Advertisement
165 ಹೊಸಬರ ಸಿನಿಮಾಗಳಲ್ಲಿ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಿದ, ಪ್ರೇಕ್ಷಕರ ಬಾಯಲ್ಲಿ ಕುಣಿದಾಡಿದ ಸಿನಿಮಾ ಯಾವುದೆಂದು ಕೇಳಿದರೆ ಉತ್ತರಿಸೋದು ಕಷ್ಟ. ಸ್ಟಾರ್ಗಳ ಸಿನಿಮಾಕ್ಕಿಂತ ಹೆಚ್ಚಾಗಿ ಇವತ್ತು ಗೆಲುವಿನ ಅಗತ್ಯವಿರೋದು ಹೊಸಬರಿಗೆ. ಆದರೆ, ಈ ಹತ್ತು ತಿಂಗಳಲ್ಲಿ ಹೊಸಬರಿಗೆ ಹೇಳಿಕೊಳ್ಳುವಂತಹ ಗೆಲುವು ಸಿಗಲಿಲ್ಲ ಎಂಬುದು ಕಟುಸತ್ಯ. ಇದನ್ನು ಕೇಳಿ ಅನೇಕರಿಗೆ ಬೇಸರವಾಗಬಹುದು, ಇನ್ನು ಕೆಲವರಿಗೆ ತಮ್ಮ ಸಿನಿಮಾ ಕಥೆ ಏನೋ ಎಂಬ ಆತಂಕ ಕಾಡಬಹುದು, ಸಿನಿಮಾ ಸಹವಾಸವೇ ಸಾಕಪ್ಪಾ ಎಂಬ ಯೋಚನೆಯೂ ಒಂದಷ್ಟು ಮಂದಿಗೆ ಬರಬಹುದು. ಆದರೆ, ಕಳೆದ ಹತ್ತು ತಿಂಗಳು ಹೊಸಬರಿಗೆ ಆಶಾದಾಯವಾಗಿರಲಿಲ್ಲ ಎಂಬುದು ಮಾತ್ರ ಒಪ್ಪಿಕೊಳ್ಳಬೇಕಾದ ವಾಸ್ತವ.
Related Articles
Advertisement
ಮೆಚ್ಚುಗೆ ಪಡೆದ ಅನೇಕ ಸಿನಿಮಾ ತಂಡಗಳು ಮಾಧ್ಯಮ ಮುಂದೆ ಬಂದು ಸಕ್ಸಸ್ ಮೀಟ್ ಮಾಡಿದವು. ಆದರೆ ನಿರ್ಮಾಪಕರು ಸೇಫಾ ಎಂಬ ಪ್ರಶ್ನೆಗೆ ಮಾತ್ರ ಅವರ ಬಳಿ ಉತ್ತರವಿರಲಿಲ್ಲ. ಏಕೆಂದರೆ ಚಿತ್ರಮಂದಿರದಿಂದ ಬಂದ ಕಲೆಕ್ಷನ್ನಲ್ಲಿ ಸಿನಿಮಾ ನಿರ್ಮಾಪಕ ಸೇಫ್ ಆದರೆ ಅದರ ಖುಷಿಯೇ ಬೇರೆ. ಆದರೆ, ಈ ಬಾರಿ ಕಲೆಕ್ಷನ್ನಿಂದ ಸೇಫ್ ಆದವರು ತೀರಾ ಕಡಿಮೆ. ಓಟಿಟಿ, ಸ್ಯಾಟ್ಲೈಟ್, ಡಬ್ಬಿಂಗ್ ಮಾತುಕತೆ ನಡೆಯುತ್ತಿದೆ ಎಂದು ಹೇಳಿದ ನಿರ್ಮಾಪಕರೇ ಹೆಚ್ಚು.
ಚಿತ್ರರಂಗಕ್ಕೆ ವರ್ಷಪೂರ್ತಿ ಹೊಸಬರೇ ಆಸರೆ
ಬೆರಳೆಣಿಕೆಯಷ್ಟು ಬಿಗ್ ಬಜೆಟ್ ಸ್ಟಾರ್ ಸಿನಿಮಾಗಳನ್ನು ಹೊರತುಪಡಿಸಿದರೆ, ವರ್ಷವಿಡೀ ಥಿಯೇಟರ್ಗಳಿಗೆ ಜೀವ ತುಂಬುವುದು ಹೊಸಬರು ಮತ್ತು ಮಧ್ಯಮ ಬಜೆಟ್ ಸಿನಿಮಾಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಇಡೀ ಚಿತ್ರರಂಗದ ಬಹುಪಾಲು ಕಲಾವಿದರು, ತಂತ್ರಜ್ಞರು, ನಿರ್ದೇಶಕರು, ವಿತರಕರು, ಪ್ರದರ್ಶಕರು, ಕಾರ್ಮಿಕರು ಹೀಗೆ ಎಲ್ಲರಿಗೂ ಚಿತ್ರೋದ್ಯಮದಲ್ಲಿ ಬದುಕು ಕಟ್ಟಿಕೊಳ್ಳಲು ಆಸರೆಯಾಗಿರುವುದೇ ಇಂಥ ಸಿನಿಮಾಗಳು. ಹಾಗಾಗಿ ಬಿಗ್ ಬಜೆಟ್ ಸ್ಟಾರ್ ಸಿನಿಮಾಗಳ ಜೊತೆ ಜೊತೆಗೇ ಇಂಥ ಸಿನಿಮಾಗಳನ್ನೂ ಪ್ರೇಕ್ಷಕ ಪ್ರಭುಗಳು ಮತ್ತು ಚಿತ್ರರಂಗ ಒಟ್ಟಾಗಿ ಬೆನ್ನುತಟ್ಟಿದರೆ, ಹೊಸಬರು ಮತ್ತು ಮಧ್ಯಮ ಬಜೆಟ್ ಸಿನಿಮಾಗಳು ಉಸಿರಾಡಬಹುದು.
ಹಾಸ್ಟೆಲ್ ಹುಡುಗರಂತಹ ಗೆಲುವು ಬೇಕು
ಸಂಪೂರ್ಣ ಹೊಸಬರ ಸಿನಿಮಾವಾಗಿ ಕಳೆದ ವರ್ಷ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಿದ ಹೊಸಬರ ಸಿನಿಮಾವೆಂದರೆ ಅದು “ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’. ಈ ಚಿತ್ರ ಭರ್ಜರಿ ಪ್ರದರ್ಶನದೊಂದಿಗೆ ಚಿತ್ರಮಂದಿರದ ಕಲೆಕ್ಷನ್ನಿಂದಲೇ ನಿರ್ಮಾಪಕರ ಜೇಬು ತುಂಬಿತ್ತು. ಹೊಸಬರಿಗೆ ಬೇಕಾಗಿರುವುದು ಇಂತಹ ಗೆಲುವೇ ಹೊರತು ಕುಂಟುತ್ತಾ ಸಾಗುವ ಗೆಲುವಲ್ಲ. ಆದರೆ, ಈ ವರ್ಷ ಮಾತ್ರ ಇಂತಹ ಗೆಲುವು ಸ್ಯಾಂಡಲ್ವುಡ್ ಕಡೆ ತಲೆ ಹಾಕಿ ಮಲಗಲೇ ಇಲ್ಲ
ರವಿಪ್ರಕಾಶ್ ರೈ