Advertisement

ಹೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ

05:11 PM Aug 24, 2019 | Team Udayavani |

ಬ್ಯಾಡಗಿ: ಗ್ರಾಮೀಣ ಭಾಗದಲ್ಲಿನ ಐಪಿ ಸೆಟ್‌ಗಳಿಗೆ ಸಮರ್ಪಕ ವಿದ್ಯುತ್‌ ಪೂರೈಕೆ ಮಾಡದ ಹೆಸ್ಕಾಂ ಅಧಿಕಾರಿಗಳ ವಿರುದ್ಧ ರೈತ ಸಂಘದ ಹಸಿರು ಸೇನೆ ಸದಸ್ಯರು ಗುರುವಾರ ಹೆಸ್ಕಾಂ ಕಚೇರಿಗೆ ಬೀಗ ಹಾಕಿ ನಡೆಸಿದ್ದ ಪ್ರತಿಭಟನೆ ಶುಕ್ರವಾರವೂ ಮುಂದುವರೆಯಿತು.

Advertisement

ಬೆಳಗ್ಗೆ 10ಗಂಟೆಗೆ ಮತ್ತೆ ಕಚೇರಿಗೆ ಆಗಮಿಸಿದ ರೈತ ಸಂಘದ ಮುಖಂಡರು ಹಾಗೂ ಸದಸ್ಯರು ಕಚೇರಿ ಬಾಗಿಲಿಗೆ ಬೀಗ ಹಾಕಿ ಪ್ರತಿಭಟನೆ ಆರಂಭಿಸಿದರು. ಪರಿಣಾಮ ಹೆಸ್ಕಾಂ ಸಿಬ್ಬಂದಿ ಕಚೇರಿ ಒಳಗೆ ಹೋಗಲಾರದೆ ಹೊರಗುಳಿಯುವಂತಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ, ಗುರುವಾರ ಇಡೀ ದಿನ ಕಚೇರಿ ಎದುರು ಧರಣಿ ನಡೆಸಿದ್ದೇವೆ. ಆದರೆ, ಯಾವೊಬ್ಬ ಅಧಿಕಾರಿಯೂ ಸಮರ್ಪಕ ಉತ್ತರ ನೀಡದೆ ಕಾಲ್ಕಿತ್ತಿದ್ದಾರೆ. ಇದ್ಯಾವ ರೀತಿಯ ಫ‌ಲಾಯನವಾದ? ತಾಲೂಕಿನ ಗ್ರಾಮೀಣ ಭಾಗದಲ್ಲಿ ಕಳೆದ ಒಂದುವರೆ ತಿಂಗಳಿನಿಂದ ವಿದ್ಯುತ್‌ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ವಿದ್ಯುತ್‌ ಪೂರೈಸಿ ರೈತರನ್ನು ಉಳಿಸಿ ಎಂದು ಕೇಳಿದ್ದೆ ತಪ್ಪಾಯಿತೇ ಎಂದು ಪ್ರಶ್ನಿಸಿದರು.

ಎಲ್ಲದಕ್ಕೂ ಹೋರಾಟ ಮಾಡಬೇಕಾ?: ಕ‌ೃಷಿಕ ಸಮಾಜದ ಅಧ್ಯಕ್ಷ ಗಂಗಣ್ಣ ಎಲಿ ಮಾತನಾಡಿ, ದೇಶದಲ್ಲಿ ರೈತ ಸಮೂಹಕ್ಕೆ ಬಂದಿರುವ ಪರಿಸ್ಥಿತಿ ಇನ್ಯಾರಿಗೂ ಬಂದಿರಲೂ ಸಾಧ್ಯವಿಲ್ಲ. ದೇಶಕ್ಕೆ ಅನ್ನ ನೀಡುವ ಅನ್ನದಾತ ಇಂದು ತನ್ನ ಹಕ್ಕನ್ನು ಪಡೆದುಕೊಳ್ಳಲು ಹೆಣಗಾಡುವಂತಾಗಿದ್ದು ನಮ್ಮ ದುರ್ದೈವ. ಬೆಳೆ ವಿಮೆ ಪರಿಹಾರ, ಸಾಲಮನ್ನಾ, ನೀರು, ಸೇರಿದಂತೆ ಪ್ರತಿಯೊಂದನ್ನು ಹೋರಾಟದ ಮೂಲಕವೇ ಪಡೆದುಕೊಳ್ಳುವಂತಾಗಿದೆ. ಇದು ನಮ್ಮನ್ನಾಳುವ ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ತನಕ್ಕೆ ಹಿಡಿದ ಕನ್ನಡಿಯಾಗಿದೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಪೂರೈಕೆ ಮಾಡುವವರೆಗೂ ಇಲ್ಲಿಂದ ಕದಲಲಿಲ್ಲ ಎಂದು ಎಚ್ಚರಿಸಿದರು.

