇಂದ್ರಕ್ಕೆ ನಿಯೋಗ ವನ್ನೂ ಒಯ್ಯ ಲಿದೆ. ನಾನೂ ಇದರಲ್ಲಿ ಭಾಗಿಯಾಗಿ ಅಭಿಪ್ರಾಯ ಮಂಡಿಸ ಲಿದ್ದೇನೆ. ಬೈಂದೂರು ವಿಧಾನ ಸಭಾ ಕ್ಷೇತ್ರದ 16 ಗ್ರಾಮಗಳು ಈ ವರದಿಯ ವ್ಯಾಪ್ತಿ ಯಲ್ಲಿದ್ದು ಜನರು ಭಯಪಡುವ ಅಗತ್ಯವಿಲ್ಲ. ಕೇಂದ್ರ ಅಭಿಪ್ರಾಯವನ್ನಷ್ಟೇ ಕೇಳಿದ್ದು ಜಾರಿ ಮಾಡಿಲ್ಲ ಎಂದರು.
ಬೈಂದೂರಿನಲ್ಲಿ 100 ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಕಳೆದ ವಾರ ಆರೋಗ್ಯ ಸಚಿವ ರನ್ನು ಭೇಟಿ ಮಾಡಿ ಮರು ಮನವಿ ಸಲ್ಲಿಸಿದ್ದೇನೆ. ರಾಜ್ಯ ದಲ್ಲಿ 10 ಆಸ್ಪತ್ರೆ ನಿರ್ಮಾಣ ವಾಗಲಿದ್ದು ಬೈಂದೂರನ್ನು ಸೇರಿಸುವಂತೆ ವಿನಂತಿಸಿದ್ದೇನೆ. ಕುಂದಾಪುರ – ಗಂಗೊಳ್ಳಿ ಸೇತುವೆ ನಿರ್ಮಾಣ ನನ್ನ ಬಹುಕಾಲದ ಕನಸು. ಇದ ರಿಂದಾಗಿ 17 ಕಿ.ಮೀ. ಸುತ್ತಾಟ ತಪ್ಪಲಿದೆ. ಆದರೆ ದೊಡ್ಡ ಮೊತ್ತ ಬೇಕಾಗುವ ಕಾರಣ ಕೇಂದ್ರದ ಮೊರೆ ಹೋಗುವುದು ಅನಿವಾರ್ಯ. ಸಂಸದ ಬಿ.ವೈ. ರಾಘವೇಂದ್ರ ಅವರ ಜತೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಬೇಡಿಕೆ ಸಲ್ಲಿಸಲಿದ್ದೇನೆ ಎಂದರು.
ಕೇಬಲ್ ಕಾರ್‌ನಿಂದ ಪರಿಸರ ನಾಶವಿಲ್ಲ :
ಕೊಡಚಾದ್ರಿ ಕೇಬಲ್ ಕಾರ್ ನಿರ್ಮಾಣದಿಂದ ಪರಿಸರ ನಾಶ ಆಗುವುದಿಲ್ಲ. ಕೇಬಲ್ ಕಾರಿನಲ್ಲಿ ಸಂಚರಿಸಿ ದೃಶ್ಯ ವೀಕ್ಷಣೆಗೆ ಮಾತ್ರ ಅವಕಾಶ. ಕಾಡಿನಲ್ಲಿ ಇಳಿಯಲು ಅವಕಾಶ ಇಲ್ಲ. ಆದ್ದರಿಂದ ಪರಿಸರ ನಾಶ ಆಗದಂತೆ ಯೋಜನೆ ರೂಪುಗೊಳ್ಳಲಿದೆ. ದಿನಂಪ್ರತಿ 5 ಸಾವಿರ ಮಂದಿ ಅಲ್ಲಿಗೆ ಆಗಮಿಸಿ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ. ಬೈಂದೂರು ಕ್ಷೇತ್ರಕ್ಕೆ ವಸತಿ ಯೋಜನೆ, ವೈಯಕ್ತಿಕ ಫಲಾನುಭವಿಗಳ ಹೊರತಾಗಿ 4 ವರ್ಷದಲ್ಲಿ 1,940 ಕೋ.ರೂ. ಅನುದಾನ ಬಂದಿದೆ. ಮನೆಮನೆಗೆ ಕುಡಿಯುವ ನೀರಿಗೆ 737 ಕೋ.ರೂ. ಅನುದಾನ ವಿನಿಯೋಗವಾಗುತ್ತಿದೆ ಎಂದರು.
ಪ್ರವಾಸೋದ್ಯಮ, ಕೃಷಿ, ಕೈಗಾರಿಕೆ, ಉದ್ಯೋಗ ಸೃಜನೆ, ರಸ್ತೆ ಅಭಿವೃದ್ಧಿ ಸೇರಿದಂತೆ ಕ್ಷೇತ್ರವನ್ನು ಮಾದರಿ ಯಾಗಿಸಿ ಅಭಿವೃದ್ಧಿಗೆ ಪಣತೊಡಲಾಗಿದೆ ಎಂದರು.
“ಉದಯವಾಣಿ’ ಪರವಾಗಿ ಶಾಸಕರನ್ನು ಗೌರವಿಸಲಾಯಿತು.