ಬ್ಯಾಡಗಿ: ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಕಪ್ಪುಬಟ್ಟೆ ಪ್ರದರ್ಶಿಸಲು ಮುಂದಾಗಿದ್ದ ರೈತ ಸಂಘದ ಐವರು ಮುಖಂಡರನ್ನು ಏಕಾಏಕಿ ಬಂಧಿಸಿದ ಪೊಲೀಸರ ಕ್ರಮವನ್ನು ಖಂಡಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಶನಿವಾರ ಪಟ್ಟಣದ ಹಳೇ ಪೊಲೀಸ್ ಠಾಣೆಯ ಬಳಿ ಸುಮಾರು 2 ತಾಸುಗಳಿಗೂ ಹೆಚ್ಚು ಪ್ರತಿಭಟನೆ ನಡೆಸಿ, ಟೈಯರ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಆಣೂರು ಕೆರೆಗೆ ನೀರು ತುಂಬಿಸುವ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಹಾಗೂ ರೈತ ಸಂಘದ ಕಾರ್ಯಕರ್ತರ ನಡುವೆ ಕಳೆದೊಂದು ವಾರದಿಂದ ಆರೋಪ ಪ್ರತ್ಯಾರೋಪಗಳು ನಡೆದಿದ್ದವು, 212 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದಾಗಿ ಸುಳ್ಳು ಹೇಳಿದ್ದೇ ರೈತರು ಆಕ್ರೋಶಗೊಳ್ಳಲು ಕಾರಣವಾಗಿದ್ದು, ಕೊನೆಗೆ ಜಮೀರ್ ಅಹ್ಮದ್ ಪಾಲ್ಗೊಳ್ಳುವ ಕಾರ್ಯಕ್ರಮಕ್ಕೆ ರೈತ ಮುಖಂಡರು ಕಪ್ಪುಬಟ್ಟೆ ಪ್ರದರ್ಶಿಸುವುದಾಗಿ ನಿರ್ಧಾರಿಸಿದ್ದರು. ಹಿನ್ನೆಲೆಯಲ್ಲಿ ಪೊಲೀಸರು ರೈತ ಮುಖಂಡರನ್ನು ಬಂಧಿಸಿದ್ದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಕಳೆದ 40 ವರ್ಷಗಳಿಂದ ರಾಜ್ಯ ರೈತ ಸಂಘವು ಜಿಲ್ಲೆಯಲ್ಲಿ ಶಾಂತಿಯುತವಾಗಿ ವಿಷಯಾಧಾರಿತ ಹೋರಾಟ ನಡೆಸುತ್ತ ಬಂದಿದೆ. ಅಂತೆಯೇ ಆಣೂರು ಕೆರೆಯನ್ನು ತುಂಬಿಸುವ ಮೂಲಕ ಬ್ಯಾಡಗಿ, ಹಿರೇಕೆರೂರ, ಹಾವೇರಿ ತಾಲೂಕುಗಳ 36 ಕೆರೆಗಳನ್ನು ತುಂಬಿಸುವ ಯೋಜನೆ ಅನುಷ್ಠಾನಕ್ಕೆ ಹೋರಾಟ ನಡೆಸುತ್ತಿರುವುದು ಇದೇನು ಮೊದಲಲ್ಲ, ಅಷ್ಟಕ್ಕೂ ಇಲ್ಲಿ ರೈತರು ಕೇಳುತ್ತಿರುವುದು ಜನ-ಜಾನುವಾರುಗಳಿಗೆ ಕುಡಿಯಲು ನೀರು. ಅಂತರ್ಜಲ ವೃದ್ಧಿಗೆ ಕೆರೆ ಭರ್ತಿ ಮಾಡುವುದೇ ಹೊರತು, ಸ್ವಾರ್ಥಕ್ಕಾಗಿ ಸರ್ಕಾರವನ್ನು ಲೂಟಿ ಮಾಡುತ್ತಿರುವ ನಿಮ್ಮ ಪರ್ಸೆಂಟೇಜ್ ಹಣಕ್ಕಲ್ಲಾ ಎಂದರು.
