ಬ್ಯಾಡಗಿ: ಹಣ ಕೊಟ್ಟರೂ ನೀರು ಸಿಗುತ್ತಿಲ್ಲ. ಕೆರೆಗಳಿಗೆ ನೀರು ತುಂಬಿಸುವುದೊಂದೆ ಕುಡಿಯುವ ನೀರಿನ ಶಾಶ್ವತ ಸಮಸ್ಯೆಗೆ ಅಂತಿಮ ಪರಿಹಾರವಾಗಿದೆ. ಈ ಸತ್ಯ ಅರಿತೂ ಜವಾಬ್ದಾರಿಯುತ ಅಧಿಕಾರಿಗಳಾಗಿ ಅಗತ್ಯ ಕ್ರಮ ಕೈಗೊಳ್ಳದೇ ಸುಳ್ಳು ಹೇಳಿಕೊಂಡು ತಿರುಗಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ? ಕೂಡಲೇ ಕೆರೆ ಒತ್ತುವರಿ ತೆರವುಗೊಳಿಸಿ ಫೀಡರ್ ಕ್ಯಾನಲ್‌ಗಳಲ್ಲಿ ಸರಾಗವಾಗಿ ನೀರು ಹರಿಯುವಂತೆ ನೋಡಿಕೊಳ್ಳಲು ತಾಪಂ ಇಒ ಅಬಿದ್ ಗದ್ಯಾಳ್ ಸಣ್ಣ ನೀರಾವರಿ ಅಧಿಕಾರಿಗೆ ತಾಕೀತು ಮಾಡಿದ ಘಟನೆ ಶನಿವಾರ ತಾಪಂ ಸಭಾಭವನದಲ್ಲಿ ಜರುಗಿದ ಕೆಡಿಪಿ ಸಭೆಯಲ್ಲಿ ನಡೆಯಿತು.
ಮುಂಬರುವ ಬೇಸಿಗೆಯಲ್ಲಿ ನೀರಿನ ಸಮಸ್ಯೆ ನಿಭಾಯಿಸಲು ಹರಸಾಹಸ ಪಡಬೇಕಾಗಿದೆ. ಬೇಸಿಗೆಗೂ ಮುನ್ನವೇ ತಾಲೂಕಿನ ಅರ್ಧದಷ್ಟು ಗ್ರಾಮಗಳು ನೀರಿನ ಸಮಸ್ಯೆಯಲ್ಲಿ ಮುಳುಗಿವೆ. ಮಳೆಗಾಲ ಬರಲು ಕನಿಷ್ಟ 6 ತಿಂಗಳು ಕಾಯಬೇಕು. ಅಲ್ಲಿಯವರೆಗೂ ನೀರಿನ ಕೊರತೆಯಾಗದಂತೆ ನೋಡಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿದ್ದೇವೆ. ಅಂತಹುದರಲ್ಲಿ ಕೆರೆಗಳಿಗೆ ನೀರು ಸರಾಗವಾಗಿ ಹೋಗುವಂತೆ ನೋಡಿಕೊಳ್ಳಬೇಕಾದ ನೀವೇ ಸರ್ವೇ ಅಧಿಕಾರಿಗಳ ಮೇಲೆ ಹೇಳಿಕೊಂಡು ತಿರುಗಾಡುತ್ತಿರುವುದು ತಮ್ಮ ಸ್ಥಾನಕ್ಕೆ ತಕ್ಕುದಲ್ಲ ಎಂದು ಕುಟುಕಿದರು.
