Advertisement

ಬೈಲಹೊಂಗಲ: ಸರಕಾರಿ ತೋಟದ ಶಾಲೆ ಕಟ್ಟಡ ಅನಾಥ-ಅನೈತಿಕ ಚಟುವಟಿಕೆಗಳ ತಾಣ!

01:39 PM Sep 27, 2024 | Team Udayavani |

ಉದಯವಾಣಿ ಸಮಾಚಾರ
ಬೈಲಹೊಂಗಲ: ಮರಕುಂಬಿ ಗ್ರಾಮದ ಸಮೀಪದ ಸರಕಾರಿ ಕಿರಿಯ ಪ್ರಾಥಮಿಕ ತೋಟದ ಶಾಲೆ ಕಟ್ಟಡ ಕಳೆದ ಹಲವಾರು ವರ್ಷಗಳಿಂದ ಅನಾಥವಾಗಿದೆ. ಯಾರೂ ಕೇಳುವವರು ಇಲ್ಲದಂತಾಗಿದೆ. ಶಿಕ್ಷಣ ಇಲಾಖೆ ದಿವ್ಯ ನಿರ್ಲಕ್ಷ್ಯದಿಂದ ಕಟ್ಟಡ ಪಾಳು ಬಿದ್ದಿದೆ.

Advertisement

ಮಕ್ಕಳ ದಾಖಲಾತಿ ಇಲ್ಲವೆಂಬ ಕಾರಣ ಒಡ್ಡಿ ಶಿಕ್ಷಣ ಇಲಾಖೆ ಇಲ್ಲಿ ಕಲಿಯುವ 1ರಿಂದ 5 ನೇ ತರಗತಿ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಮರಕುಂಬಿ ಹಾಗೂ ಹಾರುಗೊಪ್ಪ ಗ್ರಾಮದಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಕಳುಹಿಸಿಕೊಡಲಾಗಿದೆ. ಈಗ ಶಾಲೆ ವಿದ್ಯಾರ್ಥಿಗಳಿಲ್ಲದೇ ಅನಾಥವಾದ್ದ ರಿಂದ ಶಾಲಾ ಆವರಣದಲ್ಲಿ ಗಿಡಗಂಟಿಗಳು ಬೆಳೆದು ಕುಡುಕರಿಗೆ ಹಾಗೂ ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂದು ಗ್ರಾಮಸ್ಥರು ಆಪಾದಿಸಿದ್ದಾರೆ.

ಆಯಾ ಪ್ರದೇಶದಲ್ಲಿ ಲಭ್ಯವಿರುವ ಮಕ್ಕಳ ಸಂಖ್ಯೆ ಕುರಿತು ಅಧ್ಯಯನ ನಡೆಸಿ ನೂತನ ಕಟ್ಟಡಗಳನ್ನು ನಿರ್ಮಿಸಿದರೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರೇರಣೆ ಸಿಗಲಿದೆ. ಶಿಕ್ಷಣ ಇಲಾಖೆ ಇನ್ನಾದರೂ ಎಚ್ಚೆತ್ತುಕೊಂಡು ತೋಟದ ಶಾಲೆ ಪರಿಶೀಲಿಸಿ ಕಟ್ಟಡದ ಸದುಪಯೋಗ ಪಡಿಸಿಕೊಳ್ಳಬೇಕೆಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.

ಮರಕುಂಬಿ ಗ್ರಾಮದ ಹಾರುಗೊಪ್ಪ ರಸ್ತೆಯಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ತೋಟದ ಶಾಲೆ ಕಟ್ಟಡದ ದುಸ್ಥಿತಿ ನೋಡಿದರೆ ಬೇಸರವಾಗುತ್ತದೆ. ಮಕ್ಕಳ ಕಲ್ಯಾಣಕ್ಕಾಗಿ ರೂಪಿಸಿದ ಯೋಜನೆಗಳು ಸರಿಯಾಗಿ ಅನುಷ್ಠಾನಗೊಂಡರೆ ಮಾತ್ರ ಮಹತ್ವ ದೊರಕಲಿವೆ. ಇನ್ನಾದರೂ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಲು ಸಂಬಂಧಿತ ಇಲಾಖೆ ಅಧಿಕಾರಿಗಳು ಮುಂದಾಗಬೇಕು.
ಮಕ್ತುಂ ನದಾಫ, ಗ್ರಾಮಸ್ಥರು, ಮರಕುಂಬಿ

ವಿದ್ಯಾರ್ಥಿಗಳ ಸಂಖ್ಯೆಯ ಕೊರತೆಯಿಂದ ಮರಕುಂಬಿಯ ಈ ಸರಕಾರಿ ಕಿರಿಯ ಪ್ರಾಥಮಿಕ ತೋಟದ ಶಾಲೆ ಕಳೆದ ಹಲವಾರು ವರ್ಷಗಳಿಂದ ಬಂದ್‌ ಆಗಿರುವುದು ನನ್ನ ಗಮನಕ್ಕೆ ಬಂದಿದೆ. ಕೂಡಲೇ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ, ಕಟ್ಟಡ ಸದುಪಯೋಗವಾಗುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಮೋಹನ ದಂಡಿನ, ಕ್ಷೇತ್ರ
ಶಿಕ್ಷಣಾಧಿಕಾರಿಗಳು, ಸವದತ್ತಿ.

Advertisement

■ ಎಂ.ಆರ್‌.ಬಡೇಘರ

Advertisement

Udayavani is now on Telegram. Click here to join our channel and stay updated with the latest news.

Next