ಕುಂದಾಪುರ: ಮಂಗಳೂರು -ಪಣಜಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂದಾಪುರದಿಂದ ಗೋವಾ ಗಡಿಯವರೆಗೆ ನಡೆಯುತ್ತಿರುವ ಕಾಮಗಾರಿ ಭಾಗಶಃ ಪೂರ್ತಿಯಾಗಿದ್ದು, ಎರಡು ದಿನಗಳಲ್ಲಿ ಮುಳ್ಳಿಕಟ್ಟೆ ಕ್ರಾಸ್‌ನಿಂದ ಬೈಂದೂರಿನವರೆಗೆ ಏಕಮುಖ ಸಂಚಾರಕ್ಕೆ ಅನುವಾಗುವಂತೆ ಎರಡೂ ಬದಿ ರಸ್ತೆಗಳನ್ನು ಸಂಚಾರಕ್ಕೆ ಬಿಟ್ಟುಕೊಡಲು ಗುತ್ತಿಗೆದಾರ ಸಂಸ್ಥೆ ಐಆರ್‌ಬಿ ಒಪ್ಪಿಕೊಂಡಿದೆ. ಎರಡು ಸೇತುವೆ ಮತ್ತು ಒಂದು ಅಂಡರ್‌ಪಾಸನ್ನು ಈಗಾಗಲೇ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಕುಂದಾಪುರ ಎಸಿ ಡಾ| ಎಸ್.ಎಸ್. ಮಧುಕೇಶ್ವರ್ ಅವರು ಮಂಗಳವಾರ ಕಚೇರಿಯಲ್ಲಿ ಈ ಕುರಿತು ಸಭೆ ನಡೆಸಿ ಶೀಘ್ರ ಕಾಮಗಾರಿಯಾದ ರಸ್ತೆಗಳನ್ನು ಸಂಚಾರಕ್ಕೆ ಬಿಟ್ಟುಕೊಡುವಂತೆ ಸೂಚಿಸಿದರು.
ಡಿವೈಎಸ್‌ಪಿ ಬಿ.ಪಿ. ದಿನೇಶ್ ಕುಮಾರ್ ಅವರು, ಈಗ ಬಿಟ್ಟುಕೊಟ್ಟಿರುವುದು ಗೊಂದಲಕ್ಕೆ ಆಸ್ಪದವಾಗಿದೆ. ಇದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ದ್ವಿಮುಖ ಸಂಚಾರ ಎರಡೂ ರಸ್ತೆಗಳಲ್ಲಿ ನಡೆಯು ತ್ತಿದ್ದು, ಸಮರ್ಪಕವಾದ ದಾರಿ ಸೂಚನೆ ಚಿಹ್ನೆಗಳು ಕೂಡ ಇಲ್ಲ. ಅಪಘಾತ ತಾಣಗಳಿಗೆ ಅವಶ್ಯ ಕಾಮಗಾರಿ ನಡೆಸ ಬೇಕು. ಕೂಡು ರಸ್ತೆಗಳು ಇರುವಲ್ಲಿ ರಿಫ್ಲೆಕ್ಟರ್‌ಗಳ ಅಳವಡಿಕೆ ಮಾಡಬೇಕು ಎಂದರು.
