ಬ್ಯಾಡಗಿ: ಆರೋಗ್ಯಕರ ಜೀವನಕ್ಕಾಗಿ ಜಗತ್ತಿಗೆ ಭಾರತ ನೀಡಿದ ಅದ್ಭುತ ಹಾಗೂ ಅಮೂಲ್ಯ ಕೊಡುಗೆಯೆಂದರೆ ಯೋಗ. ಇತ್ತೀಚಿನ ದಿನಗಳಲ್ಲಿ ರೋಗಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲದಕ್ಕೂ ವೈದ್ಯರನ್ನೇ ಅವಲಂಬಿಸಿದ್ದೇವೆ. ನಿತ್ಯವೂ ಯೋಗವನ್ನು ಅಳವಡಿಸಿಕೊಂಡಿದ್ದೇ ಆದಲ್ಲಿ ರೋಗದ ಮೇಲೆ ನಿಯಂತ್ರಣ ಸಾಧಿಸಬಹುದಾಗಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ 5ನೇ ವಿಶ್ವಯೋಗ ದಿನಾಚರಣೆ ಅಂಗವಾಗಿ ಪತಂಜಲಿ ಯೋಗ ಸಮಿತಿ ಬ್ಯಾಡಗಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಯೋಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಲ್ಲ ಆಚರಣೆಗಳಿಗಿಂತಲೂ ಯೋಗ ಭಿನ್ನ, ಮನುಷ್ಯ ರೋಗಮುಕ್ತವಾಗಬೇಕಿದ್ದರೆ ನಿತ್ಯ ಬದುಕಿನಲ್ಲಿಯೋಗ ಅಳವಡಿಸಿ ಕೊಳ್ಳಬೇಕು, ದೇಹವನ್ನು ಆರೋಗ್ಯಯುತವಾಗಿ ನಿಯಂತ್ರಣದಲ್ಲಿಡುವ ಶಕ್ತಿ ಯೋಗಕ್ಕಿದೆಎಂದರು.
ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಛತ್ರದ ಮಾತನಾಡಿ, ಪ್ರಕೃತಿ ನಿಯಮಗಳಿಗೆ ವಿರುದ್ಧವಾಗಿ ಬದುಕಿನ ವ್ಯವಸ್ಥೆ ಅಳವಡಿಸಿಕೊಂಡು ಯಶಸ್ವಿಯಾಗಲು ಸಾಧ್ಯವಿಲ್ಲ. ಪ್ರಕೃತಿ ಜೊತೆಗೆ ಮಾನವನ ದೈಹಿಕ ಸಾಮ್ಯತೆಯನ್ನು ಸಾಧಿಸುವುದೇ ಯೋಗ. ಕೇವಲ ಒಂದು ಧರ್ಮಕ್ಕೆ ಸೀಮಿತವಲ್ಲ. ಇದನ್ನುಒಂದು ಚೌಕಟ್ಟಿಗೆ ಸೀಮಿತಗೊಳಿಸದಂತೆ ಮನವಿ ಮಾಡಿದರು.
ಪುರಸಭೆ ಮುಖ್ಯಾಧಿಕಾರಿ ವಿ.ಎಂ. ಪೂಜಾರ ಮಾತನಾಡಿ, ಮಿತಆಹಾರ ಸೇವನೆ ನಿಗದಿತ ವ್ಯಾಯಾಮಗಳಿಲ್ಲದೇ ದೈಹಿಕ ಸ್ಥಿತಿ ನಿಯಂತ್ರಿಸುವುದಾಗಲಿ ಅಥವಾ ಆರೋಗ್ಯಕರವಾಗಿಟ್ಟುಕೊಳ್ಳುವುದಾಗಲಿ ಕಷ್ಟ ಸಾಧ್ಯ, ಒತ್ತಡದ ಬದುಕು ಮನುಷ್ಯನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಖನ್ನರಾಗುವಂತೆ ಮಾಡುತ್ತಿದೆ. ಇದರಿಂದ ಮನುಷ್ಯ ಎಷ್ಟೇ ಹಣವಂತನಾಗಿದ್ದರೂ ಕೂಡ ಆರೋಗ್ಯದ ವಿಷಯದಲ್ಲಿ ಬಡವನಾಗುತ್ತಿದ್ದಾನೆ. ನಿತ್ಯವೂ ಯೋಗ ಮಾಡುವುದರಿಂದ ಮನುಷ್ಯ ಆರೋಗ್ಯವಂತನಾಗಿರುವ ಮೂಲಕ ದೀರ್ಘಕಾಲದ ರೋಗಗಳಿಂದ ಮುಕ್ತನಾಗಿರಲು ಸಾಧ್ಯವಾಗುತ್ತದೆ ಎಂದರು.
ಸಾವಿರಾರು ವಿದ್ಯಾರ್ಥಿಗಳು ಭಾಗಿ: ಈ ಸಂದರ್ಭದಲ್ಲಿ ಪಟ್ಟಣದ ವಿವಿಧ ಶಾಲೆಯ ಸಾವಿರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಯೋಗಗುರು ಬಿ.ಎಸ್. ಭೀಮಣ್ಣ ಯೋಗ ತರಬೇತಿಯನ್ನು ನೀಡಿದರು. ಪತಂಜಲಿ ಯೋಗ ಶಿಕ್ಷಣ ಸಮಿತಿಯ ಗುರುನಾಥ ಅಂಕಲಗಿ, ನಂದೀಶ ವೀರನಗೌಡ್ರ, ಸಿಪಿಐ ಭಾಗ್ಯವತಿ ಬಂಟಿ, ತಹಶೀಲ್ದಾರ ಗುರುಬಸವರಾಜ, ಉಮಾದೇವಿ ಪತ್ತಾರ, ಮಾಜಿ ಸೈನಿಕ ಎಂ.ಡಿ. ಚಿಕ್ಕಣ್ಣನವರ, ಶಿವು ಗಡಾದ, ರುದ್ರೇಶ ಸಿ. ದ್ರಾಕ್ಷಾಯಣಿ ಹರಮಗಟ್ಟಿ, ಪಾಂಡುರಂಗ ಸುತಾರ ಇದ್ದರು.