ಬಾಗಲಕೋಟೆ: ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾದ ಬಳಿಕ ಇದೇ ಮೊದಲ ಬಾರಿಗೆ ನವನಗರದ ಸರ್ಕಾರಿ ಬಾಲ ಮಂದಿರಕ್ಕೆ ಮಂಗಳವಾರ ದಿಢೀರ್ ಭೇಟಿ ನೀಡಿದ ಬಾಯಕ್ಕ ಮೇಟಿ, ಮಕ್ಕಳ ಸಮಸ್ಯೆ ಕಂಡು ದಂಗಾದರು. ಬಿಕ್ಕಿ ಬಿಕ್ಕ ಅಳುತ್ತಿದ್ದ ಮಕ್ಕಳ ಕಂಡು, ತಾವೂ ಅತ್ತರು. ಅನಾಥ ಬಾಲಕಿಯ ಆಶೆಯಂತೆ ಕೈತುತ್ತು ತಿನಿಸಿ ಬೆನ್ನು ತಟ್ಟಿದರು.
ಹೌದು, ನವನಗರದ ಎಪಿಎಂಸಿ ಕ್ರಾಸ್ ಬಳಿ ಇರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧೀನದ ಬಾಲ ಮಂದಿರಕ್ಕೆ ಭೇಟಿ ನೀಡಿದರು. ಮೊದಲು ಅಡುಗೆ ತಯಾರಿಕೆ ಕೋಣೆಗೆ ತೆರಳಿ, ಅಲ್ಲಿನ ಅವ್ಯವಸ್ಥೆ ಕಂಡು, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಇರುವೆ ಹತ್ತಿದ ಬೆಲ್ಲ, ನಿನ್ನೆ ರಾತ್ರಿ ಮಾಡಿದ್ದ ಪಲ್ಯವನ್ನು ಬ್ರಿಜ್‌ನಲ್ಲಿಟ್ಟು, ಮರು ದಿನ ಕೊಡುವ ಪದ್ಧತಿ ನೋಡಿ, ಅಡುಗೆ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.
ಅಪ್ಪಿಕೊಂಡು ಕಣ್ಣೀರು ಹಾಕಿದರು: ಬಾಲ ಮಂದಿರದ ಎಲ್ಲ ಕೋಣೆ ಪರಿಶೀಲಿಸಿದ ಬಳಿಕ, ಮಕ್ಕಳು ಇರುವ ಕೊಠಡಿಗೆ ಹೋದರು. ಈ ವೇಳೆ ತಂದೆ-ತಾಯಿ ಇಲ್ಲದ ಬಾಲಕಿಯೊಬ್ಬಳು, ಇವರನ್ನು ಕಂಡೊಡನೆ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು. ಆ ಬಾಲಕಿಯನ್ನು ಅಪ್ಪಿಕೊಂಡು, ಸಂತೈಸಿದ ಅವರು, ಬಾಲಕಿಯ ಸಮಸ್ಯೆ ಕೇಳಿದರು. ತಂದೆ-ತಾಯಿ ಇಲ್ಲದ ಆ ಬಾಲಕಿ, ಬಾಲ್ಯ ವಿವಾಹಕ್ಕೆ ಒಳಗಾಗಿದ್ದಾಳೆ. ಹೀಗಾಗಿ ಅವಳನ್ನು ಬಾಲ ಮಂದಿರಕ್ಕೆ ಸೇರಿಸಿದ್ದು, ತನ್ನ ಸಮಸ್ಯೆ ಹೇಳಿಕೊಂಡು ಅತ್ತಳು. ಬಾಲಕಿಯ ಸಮಸ್ಯೆ ಕಂಡು, ತಾನೂ ಕಣ್ಣೀರು ಹಾಕಿದ ಬಾಯಕ್ಕ ಮೇಟಿ, ಬಳಿಕ ಬಾಲಕಿಯ ಆಶೆಯಂತೆ ತಮ್ಮ ಕೈಯಾರೆ ಊಟ ಮಾಡಿಸಿ ಸಾಂತ್ವನ ಹೇಳಿದರು.
ತಂದೆ-ತಾಯಿ ಮಾಡಿದ ತಪ್ಪಿಗೆ ನಮಗೆ ಶಿಕ್ಷೆ: ಬಾಲಕಿಯರನ್ನು ಒಂದೆಡೆ ಕರೆದು, ಅವರ ಸಮಸ್ಯೆ ಕೇಳಿದ ಅವರು, ತಂದೆ-ತಾಯಿ ನಮಗೆ ಬಾಲ್ಯ ವಿವಾಹ ಮಾಡುತ್ತಿದ್ದರು. ಆ ವೇಳೆ ಅಧಿಕಾರಿಗಳು ನಮ್ಮನ್ನು ಇಲ್ಲಿಗೆ ಕರೆದು ತಂದು ಬಿಟ್ಟಿದ್ದಾರೆ. ಹಾಕಿಕೊಳ್ಳಲು ಬಟ್ಟೆ ಇಲ್ಲ, ತಿಂಗಳ ಸಮಸ್ಯೆಯಾದರೆ ಪ್ಯಾಡ್ ಕೊಡಲ್ಲ. ಅಪ್ಪ-ಅವ್ವ ಮಾಡಿದ ತಪ್ಪಿಗೆ ನಮಗೆ ಶಿಕ್ಷೆ ಕೊಡಲಾಗುತ್ತಿದೆ. ನಾವೇನು ತಪ್ಪು ಮಾಡಿದ್ದೇವೆ. ಎಲ್ಲ ಪ್ರಕ್ರಿಯೆ ಮುಗಿಸಿ, ಮರಳಿ ಮನೆಗೆ ಹೋಗಲು ಒಂದು ತಿಂಗಳು ಬೇಕಾಗುತ್ತದೆ ಎಂದು ಇಲ್ಲಿನ ಸಿಬ್ಬಂದಿ ಹೇಳುತ್ತಾರೆ. ಅಲ್ಲಿಯ ವರೆಗೆ ನಮ್ಮ ಶಿಕ್ಷಣ ಕುಂಠಿತಗೊಳ್ಳುತ್ತದೆ ಎಂದು ಹಲವು ಬಾಲಕಿಯರು ಕಣ್ಣೀರು ಹಾಕಿದರು.
ಸರಿಯಾಗಿ ಸೌಲಭ್ಯ ಕೊಡಲು ಸೂಚನೆ: ಬಾಲಕ ಬಾಲ ಮಂದಿರ ಮತ್ತು ಬಾಲಕಿಯರ ಬಾಲ ಮಂದಿರ ಎರಡೂ ಕಡೆ ಪರಿಶೀಲನೆಯ ಬಳಿಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕನ್ನು ಕರೆಸಿ, ಇಲ್ಲಿನ ಮಕ್ಕಳಿಗೆ ಸರ್ಕಾರದಿಂದ ಬರುವ ಎಲ್ಲ ಸೌಲಭ್ಯ ಕಲ್ಪಿಸಬೇಕು. ನಿತ್ಯ ಹೊಸ ತರಕಾರಿಯಿಂದ ಹೊಸದಾಗಿ ಅಡುಗೆ ಮಾಡಿ ಬಡಿಸಬೇಕು. ರಾತ್ರಿ ಮಾಡಿದ ಪಲ್ಲೆಯನ್ನು ಬೆಳಿಗ್ಗೆ ಕೊಡುತ್ತಿದ್ದಾರೆ. ಈ ಕುರಿತು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.