ರೈತರಿಗೆ ನೀರು ಕೊಡಿಸಲಾಗದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ರಣಹೇಡಿ. ಸುಳ್ಳು ಹೇಳಿಕೊಂಡು ತಿರುಗಾಡುವುದೇ ಆತನ ಜಾಯಮಾನ, ಇಂತಹ ಕೈಲಾಗದ ಸಚಿವರು ಜಿಲ್ಲೆಯಲ್ಲಿ ಇದ್ದರೆಷ್ಟು ಬಿಟ್ಟರೆಷ್ಟು, ಕೂಡಲೇ ಕಾಂಗ್ರೆಸ್ ಹೈಕಮಾಂಡ್ ಯಾವುದೇ ಕಾರಣಕ್ಕೂ ಜಮೀರ್ ಅಹ್ಮದನನ್ನು ಜಿಲ್ಲೆಯಲ್ಲಿ ಇಟ್ಟುಕೊಳ್ಳದಿರುವುದೇ ಸೂಕ್ತ. ಅಷ್ಟಕ್ಕೂ ನಮ್ಮ ಹೋರಾಟ ಕಾಂಗ್ರೆಸ್ ಸಮಾವೇಶದ ವಿರುದ್ಧವಲ್ಲ, ಸುಳ್ಳು ಹೇಳಿ ಸಮಾಜ ಸ್ವಾಸ್ಥ ಕೆಡಿಸುತ್ತಿರುವ ಜಮೀರ್ ಅಹ್ಮದ್ ವಿರುದ್ಧ ಎಂದು ಆಕ್ರೋಶ ಹೊರಹಾಕಿದರು.
ಜಿಲ್ಲಾ ಉಸ್ತುವಾರಿ ಸಚಿವರೇ, ಕುತಂತ್ರದಿಂದ ನೀವು 5 ಜನ ಮುಖಂಡರನ್ನು ಬಂಧಿಸಿರಬಹುದು, ಹೋರಾಟದಲ್ಲಿ 50 ಸಾವಿರಕ್ಕೂ ಹೆಚ್ಚು ರೈತರಿದ್ದೇವೆ. ನಮ್ಮ ಘೋಷವಾಕ್ಯವೇ ‘ಜೀವ ಬಿಟ್ಟೇವು ಜೀವಜಲ ಬಿಡೆವು’ ನಿಮ್ಮ ಪೊಳ್ಳು ಬೆದರಿಕೆಗಳಿಗೆ ರೈತ ಸಂಘ ಜಗ್ಗುವುದಿಲ್ಲ. ಮುಂದಿನ ದಿನಗಳಲ್ಲಿ ನೀರಿಗಾಗಿ ‘ಜೈಲ್ ಬರೋ’ ಚಳವಳಿ ಹಮ್ಮಿಕೊಳ್ಳುತ್ತೇವೆ. ತಾಕತ್ತಿದ್ದರೇ ನಿಮ್ಮ ಜೈಲುಗಳಲ್ಲಿ ನಮ್ಮ ರೈತರನ್ನು ಬಂಧಿಸಿ ಎಂದು ಸವಾಲೆಸೆದರು. ಪ್ರತಿಭಟನೆ ಖಾವು ಏರತೊಡಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು, ಬಂಧಿಸಿದ್ದ ರೈತ ಮುಖಂಡರನ್ನು ಬಿಡುಗಡೆ ಮಾಡಿದರು.
ಮಂಜು ತೋಟದ, ಶಿವಯೋಗಿ ಶಿರೂರ, ಮಹದೇವಪ್ಪ ಶಿಡೇನೂರ, ಈರಣ್ಣ ಬಣಕಾರ, ನಂದೀಶ್ ವೀರನಗೌಡ್ರ, ಡಾ| ಕೆ.ವಿ.ದೊಡ್ಡಗೌಡ್ರ, ಮೌನೇಶ ಕಮ್ಮಾರ, ಮಲ್ಲೇಶಪ್ಪ ಡಂಬಳ, ಶೇಖಪ್ಪ ಕಾಶಿ, ಸಂಜೀವ್ ಮಡಿವಾಳರ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.