ಗುತ್ತಿಗೆದಾರ ಸಂಸ್ಥೆ ಐಆರ್‌ಬಿಯ ಎಂಜಿನಿಯರ್ ಯೋಗೇಂದ್ರಪ್ಪ ಮಾತನಾಡಿ, ಸಂಗಂ, ತಲ್ಲೂರು, ಹೆಮ್ಮಾಡಿ, ಮುಳ್ಳಿಕಟ್ಟೆ, ತ್ರಾಸಿ, ಅರೆಹೊಳೆಕ್ರಾಸ್, ಯಡ್ತರೆ ಕ್ರಾಸ್‌ಗಳು ಕೂಡುರಸ್ತೆಗಳಾಗಿದ್ದು ಸೂಕ್ತ ವ್ಯವಸ್ಥೆಯಾಗಬೇಕಿದೆ. ಆದರೆ ಈಗಾಗಲೇ ಮಂಜೂರಾದ ಕಾಮಗಾರಿಯಲ್ಲಿ ಇಲ್ಲಿಗೆ ಯಾವುದೇ ಹೆಚ್ಚುವರಿ ವ್ಯವಸ್ಥೆ ಮಾಡುವಂತಿಲ್ಲ. ಆದ್ದರಿಂದ ರಾ.ಹೆ. ಯೋಜನಾ ಪ್ರಾಧಿಕಾರಕ್ಕೆ ಬರೆದು ಅಲ್ಲಿಂದ ಅನುಮತಿ ಪಡೆದು ಮಂಜೂರಾತಿಯಾದ ಕಾಮಗಾರಿ ಮಾಡಬೇಕಿದೆ ಎಂದರು.
ಹೆದ್ದಾರಿಯಲ್ಲಿ ಬೀದಿದೀಪಗಳ ಅಳವಡಿಕೆಗೆ ಡಿವೈಎಸ್‌ಪಿ ಸೂಚಿಸಿದಾಗ ಟೋಲ್ ಆರಂಭವಾಗದೇ ಕೆಲವು ಕಾಮಗಾರಿ ಮಾಡಲು ಅಸಾಧ್ಯ ಎಂಬ ಉತ್ತರ ಸಂಸ್ಥೆಯ ಕಡೆಯಿಂದ ಬಂತು.
ಪುರಸಭೆ ಸದಸ್ಯರಾದ ಶ್ರೀಧರ ಶೇರೆಗಾರ್, ಸಂತೋಷ್ ಶೆಟ್ಟಿ ಮಾತನಾಡಿದರು. ಸಭೆಯ ಬಳಿಕ ಡಿವೈಎಸ್‌ಪಿ ಹೆದ್ದಾರಿಯಲ್ಲಿ ಅಪಘಾತ ತಾಣಗಳನ್ನು ವೀಕ್ಷಿಸಿ ಅಗತ್ಯವಿರುವೆಡೆ ಕ್ರಮಕ್ಕೆ ಸೂಚಿಸಿದರು.
ಐಆರ್‌ಬಿ ಗುತ್ತಿಗೆ
ಐಆರ್‌ಬಿ ಕಂಪೆನಿಗೆ ಕುಂದಾಪುರದಿಂದ 189.6 ಕಿ.ಮೀ. ಚತುಷ್ಪಥ ರಸ್ತೆಗೆ 2,639 ಕೋ.ರೂ.ಗಳಿಗೆ ಗುತ್ತಿಗೆ ಮಂಜೂರಾಗಿದೆ. 28 ವರ್ಷಗಳ ಕಾಲ ಕುಂದಾಪುರ -ಹೊನ್ನಾವರ ರಸ್ತೆ ಐಆರ್‌ಬಿ ಇನ್‌ಫ್ರಾಸ್ಟ್ರಕ್ಚರ್ ಡೆವಲಪರ್ಸ್ ಇಂಡಿಯಾ ಕಂಪೆನಿಯ ಅಧೀನದಲ್ಲಿ ಇರಲಿದ್ದು, ಅಲ್ಲಿಯವರೆಗೆ ಟೋಲ್ ಸಂಗ್ರಹ ನಡೆಸಲಿದೆ. ಕುಂದಾಪುರ -ಬೈಂದೂರು ಕಾಮಗಾರಿ ಹೆಚ್ಚಿನಂಶ ಮುಗಿಯುವ ಕಾರಣ ಶಿರೂರಿನಲ್ಲಿ ಸುಂಕ ವಸೂಲಿಗೆ ಟೋಲ್‌ಗೇಟ್ ಸಿದ್ಧವಾಗಿದ್ದು, ಶೀಘ್ರ ಕಾರ್ಯಾರಂಭಿಸುವ ಸಾಧ್ಯತೆಯಿದೆ.