ಹೆಸ್ಕಾಂ ಅಧಿಕಾರಿ ತರಾಟೆ: ರೈತರ ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಎಇಇ ಹಾಲೇಶ ಅಂತರವಳ್ಳಿ ರೈತರನ್ನು ಸಮಾಧಾನ ಪಡಿಸಲು ಮುಂದಾದರು. ಈಗಾಗಲೇ ಕೆಲ ಗ್ರಾಮಗಳಲ್ಲಿ ಸಮಸ್ಯೆಗೆ ಪರಿಹರಿಸಿ ವಿದ್ಯುತ್‌ ನೀಡಲಾಗಿದೆ. ಇನ್ನೂ ಕೆಲ ದಿನಗಳಲ್ಲಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು. ಆಕ್ರೋಶಗೊಂಡ ರೈತರು ಒಂದುವರೆ ತಿಂಗಳು ಎಲ್ಲಿ ಹೋಗಿತ್ತು? ನಿಮ್ಮ ಈ ಕರ್ತವ್ಯ ಪ್ರಜ್ಞೆ, ನಾವು ಹೋರಾಕ್ಕಿಳಿದ ಕೂಡಲೇ ಜವಾಬ್ದಾರಿ ಅರಿವಾಯಿತೆ? ನಿಮ್ಮ ಮಾತನ್ನು ನಾವು ನಂಬಲ್ಲ, ನಿಮ್ಮ ಮೇಲಧಿಕಾರಿ ಅವರನ್ನು ಕರೆಯಿಸಿ ಎಂದು ಪಟ್ಟು ಹಿಡಿದರು.

Advertisement

ರೈತರು ತಮ್ಮ ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಕಾರ್ಯ ನಿರ್ವಾಹಕ ಅಭಿಯಂತರ ಬಸವರಾಜ ಬೆಳಕೇರಿ ಮಾತನಾಡಿ, ಸಿಬ್ಬಂದಿ ಕೊರತೆ ಹಾಗೂ ಮಳೆಗೆ ವಿದ್ಯುತ್‌ ಕಂಬಗಳು ಧರೆಗುರುಳಿದ ಪರಿಣಾಮ ಈ ಸಮಸ್ಯೆ ಉಂಟಾಗಿದ್ದು, ಇನ್ನೆರಡು ದಿನಗಳಲ್ಲಿ ಎಲ್ಲ ಸರಿಪಡಿಸಿ ಮುಂದೇ ಈ ರೀತಿಯ ತೊಂದರೆಗಳಾಗದಂತೆ ನೊಡಿಕೊಳ್ಳುವುದು ಸೇರಿದಂತೆ ಗ್ರಾಮೀಣ ಭಾಗದಲ್ಲಿ ಹಗಲು 7ಗಂಟೆ ವಿದ್ಯುತ್‌ ನೀಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಈ ಸಂದರ್ಭದಲ್ಲಿ ಶಶಿಧರಸ್ವಾಮಿ ಛತ್ರದಮಠ, ಕಿರಣ ಗಡಿಗೋಳ, ಜಾನ್‌ ಪುನೀತ್‌ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next