Advertisement

“ಸಹಕಾರಿ ಬ್ಯಾಂಕ್‌ಗಳಲ್ಲಿನ ರೈತರ ಸಾಲ, ಬಡ್ಡಿ ಮನ್ನಾ ಮಾಡಬೇಡಿ’

03:45 AM Mar 25, 2017 | Team Udayavani |

ವಿಧಾನಸಭೆ: ಸಹಕಾರ ಬ್ಯಾಂಕುಗಳಲ್ಲಿ ರೈತರು ಪಡೆದ ಸಾಲ ಮನ್ನಾ ತೀರ್ಮಾನ ಕೈಗೊಂಡರೆ ಸಾಲ ಮರುಪಾವತಿ ಪ್ರಮಾಣ ತಗ್ಗಲಿದ್ದು ಆರ್ಥಿಕ ಹೊರ ಬೀಳಲಿದೆ. ಹೀಗಾಗಿ, ಸಾಲಮನ್ನಾ ಕಾರ್ಯಸಾಧುವಲ್ಲ ಎಂದು ಮಹಾಲೇಖಪಾಲರು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

Advertisement

2016ಕ್ಕೆ ಕೊನೆಗೊಂಡ ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳ ಕುರಿತು ಮಹಾಲೇಖಪಾಲರು ನೀಡಿರುವ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದ್ದು, ಸಹಕಾರಿ ಕ್ಷೇತ್ರದಲ್ಲಿ ಸಾಲ ನೀಡುವ ವ್ಯವಸ್ಥೆಯೇ ಹಾದಿ ತಪ್ಪುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಾಲಮನ್ನಾ ಪದ್ಧತಿಯನ್ನೇ ನಿಲ್ಲಿಸಬೇಕು ಎಂದು ಶಿಫಾರಸ್ಸು ಮಾಡಲಾಗಿದೆ.

ರಾಜ್ಯ ಸರ್ಕಾರ 2011-12 ರಿಂದ 15-16ರ ವರೆಗೆ ಸಹಕಾರಿ ಬ್ಯಾಂಕ್‌ಗಳಲ್ಲಿ 5,863 ಕೋಟಿ ರೂಪಾಯಿ ಸಾಲ ಹಾಗೂ ಬಡ್ಡಿ ಮನ್ನಾ ಮಾಡಿದೆ. ರಾಜ್ಯ ಸರ್ಕಾರವು ಹಣಕಾಸು ಸಂಸ್ಥೆಗಳಿಂದ ಮಾಡಿರುವ ಸಾಲದ ಮೇಲಿನ ಬಡ್ಡಿ ಪಾವತಿಯು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದ್ದು, 2011-12ರಲ್ಲಿ 6,604 ಕೋಟಿ ರೂ.ಗಳಷ್ಟಿದ್ದ ಬಡ್ಡಿ ಪಾವತಿ ಪ್ರಮಾಣ 2015-16ರಲ್ಲಿ 1,343 ಕೋಟಿ ರೂ.ಗೆ ಹೆಚ್ಚಳವಾಗಿದೆ. 

ಕೇಂದ್ರ ಸರ್ಕಾರದಿಂದ ಪಡೆದ ಸಾಲದ ಮೇಲಿನ ಬಡ್ಡಿ 680 ಕೋಟಿ ರೂ.ಆಗಿದ್ದು, ಬಜೆಟ್‌ನಲ್ಲಿ ಘೋಷಿತ ಸಾಲ ಪ್ರಮಾಣ ಬಿಟ್ಟು ಇತರ ಮೂಲಗಳಿಂದ ಮಾಡಿದ ಸಾಲದ ಪ್ರಮಾಣ 597 ಕೋಟಿ ರೂ.ಆಗಿದೆ. ರಾಜ್ಯ ಸರ್ಕಾರದ ಬಡ್ಡಿ ಪಾವತಿ ಪ್ರಮಾಣ ಏರುಗತಿಯಲ್ಲಿ ಸಾಗಿದ್ದು, ವಾರ್ಷಿಕ 20 ಸಾವಿರ ಕೋಟಿ ರೂ.ತಲುಪಿದೆ. ಹೀಗಾಗಿ, ಸಾಲ ಅಥವಾ ಬಡ್ಡಿ ಮನ್ನಾ ತೀರ್ಮಾನ ರಾಜ್ಯದ ಆರ್ಥಿಕ ಪ್ರಗತಿಗೆ ಮಾರಕ ಎಂಬುದನ್ನು ಸೂಚ್ಯವಾಗಿ ಸಿಎಜಿ ವರದಿಯಲ್ಲಿ ಉಲ್ಲೇಖೀಸಲಾಗಿದೆ.

