ಬ್ಯಾಡಗಿ: ತಮ್ಮ ಸೇತುವೆ ಉಳಿಸಿಕೊಳ್ಳುವ ಭರದಲ್ಲಿ ರೈಲ್ವೆ ಇಲಾಖೆ ಸಿಬ್ಬಂದಿ ಸೇತುವೆಗೆ ಹೊಂದಿಕೊಂಡು ಸಂಗ್ರವಾಗಿದ್ದ ನೀರನ್ನು ಕೃಷಿಕನೊಬ್ಬ ಜಮೀನಿಗೆ ತಿರುವಿದ ಪರಿಣಾಮ ಸುಮಾರು ಮೂರುವರೆ ಎಕರೆಯಷ್ಟು ಬೆಳೆದು ನಿಂತ ಸೋಯಾಬಿನ್ ಬೆಳೆ ನಾಶವಾಗಿದ್ದಲ್ಲದೇ ಇಡೀ ಹೊಲದ ಫಲವತ್ತತೆಯೇ ನೀರಿನಲ್ಲಿ ಕೊಚ್ಚಿ ಹೋಗಿದ್ದು ರೈತನ ಬದುಕೇ ದುಸ್ತರವಾಗುವಂತೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ರೈಲ್ವೆ ಇಲಾಖೆಯು ತನ್ನ ಹಳಿಗಳ ಅಕ್ಕಪಕ್ಕದಲ್ಲಿ ಸರಾಗವಾಗಿ ನೀರು ಹರಿಸುವ ದೃಷ್ಟಿಯಿಂದ ಹಾಗೂ ಜನ ಜಾನುವಾರುಗಳು ಹಳಿಗಳನ್ನು ದಾಟಿ ಹೋಗಲು ಅದರ ಕೆಳಭಾಗದಲ್ಲಿ ರಸ್ತೆ ಹಾಗೂ ಸೇತುವೆಗಳನ್ನು ನಿರ್ಮಿಸುತ್ತದೆ, ಆದರೆ, ಬ್ಯಾಡಗಿ ಸ್ಟೇಶನ್ ಮತ್ತು ಛತ್ರ (ಕೆಎಂ-378 ಬ್ರಿಡ್ಜ್ ನಂ.54) ಗ್ರಾಮಗಳ ನಡುವೆ ನಿರ್ಮಿಸಿದ ಸೇತುವೆಯೊಂದರ ಪಕ್ಕದಲ್ಲಿ ಸಂಗ್ರಹವಾಗಿದ್ದ ನೀರು ತೆರವುಗೊಳಿಸುವ ಕಾರ್ಯದಲ್ಲಿ ಅಧಿಕಾರಿಗಳು ತೋರಿದ ನಿರ್ಲಕ್ಷ ್ಯದಿಂದಾಗಿ ರೈತನ ಜಮೀನು ಹಾಳಾಗುವುದನ್ನು ಲೆಕ್ಕಿಸದೇ ನೀರು ನುಗ್ಗಿಸಿದ್ದೆ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ.
15 ದಿನಗಳಿಂದ ಜಿಲ್ಲೆಯಾದ್ಯಂತ ಸುರಿದ ಮಹಾಮಳೆಗೆ ಈಗಾಗಲೇ ಕೃಷಿಕರ ಬದುಕು ದುಸ್ತರವಾಗಿದೆ. ಸದರಿ ಸೇತುವೆ ಅಕ್ಕಪಕ್ಕದಲ್ಲಿ ಹಿಂದಿಗಿಂತಲೂ ಪ್ರಸಕ್ತ ವರ್ಷ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿತ್ತು. ಇದನ್ನರಿತ ರೈಲ್ವೆ ಸಿಬ್ಬಂದಿ ತಮ್ಮ ಸೇತುವೆ ಉಳಿಸಿಕೊಳ್ಳುವ ದೃಷ್ಟಿಯಿಂದ ಜೆಸಿಬಿಗಳ ಮೂಲಕ ಸಂಗ್ರಹಗೊಂಡ ನೀರನ್ನು ಕೃಷಿಕನ ಜಮೀನಿಗೆ ತಿರುವಿದ್ದು, ಬ್ಯಾಡಗಿ ಪಟ್ಟಣದ ಮಾರುತಿ ದೇಸೂರ ಎಂಬುವರ ಮೋಟೆಬೆನ್ನೂರು ಹದ್ದಿಗೆ ಸೇರಿದ ಮೂರುವರೆ ಎಕರೆ ಕೃಷಿಭೂಮಿ ಸಂಪೂರ್ಣ ಕೊರಕಲಾಗಿ ಫಸಲು ಸಮೇತ ಫಲವತ್ತತೆ ನಾಶವಾಗಿದೆ.
ಬ್ಯಾಡಗಿ ಸ್ಟೇಶನ್ ಮತ್ತು ಛತ್ರ ನಡುವೆ ನಿರ್ಮಿಸಿರುವ ಬ್ರಿಡ್ಜ್ ಅಕ್ಕಪಕ್ಕದಲ್ಲಿ ಕಳೆದ ಹಲವು ವರ್ಷಗಳಿಂದ ನೀರು ಸಂಗ್ರಹಗೊಳ್ಳುತ್ತಿದ್ದು, ಸಮಸ್ಯೆಗೆ ಪರಿಹಾರ ಕಾಣದೇ ಇಂದಿಗೂ ಜೀವಂತವಾಗಿದೆ. ಇದಕ್ಕಾಗಿ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿದರೂ ರೈಲ್ವೆ ಇಲಾಖೆ ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಶಾಶ್ವತ ಪರಿಹಾರವನ್ನೂ ಕಂಡು ಹಿಡಿಯುತ್ತಿಲ್ಲ ಎಂಬುದು ರೈತರ ಆರೋಪವಾಗಿದೆ.
ರೈತರ ಜನ ಜಾನುವಾರುಗಳ ಅನುಕೂಲಕ್ಕೆ ಹಾಗೂ ನೀರು ಹರಿದು ಹೋಗಲು ರೈಲ್ವೇ ಇಲಾಖೆಯೇನೋ ಸದರಿ ಸೇತುವೆಯನ್ನು ನಿರ್ಮಿಸಿದೆ. ಆದರೆ, ಸೇತುವೆ ಅಕ್ಕಪಕ್ಕದಲ್ಲಿನ ನೀರು ಸರಾಗವಾಗಿ ತೆರವುಗೊಳ್ಳದಿರುವುದು ಅವಾಂತರಕ್ಕೆ ಕಾರಣವಾಗಿದೆ. ಈ ಸೇತುವೆ ಅನುಕೂಲಕ್ಕಿಂತ ರೈತರಿಗೆ ಅನಾನುಕೂಲವೇ ಹೆಚ್ಚಾಗಿದೆ