Advertisement
ಒಂದೆಡೆ ಸಿಎಂ ವಿರುದ್ಧ ಮುಡಾ ಹಗರಣ, ಮತ್ತೂಂದೆಡೆ ಕೇಂದ್ರ ಮಂತ್ರಿ ಕುಮಾರಸ್ವಾಮಿ ವಿರುದ್ಧದ ಗಂಗೇನಹಳ್ಳಿ ಡಿನೋಟಿಫಿಕೇಶನ್ ಪ್ರಕರಣ, ನಿರ್ಮಲಾ ಸೀತಾರಾಮನ್ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರ ವಿರುದ್ಧದ ಚುನಾವಣ ಬಾಂಡ್ ಪ್ರಕರಣ, ಸಚಿವ ಪ್ರಿಯಾಂಕ್ ಖರ್ಗೆ, ಎಂ.ಬಿ. ಪಾಟೀಲ್, ಛಲವಾದಿ ನಾರಾಯಣಸ್ವಾಮಿ ವಿರುದ್ಧದ ಕೆಐಎಡಿಬಿಸಿಎ ನಿವೇಶನ ದುರ್ಬಳಕೆ, ಕೆ.ಎನ್. ರಾಜಣ್ಣ ವಿರುದ್ಧ ಅಪೆಕ್ಸ್ ಬ್ಯಾಂಕ್ ಹಗರಣ… ಹೀಗೆ ಪರಸ್ಪರ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ.ಇದಕ್ಕೆ ಇಂಬು ನೀಡುವಂತೆ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಯಾವುದೇ ಕ್ಷಣದಲ್ಲಾದರೂ ಕೇಂದ್ರ ಚುನಾವಣ ಆಯೋಗ ಮುಹೂರ್ತ ನಿಗದಿಪಡಿಸುವ ಸಾಧ್ಯತೆಗಳಿದ್ದು, ಅ. 10ರೊಳಗಾಗಿ ಉಪಚುನಾವಣೆಯ ವೇಳಾಪಟ್ಟಿ ಘೋಷಣೆಯಾಗುವ ಸಂಭವವಿದೆ.
Related Articles
ಚನ್ನಪಟ್ಟಣಕ್ಕೆ ತಾನು ಅಭ್ಯರ್ಥಿ ಅಲ್ಲ ಎನ್ನುತ್ತಲೇ ವೇದಿಕೆ ಸಜ್ಜುಗೊಳಿಸಿಕೊಳ್ಳುತ್ತಿರುವ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಸ್ಥಳೀಯವಾಗಿ ಸಭೆಗಳನ್ನು ನಡೆಸಿ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ. ಜಯಮುತ್ತು ಹೆಸರು ಮುಂಚೂಣಿಯಲ್ಲಿ ಇದೆಯಾದರೂ ಗುರುವಾರ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ಅಗರ್‌ವಾಲ್ ಅವರನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ನಿಖೀಲ್ ಜತೆ ಭೇಟಿ ಮಾಡಿರುವುದು ಹಲವು ಪ್ರಶ್ನೆ ಗ ಳಿಗೆ ಉತ್ತರ ಕೊಟ್ಟಂತಿದೆ. ಚನ್ನಪಟ್ಟಣ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್‌ರನ್ನು ಕಣಕ್ಕಿಳಿಸುವ ಮಾತುಕತೆ ನಡೆದಿದೆ ಎನ್ನಲಾಗಿದೆ.
Advertisement
ಸಿಪಿವೈ ನಡೆ ಬಗ್ಗೆ ಕುತೂಹಲಚನ್ನಪಟ್ಟಣ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತಯಾರಿ ಮಾಡಿಕೊಂಡಿದ್ದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ಗೆ ಟಿಕೆಟ್ ಕೈತಪ್ಪಿದರೆ ಮುಂದಿನ ನಡೆಯೇನು ಎನ್ನುವ ಕುತೂಹಲ ಬಿಜೆಪಿಯಲ್ಲೂ ಇದೆ. ಪಕ್ಷೇತರರಾಗಿ ಸ್ಪರ್ಧಿಸುತ್ತಾರಾ? ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಸೇರುತ್ತಾರಾ ಅಥವಾ ಬಿಜೆಪಿಯಲ್ಲಿದ್ದುಕೊಂಡೇ ತಟಸ್ಥರಾಗುತ್ತಾರಾ ಎಂಬ ಚರ್ಚೆಗಳನ್ನು ಹುಟ್ಟುಹಾಕಿದೆ. ಕೈ ಕಟ್ಟಾಳು ಯಾರು? ಡಿಕೆಶಿ, ಡಿಕೆಸು ಅಥವಾ ಹೊಸಮುಖ?
ಮೈತ್ರಿ ಒಳಗಿನ ಬೆಳವಣಿಗೆ ಗಮನಿಸಿ ಶುಕ್ರವಾರ ದಿಢೀರನೇ ಚನ್ನಪಟ್ಟಣಕ್ಕೆ ತೆರಳಿದ ಡಿಸಿಎಂ ಡಿ.ಕೆ. ಶಿವಕುಮಾರ್, 60 ಕೋಟಿ ರೂ. ಮೊತ್ತದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಈಗಾಗಲೇ ಚನ್ನಪಟ್ಟಣಕ್ಕೆ 300 ಕೋಟಿ ರೂ. ವಿಶೇಷ ಅನುದಾನ ಘೋಷಣೆಯಾಗಿದೆ. ಈ ಪೈಕಿ 60 ಕೋಟಿ ರೂ.ಗಳ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿರುವ ಡಿಸಿಎಂ, ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ನೀಡಿದ ಅನಂತರ 20ಕ್ಕೂ ಹೆಚ್ಚು ಬಾರಿ ಭೇಟಿ ಕೊಟ್ಟಿದ್ದಾರೆ. ಯಾರೇ ಸ್ಪರ್ಧಿಸಿದರೂ ನಾನೇ ಅಭ್ಯರ್ಥಿ ಎನ್ನುತ್ತಿರುವ ಅವರು, ಸಹೋದರ ಡಿ.ಕೆ. ಸುರೇಶ್‌ರನ್ನೇ ಕೊನೆಯ ಕ್ಷಣದಲ್ಲಿ ಕಣಕ್ಕಿಳಿಸಬಹುದು ಎನ್ನಲಾಗಿದೆ.