ಸಿಎಜಿ ವರದಿ ಪ್ರಕಾರ, ಸರ್ಕಾರಿ ನೌಕರರ ಸಂಬಳದ ವೆಚ್ಚ ಕಳೆದ ವರ್ಷಕ್ಕಿಂತ ಶೇಕಡಾ 4ರಷ್ಟು ಹೆಚ್ಚಳವಾಗಿದ್ದು, ಪಂಚಾಯತ್‌ ರಾಜ್‌ ಮತ್ತು ನಗರ ಸ್ಥಳೀಯ ಸಂಸ್ಥೆಗಳ ನೌಕರರ ಸಂಬಳ ಸೇರಿದರೆ ಅದು ಇನ್ನೂ ಹೆಚ್ಚಳವಾಗಲಿದೆ. 13ನೇ ಹಣಕಾಸು ಆಯೋಗದ ಅನುದಾನ ಸ್ವೀಕರಿಸಿದ ಐದು ದಿನದೊಳಗಾಗಿ ಪಂಚಾಯತ್‌ ರಾಜ್‌ ಇಲಾಖೆ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆ ಮಾಡದಿರುವುದರಿಂದ ರಾಜ್ಯ ಸರ್ಕಾರ 7 ಕೋಟಿಯಷ್ಟು ಬಡ್ಡಿ ಕಟ್ಟಬೇಕಾಯಿತು ಎಂಬ ಸಂಗತಿ ಹೊರಬಿದ್ದಿದೆ.

Advertisement

2015-16ನೇ ಸಾಲಿನಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಆದ್ಯತೆ ಕಡಿಮೆ ಮಾಡಲಾಗಿದ್ದು, ಅಧಿಕ ನಷ್ಟ ಉಂಟು ಮಾಡುವ ಸಾರ್ವಜನಿಕ ಉದ್ದಿಮೆಗಳ ಕಾರ್ಯವೈಖರಿ ಸಮೀಕ್ಷೆ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಸಿಎಜಿ ವರದಿಯಲ್ಲಿ ಸೂಚಿಸಲಾಗಿದೆ. 2015-16 ನೇ ಸಾಲಿನಲ್ಲಿ ಘೋಷಣೆಯಾದ ಬಜೆಟ್‌ನಲ್ಲಿ ಶೇ.10 ರಷ್ಟು ಹಣ ಬಳಕೆ ಮಾಡದಿರುವುದನ್ನು ಸಿಎಜಿ ಪತ್ತೆ ಹಚ್ಚಿದೆ. 1,66,671 ಕೋಟಿ ಆಯವ್ಯಯದಲ್ಲಿ 17,422 ಕೋಟಿ ಬಳಕೆ ಮಾಡದೇ ಉಳಿಸಿಕೊಳ್ಳಲಾಗಿದೆ ಎಂದು ಹೇಳಿದೆ.

ಅಲ್ಲದೆ, ಆರ್ಥಿಕ ವರ್ಷದ ಕೊನೆಯ ಎರಡು ದಿನದಲ್ಲಿ ಸುಮಾರು 7,342 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಿರುವುದಕ್ಕೆ ಸಿಎಜಿ ಅನುಮಾನ ವ್ಯಕ್ತಪಡಿಸಿದೆ. ಅಲ್ಲದೇ ಸದನದ ಅನುಮೋದನೆ ಪಡೆಯದೇ 5,065 ಕೋಟಿಯಷ್ಟು ಪೂರಕ ಅಂದಾಜು ಆದೇಶ ಹೊರಡಿಸಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಅಲ್ಲದೇ ಅಧಿಕಾರಿಗಳು ಇಲಾಖೆಯ ಹಣವನ್ನು ವೈಯಕ್ತಿಕ ಠೇವಣಿಯಲ್ಲಿ ಇಟ್ಟು ಬಳಕೆಯಾಗದೇ ಉಳಿದಿರುವ ಮೊತ್ತವನ್ನು ಸರ್ಕಾರಕ್ಕೆ ಸರಿಯಾದ ಸಮಯಕ್ಕೆ ಸಲ್ಲಿಸುವಂತೆ ಸರ್ಕಾರ ನೋಡಿಕೊಳ್ಳುವಂತೆ ಸಿಎಜಿ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next