ಮುಧೋಳ: ಸರ್ಕಾರಿ ನೌಕರಿ ಸಿಕ್ಕರೆ ಸಾಕು ಜೀವನವನ್ನು ನೆಮ್ಮದಿಯಿಂದ ಕಳೆಯಬಹುದು ಎಂಬ ಲೆಕ್ಕಾಚಾರ ಹಾಕಿಕೊಳ್ಳುವವರ ಮಧ್ಯೆ ಕೃಷಿ ಮೇಲಿನ ಪ್ರೀತಿಗೆ ಕೈಯಲ್ಲಿದ್ದ ಸರ್ಕಾರಿ ನೌಕರಿ ಬಿಟ್ಟು ವ್ಯವಸಾಯದಲ್ಲಿಯೇ ಖುಷಿ ಕಾಣುತ್ತಿರುವ ಈ ವ್ಯಕ್ತಿ ಎಲ್ಲರ ನಡುವೆ ಭಿನ್ನವಾಗಿ ಕಾಣುತ್ತಾರೆ.
ಹೌದು ಮೆಳ್ಳಿಗೇರಿ ಗ್ರಾಮದ ವಿಠಲ ಮೇತ್ರಿ ತಮಗಿದ್ದ ಕಂಡಕ್ಟರ್ ನೌಕರಿ ಬಿಟ್ಟು ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡು ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ಕಂಡಕ್ಟರ್ ನೌಕರಿಯಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಿದ ಮೇತ್ರಿ ಅವರು, ಕೃಷಿ ಮೇಲಿನ ಆಸಕ್ತಿಯಿಂದಾಗಿ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ದ್ರಾಕ್ಷಿ ಬೆಳೆಯಲು ಮುಂದಾಗಿ ಯಶಸ್ವಿ ರೈತರೆನಿಸಿಕೊಂಡಿದ್ದಾರೆ.
ಒಟ್ಟು 40 ಎಕರೆ ಜಮೀನು ಹೊಂದಿರುವ ಮೇತ್ರಿ 3 ಎಕರೆಯಲ್ಲಿ ಸ್ವತಃ ದ್ರಾಕ್ಷಿ ಬೆಳೆಯುತ್ತಿದ್ದು, ವರ್ಷಕ್ಕೆ ಲಕ್ಷಾಂತರ ರೂ. ಲಾಭ ಗಳಿಸುತ್ತಿದ್ದಾರೆ. ಮೇತ್ರಿ ಆರಂಭದಲ್ಲಿ ಕೃಷಿ ರಂಗಕ್ಕೆ ಕಾಲಿಟ್ಟಾಗ ಅವರಿಗೆ ಬರಮಾಡಿಕೊಂಡಿದ್ದು ಭೀಕರ ಬರಗಾಲ. 400 ರಿಂದ 700 ಅಡಿ ಬೋರ್‌ವೆಲ್ ಕೊರೆದರೂ ನೀರು ಸಿಗದಂತಹ ಪರಿಸ್ಥಿತಿಯಲ್ಲಿ ಎದೆಗುಂದದ ಮೇತ್ರಿ ಭೂಮಿ ತಾಯಿಯನ್ನು ನಂಬಿ ನಡೆದು ಇಂದು ಸುಖಮಯ ಜೀವನ ನಡೆಸುತ್ತಿದ್ದಾರೆ.
ಒಣ ದ್ರಾಕ್ಷಿಗೆ ಒತ್ತು: ಮೇತ್ರಿ ಅವರು ತಾವು ಬೆಳೆದಿರುವ ದ್ರಾಕ್ಷಿಯನ್ನು ನೇರವಾಗಿ ಮಾರಾಟ ಮಾಡದೆ ಒಣದ್ರಾಕ್ಷಿ ಮಾಡಿ ಹೆಚ್ಚು ಲಾಭ ಪಡೆಯುತ್ತಾರೆ. ಸಾಮಾನ್ಯವಾಗಿ ಹಸಿ ದ್ರಾಕ್ಷಿ ಮಾರಾಟ ಮಾಡಿದರೆ ಕೆ.ಜಿ.20ರಿಂದ 25ರೂ.
ದೊರೆಯುತ್ತದೆ. ಅದರ ಬದಲು ದ್ರಾಕ್ಷಿಯನ್ನು ಒಣಗಿಸಿ ಮಾರಾಟ ಮಾಡಿದರೆ 15ರಿಂದ 180 ರವರೆಗೆ ಲಾಭ ದೊರೆಯುತ್ತದೆ. ತಮ್ಮ ತೋಟದಲ್ಲಿನ ದ್ರಾಕ್ಷಿಯನ್ನು ವಿಜಯಪುರದ ಬಳಿ ಒಣದ್ರಾಕ್ಷಿಯನ್ನಾಗಿ ಪರಿವರ್ತಿಸಿ ಮಾರಾಟ ಮಾಡುತ್ತಾರೆ. ಒಂದು ಕೆ.ಜಿ. ಒಣ ದ್ರಾಕ್ಷಿ ತಯಾರಿಕೆಗೆ 25ರಿಂದ 30ರೂ. ಖರ್ಚು ಬರುತ್ತದೆ. ಆದ್ದರಿಂದ ಹಸಿದ್ರಾಕ್ಷಿಯಿಂದ ಒಣದ್ರಾಕ್ಷಿಯಿಂದಲೇ ಹೆಚ್ಚು ಲಾಭ ಗಳಿಸಬಹುದು ಎನ್ನುತ್ತಾರೆ ಮೇತ್ರಿ.
ಕುರಿ ಫಾರ್ಮ್: ಕೃಷಿಯೊಟ್ಟಿಗೆ ಆಡಿನ ಫಾರ್ಮ್ ಹಾಕಿಕೊಂಡಿರುವ ಮೇತ್ರಿ, ರಾಜಸ್ಥಾನದ ಸಿರೋಹಿ ಹಾಗೂ ಸೌಜತ್ ತಳಿಯ ಅಂದಾಜು 40 ಕುರಿ ಸಾಕಿಕೊಂಡಿದ್ದಾರೆ. 30 ಮರಿಗಳಿದ್ದು ಒಂದೊಂದು ಮರಿಗೆ 12ರಿಂದ 15000 ಬೆಲೆ ಬರುವ ನಿರೀಕ್ಷೆಯಿದೆ ಎನ್ನುತ್ತಾರೆ. ಆಡಿನ ಗೊಬ್ಬರವನ್ನು ಬೆಳೆಗೆ ಬಳಸುತ್ತಾರೆ.
-ಗೋವಿಂದಪ್ಪ ತಳವಾರ