ಎಷ್ಟು ಜನರಿಗೆ ಹೆಲ್ತ್ ಕಾರ್ಡ್ ಸಿಕ್ಕಿದೆ?: ಸರ್ಕಾರ ಬಡವರಿಗಾಗಿ ಹೆಲ್ತ್ ಕಾರ್ಡ್ ಸೌಲಭ್ಯ ಪ್ರಕಟಿಸಿದೆ. ಆದರೆ, ಆರೋಗ್ಯಾಧಿಕಾರಿಗಳಿಂದ ಇಂದಿಗೂ ಯಾವೊಬ್ಬ ರೋಗಿಗೂ ಇದನ್ನು ಒದಗಿಸಿಲ್ಲ. ಕೇಳಿದರೆ ಇಲ್ಲಸಲ್ಲದ ಉತ್ತರಗಳನ್ನು ಹೇಳುತ್ತೀರಿ, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆರೋಗ್ಯ ಕರ್ನಾಟಕ, ಆಯುಷ್ಮಾನ ಭಾರತ ಯೋಜನೆಗೆ ಈ ವರೆಗೂ ಕಾರ್ಡ್‌ಗಳನ್ನು ನೀಡುತ್ತಿಲ್ಲವೇಕೆ ? ಹಾಗಿದ್ದರೆ ಬಡವರು ಯೋಜನೆಯ ಲಾಭ ಪಡೆದುಕೊಳ್ಳಬಾರದೆ ? ಇಲ್ಲಿಯವರೆಗೂ ಆಸ್ಪತ್ರೆಯಲ್ಲಿ ಎಷ್ಟು ಕಾರ್ಡ್‌ಗಳನ್ನು ನೀಡಿದ್ದೀರಿ ಎಂದು ಆರೋಗ್ಯ ಇಲಾಖೆ ಕುರಿತ ಚರ್ಚೆಯ ಸಂದರ್ಭದಲ್ಲಿ ತಾಪಂ ಅಧ್ಯಕ್ಷೆ ಸವಿತಾ ಸುತ್ತಕೋಟಿ ಬಿಗಿಪಟ್ಟು ಹಿಡಿದರು. ಆರೋಗ್ಯಾಧಿಕಾರಿ ಬಳಿ ಯಾವುದೇ ಉತ್ತರವಿರದ ಕಾರಣ ಮೌನವಹಿಸಿದ್ದರು.
ಹಣ ಕೇಳುತ್ತೀರಂತೆ?: ತಾಲೂಕಾಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಶಸ್ತ್ರ ಚಿಕಿತ್ಸೆ ಮಾಡಿಸಲು ವೈದ್ಯರು 5 ಸಾವಿರ ರೂ.ಗಳಿಗೆ ಬೇಡಿಕೆ ಇಡುತ್ತಿರುವ ಆರೋಪವಿದೆ. ಸಂತ್ರಸ್ಥೆಯ ಸಂಬಂಧಿಕರು ದೂರು ನೀಡಲು ನನ್ನ ಬಳಿಯೇ ಬಂದಿದ್ದರು. ಬಡವರಿಗೆ ಉಚಿತವಾಗಿ ಸೀಗಬೇಕಾದ ಸೌಲಭ್ಯಗಳಿಗೂ ಹಣ ಪೀಕುವಂತಹ ಹೀನ ಸ್ಥಿತಿಗೆ ಇಳಿದಿರುವ ವೈದ್ಯರ ಬಗ್ಗೆ ತಾಲೂಕು ವೈದ್ಯಾಧಿಕಾರಿಯಾಗಿ ನೀವು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಸವಿತಾ ಸುತ್ತಕೋಟಿ ಪ್ರಶ್ನಿಸಿದರು. ರಾಜ್ಯದಲ್ಲಿಯೇ ಬ್ಯಾಡಗಿ ಸುಸಜ್ಜಿತ ಆಸ್ಪತ್ರೆ ಎಂದೇ ಖ್ಯಾತಿ ಪಡೆಯುತ್ತಿದೆ, ಹೀಗಿರುವಾಗ ಆಸ್ಪತ್ರೆಯ ಖ್ಯಾತಿಗೆ ಮಸಿ ಬಳಿಯುವ ವೈದ್ಯರ ಬಗ್ಗೆ ಎಚ್ಚರವಿರಲಿ ಎಂದು ತಾಕೀತು ಮಾಡಿದರು.
ಒಡೆದ ಕುಂಡಲಗಳನ್ನು ಕೊಟ್ಟೀರಲ್ರೀ: ತೋಟಗಾರಿಕಾ ಇಲಾಖೆ ಕುರಿತು ಪ್ರಗತಿ ಪರಪರಿಶೀಲನಾ ಸಂದರ್ಭದಲ್ಲಿ ಮಾತನಾಡಿದ ಸವಿತಾ ಸುತ್ತಕೋಟಿ, ಇಲಾಖೆ ವತಿಯಿಂದ ನೀಡಲಾಗುತ್ತಿರುವ ಕುಂಡಲಗಳು ಅತ್ಯಂತ ಕಳಪೆಯಾಗಿವೆ. ನಾಲ್ಕು ದಿನಗಳಲ್ಲಿ ಹಾಳಾಗುತ್ತಿವೆ, ಇಂತಹವುಗಳನ್ನು ನೀಡಿಯೂ ಪ್ರಯೋಜನವಿಲ್ಲ. ಇಂಥವೆಲ್ಲ ಲೆಕ್ಕಕ್ಕೆ ಮಾತ್ರ ಸೀಮಿತವಾಗುತ್ತಿದ್ದು, ತೆಗೆದುಕೊಂಡು ಹೋದವರು ಹಿಡಿಶಾಪ ಹಾಕುತ್ತಿದ್ದಾರೆ. ಇನ್ನು ಮುಂದಾದರೂ ಗುಣಮಟ್ಟದ ಕುಂಡಲಗಳನ್ನು ನೀಡಿ ಎಂದು ತೋಟಗಾರಿಕೆ ಅಧಿಕಾರಿ ವಿಜಯಲಕ್ಷಿ ್ಮೕ ಅವರಿಗೆ ಸೂಚಿಸಿದರು.
