Advertisement

ಬ್ಯಾಡಗಿ: ಹಳೇ ಪಿಂಚಣಿ ಯೋಜನೆ ಜಾರಿಗೆ ಪ್ರಾಮಾಣಿಕ ಯತ್ನ

06:29 PM Jun 02, 2023 | Team Udayavani |

ಬ್ಯಾಡಗಿ: ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದು ಸೇರಿದಂತೆ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ  ಪ್ರಯತ್ನಿಸುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದರು.

Advertisement

ಪಟ್ಟಣದ ತಮ್ಮ ನಿವಾಸದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಸದಸ್ಯರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸರ್ಕಾರಿ ನೌಕರರಿಗೆ ಸಂಬಳ ಬರುತ್ತಿರುವುದೇನೋ ಸತ್ಯ. ಆದರೆ, ಅಷ್ಟೇ ಪ್ರಮಾಣದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಶಿಕ್ಷಕರ ಅಂತರ ಘಟಕ ವರ್ಗಾವಣೆಗೆ ಕೇವಲ ಶೇ.5 ರಷ್ಟು ಮಿತಿಯಿದ್ದು, ಪತಿ-ಪತ್ನಿಯರ ನಡುವೆ ಸಾಮರಸ್ಯದ ಕೊರತೆಯಿಂದ ವಿಚ್ಛೇದನ ಹಂತಕ್ಕೆ ಕಾರಣವಾಗುತ್ತಿದೆ. ಕಾಲ್ಪನಿಕ ವೇತನ, ಮುಂಬಡ್ತಿ, ಆರೋಗ್ಯ ಸಂಜೀವಿನ ಸೇರಿದಂತೆ ಅನ್ಯ ರಾಜ್ಯಗಳಿಗೆ ಹೋಲಿಕೆ ಮಾಡಿದಲ್ಲಿ ರಾಜ್ಯದ ನೌಕರರಿಗೆ ವೇತನದಲ್ಲಿ ತಾರತಮ್ಯಗಳಂತಹ ಹತ್ತು ಹಲವು ಲೋಪದೋಷಗಳನ್ನು ಸರಿಪಡಿಸಲು ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಪ್ರಾಮಾಣಿಕ ಸೇವೆಯ ನಿರೀಕ್ಷೆ: ಸರ್ಕಾರದ ಯೋಜನೆಗಳನ್ನು ಪ್ರತಿಯೊಬ್ಬ ಸರ್ಕಾರಿ ನೌಕರರು ಪ್ರಾಮಾಣಿಕವಾಗಿ ಸಾರ್ವಜನಿಕರಿಗೆ ತಲುಪಿಸಲು ಕಾರ್ಯೋನ್ಮುಖರಾಗಬೇಕು. ಜನಪ್ರತಿನಿಧಿಗಳೊಂದಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸರ್ಕಾರದ ಪ್ರತಿಯೊಂದು ಯೋಜನೆಯನ್ನು ಜನರಿಗೆ ಮುಟ್ಟಿಸುವಲ್ಲಿ ಹಾಗೂ ಇಲಾಖೆಗಳಿಗೆ ವಿವಿಧ ಕೆಲಸಗಳ ನಿಮಿತ್ತ ಬರುವವರ ಸಮಸ್ಯೆ ಅರಿತು ಅವರಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಪರಿಹಾರ ಒದಗಿಸಲು ಮುಂದಾಗಬೇಕು. ಇಂತಹ ಒಂದು ಸೇವೆಯ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದರು.

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಹದೇವ ಎಫ್‌.ಕರೆಣ್ಣನವರ ಮಾತನಾಡಿ, ತಾಲೂಕಿನ ಎಲ್ಲಾ ಇಲಾಖೆಗಳಲ್ಲೂ ಕಾರ್ಯನಿರ್ವಹಿಸುವ ನೌಕರ ವರ್ಗದವರು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅವರಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಭರವಸೆ ನೀಡಿದರು. ಅಲ್ಲದೇ, ರಾಜ್ಯದ ಸರ್ಕಾರಿ ನೌಕರರಿಗೆ ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಳ ಆದೇಶ ಮಾಡಿದ ಮುಖ್ಯಮಂತ್ರಿ
ಸಿದ್ಧರಾಮಯ್ಯ ಮತ್ತು ಸಚಿವ ಸಂಪುಟ ಮತ್ತು ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು.

ಈ ವೇಳೆ ಸಂಘದ ಕಾರ್ಯದರ್ಶಿ ಎಚ್‌. ವೈ.ಬಾರ್ಕೇರ, ಜಗದೀಶ ಮಣ್ಣಮ್ಮನವರ, ವೈ. ಕೆ.ಮಟಗಾರ, ಎಚ್‌.ಟಿ.ಲಮಾಣಿ, ಶಬ್ಬೀರ
ಬಾಗೇವಾಡಿ, ಎಚ್‌.ಟಿ.ಭರಮಗೌಡ್ರ, ಶ್ರೀಕಾಂತ ಗುಳೇದ, ಪ್ರದೀಪ ಹೊರಟೇರ, ಎಂ.ಎ.ಕಳಗೊಂಡ, ಮಾಲತೇಶ ಕಂಬಳಿ,
ನಾಗರಾಜ ಬಣಕಾರ, ಗಿರೀಶ ಕಾಟೇನಹಳ್ಳಿ, ಮಾಲತೇಶ ಚಳಗೇರಿ, ಸಿ.ಬಿ.ಪಾಟೀಲ,ಜೀವರಾಜ ಛತ್ರದ, ವಿ.ವಿ.ಮಾತನವರ, ಸಿ.ಎಸ್‌.ಎಲಿ, ಜಿ.ಬಿ.ಬೂದಿಹಾಳ, ಎಂ.ಬಿ.ಆಡೂರ, ಎಚ್‌ .ಬಿ.ದಾಸರ, ಎಮ್‌.ಎನ್‌.ನೆರ್ತಿ, ಎಸ್‌. ಎಸ್‌. ಅಜಗೊಂಡ್ರ, ಬಿ.ಡಿ.ಪರಶುರಾಮ, ಮಲ್ಲಪ್ಪ ಕರೇಣ್ಣನವರ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next