Advertisement

ತಹಶೀಲ್ದಾರ್‌ ಕಚೇರಿ ಸಿಬ್ಬಂದಿ ಮೇಲೆ ಎಫ್‌ಐಆರ್‌ ದಾಖಲು

03:46 PM Feb 28, 2020 | Naveen |

ಬ್ಯಾಡಗಿ: 2019-20ನೇ ಸಾಲಿನ ಅತೀವೃಷ್ಟಿ ಪರಿಹಾರ ವಿತರಣೆಯಲ್ಲಿ ಲೋಪದೋಷ ಆರೋಪದಡಿ ಸ್ಥಳೀಯ ತಹಶೀಲ್ದಾರ್‌ ಸೇರಿದಂತೆ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಸಹಾಯಕ ತೋಟಗಾರಿಕೆ ಸಹಾಯಕ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿಗಳು ತಹಶೀಲ್ದಾರರಿಂದ ನಿಯೋಜಿಸಲ್ಪಟ್ಟ ಆಪರೇಟರ್‌ಗಳು ಹಾಗೂ ಅನರ್ಹ ಫಲಾನುಭವಿಗಳ ವಿರುದ್ಧ ಅಪರ್‌ ಜಿಲ್ಲಾಧಿಕಾರಿ ಯೋಗೀಶ್ವರ ಬ್ಯಾಡಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ 406, 408, 409, 420, 465 ಕಲಂ ವಿಧಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ತನಿಖಾಧಿಕಾರಿ ಹಾಗೂ ಅಪರಾಧ ವಿಭಾಗದ ಪಿಎಸ್‌ಐ ಎಚ್‌.ಎಸ್‌. ಕಂಬಳಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Advertisement

ಏನಿದು ಪ್ರಕರಣ?: ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತೀವೃಷ್ಟಿ ಪರಿಹಾರ ವಿತರಣೆ ಮನಬಂದವರ ಖಾತೆಗೆ ಹಣ ಜಮೆ ಮಾಡಲಾದ ಪ್ರಕರಣಗಳು ಬಯಲಾಗಿದ್ದವು. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬೆಳಗಾವಿ ವಿಭಾಗೀಯ ಆಯುಕ್ತರಿಗೆ ಲಿಖೀತ ದೂರು ನೀಡಿ ಲೋಪದೋಷಗಳನ್ನು ಸರಿಪಡಿಸುವಂತೆ ಆಗ್ರಹಿಸಿತ್ತು.

ಪ್ರಕರಣದ ಬೆನ್ನುಹತ್ತಿರುವ ಜಿಲ್ಲಾಡಳಿತ ಸಂಬಂಧಿಸಿದ ತಾಲೂಕಗಳ ತಹಶೀಲ್ದಾರ್‌ ಸೇರಿದಂತೆ ಸಿಬ್ಬಂದಿಗಳ ಮೇಲೆ ಪ್ರಕರಣ ದಾಖಲಿಸಿದೆ. ಎಫ್‌ಐಆರ್‌ ನಲ್ಲಿ ಆರೋಪಿಗಳ ಸಂಪೂರ್ಣ ಹೆಸರು, ಲಿಂಗ, ಜಾತಿ, ವಯಸ್ಸು, ಘಟನೆ ನಡೆದ ದಿನಾಂಕ ಸಮಯ ಇದ್ಯಾವುದೂ ನಮೂದಾಗಿಲ್ಲ. ಹೀಗಾಗಿ ಸದರಿ ಎಫ್‌ಐಆರ್‌ ಹಿಟ್‌ ಆ್ಯಂಡ್‌ ರನ್‌ನಂತೆ ಮೇಲ್ನೋಟಕ್ಕೆ ಕಾಣುತ್ತಿದ್ದು, ಪ್ರಕರಣದಲ್ಲಿ ಭಾಗಿಯಾಗದೇ ಇದ್ದವರಿಗೂ ಸಹ ಖಂಡಿತವಾಗಿಯೂ ಎಫ್‌ ಐಆರ್‌ ಬಿಸಿ ಮುಟ್ಟಲಿದೆ.

ತಲೆ ಮರಿಸಿಕೊಂಡ ಸಿಬ್ಬಂದಿ: ಇತ್ತ ಬ್ಯಾಡಗಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ತಹಶೀಲ್ದಾರ್‌ ಸೇರಿದಂತೆ ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಸಹಾಯಕರು ಕಂಪ್ಯೂಟರ್‌ ಆಪರೇಟರ್‌ಗಳು ಅಜ್ಞಾತ ಸ್ಥಳಕ್ಕೆ ತೆರಳಿದ್ದು, ಸಿಬ್ಬಂದಿಗಳಿಲ್ಲದೇ ತಹಶೀಲ್ದಾರ್‌ ಕಚೇರಿ ಬಿಕೋ ಎನ್ನುತ್ತಿವೆ. ಕೆಲವರು ಜಾಮೀನು ಅರ್ಜಿಗಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಲು ಮುಂದಾಗಿದ್ದಾರೆ. ಇನ್ನೂ ಕೆಲವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದು, ಅಂತೂ ಎಫ್‌ಐಆರ್‌ ಮಾತ್ರ ತಾಲೂಕಿನಲ್ಲಿ ಸಂಚಲನ ಮೂಡಿಸಿದೆ.

ತಪ್ಪಿಸಿಕೊಳ್ಳದಿರಲಿ ತಪ್ಪಿತಸ್ಥರು
ಘಟನೆ ಕುರಿತು ವಿಷಾದ ವ್ಯಕ್ತಪಡಿಸುತ್ತೇವೆ. ತಪ್ಪಿತಸ್ಥರಿಗಷ್ಟೇ ಬಿಸಿ ಮುಟ್ಟಿಸುವ ಕಾರ್ಯವಾಗಬೇಕು. ಯಾವುದೇ ಕಾರಣಕ್ಕೂ ನಿರಪರಾಧಿಗಳಿಗೆ ಶಿಕ್ಷೆಯಾಗಬಾರದು. ಇಲಾಖೆಯಡಿ ತನಿಖೆ ಕೈಗೊಳ್ಳಲು ಸಾಕಷ್ಟು ಅವಕಾಶಗಳಿವೆ. ಅದಾಗ್ಯೂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿರುವುದು ಆಶ್ಚರ್ಯದ ಸಂಗತಿ. ದೋಷಾರೋಪಣೆ ಪಟ್ಟಿ ಸಲ್ಲಿಸುವ ಮುನ್ನ ಸಿಬ್ಬಂದಿಗಳಿಗೆ ಒದಗಿಸಿದ ತಂತ್ರಾಂಶದಲ್ಲಿನ ಲೋಪದೋಷ ಪರಿಗಣಿಸುವ ಕೆಲಸ ಪೊಲೀಸರಿಂದಾಗಬೇಕು. ರಾಮಣ್ಣ ಕೆಂಚಳ್ಳೇರ,
ರಾಜ್ಯ ರೈತ ಸಂಘ ಹಾಗೂ
ಹಸಿರುಸೇನೆ ಜಿಲ್ಲಾಧ್ಯಕ್ಷರು

Advertisement
Advertisement

Udayavani is now on Telegram. Click here to join our channel and stay updated with the latest news.

Next