ಶಾಲೆಗಳ ಬಗ್ಗೆ ಎಚ್ಚರವಿರಲಿ: ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ಶಿಥೀಲಾವಸ್ಥೆ ತಲುಪಿ ಮಕ್ಕಳ ಜೀವಕ್ಕೆ ಸಂಚಕಾರ ತಂದೊಡ್ಡುತ್ತಿವೆ. ಆದರೆ, ಶಾಲಾ ಕಟ್ಟಡವನ್ನು ಈ ವರೆಗೂ ನೆಲಸಮಗೊಳಿಸಿಲ್ಲ. ಗ್ರಾಮಸ್ಥರು ಮುಖ್ಯಮಂತ್ರಿಗಳ ಬಳಿ ಈ ಕುರಿತು ಮೌಖೀಕವಾಗಿ ಮನವಿ ಮಾಡಿಕೊಂಡಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಇರುವ ಸಮಸ್ಯೆಗೆ ಇಲ್ಲಿಯವರೆಗೂ ಪರಿಹಾರವೇಕೆ ಸಿಕ್ಕಿಲ್ಲ ಎಂದು ಶಿಕ್ಷಣಾಧಿಕಾರಿ ಎಂ.ಮಂಜುನಾಥಸ್ವಾಮಿ ಅವರನ್ನು ಟಿಇಒ ಗದ್ಯಾಳ ಪ್ರಶ್ನಿಸಿದರು.
ಭಾಗ್ಯಲಕ್ಷ್ಮೀ ಬಾಂಡ್ ವಿತರಣೆಯಾಗಿಲ್ಲ: ಕಳೆದ 2016 ರಿಂದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಸರ್ಕಾರ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ ಮಾಡಿಲ್ಲ. ಈ ಕುರಿತಂತೆ ಸಾರ್ವಜನಿಕರು ಗೊಂದಲಕ್ಕೀಡಾಗಿದ್ದು, ಕೂಡಲೇ ಸಮಸ್ಯೆ ಬಗೆಹರಿಸುವಂತೆ ಉಪಾಧ್ಯಕ್ಷ ಶಾಂತಮ್ಮ ದೇಸಾಯಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಡಿಪಿಒ ವಿಜಯಕುಮಾರ ಮಾತನಾಡಿ, ಭಾಗ್ಯಲಕ್ಷಿ ್ಮೕ ಬಾಂಡ್ ವಿತರಣೆಯಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಲು ನಿರ್ಧರಿಸಿದ್ದು, ಈಗಿನ 2 ಲಕ್ಷ ರೂ. ದಿಂದ 4 ಲಕ್ಷ ರೂ.ಗೆ ಏರಿಸುವ ಚಿಂತನೆ ನಡೆಸುತ್ತಿದ್ದು, ಹೀಗಾಗಿ ವಿಳಂಬವಾಗಿದೆ ಎಂದು ಸಭೆಗೆ ತಿಳಿಸಿದರು.
ಗೈರಾದ ಅಧಿಕಾರಿಗಳಿಗೆ ನೋಟಿಸ್
ತಾಪಂ ಕೆಡಿಪಿ ಸಭೆ ಎಂದರೆ ತಾತ್ಸಾರ ಮನೋಭಾವನೆ ತೋರುತ್ತಿರುವ ಕೆಲ ಇಲಾಖೆ ಅಧಿಕಾರಿಗಳು ಸರಿಯಾದ ಸಮಯಕ್ಕೆ ಹಾಜರಾಗದೆ ಉದ್ಧಟತನ ತೋರುತ್ತಿದ್ದಾರೆ. ಸಕಾರಣ ನೀಡದೇ ಹೊರಗೆ ತಿರುಗುತ್ತಿರುವ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸುವಂತೆ ಇಒ ಅಬಿದ್ ಗದ್ಯಾಳ್ ಸೂಚಿಸಿದರು.