Advertisement

ಬ್ಯಾಡಗಿ ಬಂದ್‌ ಸರ್ಕಾರಕ್ಕೆ ಎಚ್ಚರಿಕೆ ಗಂಟೆ: ಗಂಗಣ್ಣ ಎಲಿ

09:47 AM Feb 18, 2019 | Team Udayavani |

ಬ್ಯಾಡಗಿ: ಫೆ. 18ರಂದು ರೈತ ಸಂಘ ಕರೆದ ‘ಬ್ಯಾಡಗಿ ಬಂದ್‌’ಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಸುಮಾರು 20 ಸಾವಿರಕ್ಕೂ ಹೆಚ್ಚು ಜನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಮುಖಂಡ ಗಂಗಣ್ಣ ಎಲಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಲ ನಕ್ಷೆಯಂತೆ ಆಣೂರ ಕೆರೆಗೆ ನೀರು ತುಂಬಿಸುವ ಯೋಜನೆ ಜಾರಿಗೊಳಿಸದಿದ್ದರೇ ರೈತರ ಪ್ರತಿರೋಧ ಎದುರಿಸಬೇಕಾಗುತ್ತದೆ. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ಜಿಲ್ಲಾ ಮತ್ತು ತಾಲೂಕು ಘಟಕದ ಪದಾಧಿಕಾರಿಗಳು ಉತ್ತಮ ಸ್ಪಂದನೆ ನೀಡಿದ್ದಾರೆ ಎಂದರು.

Advertisement

‘ ಜೀವ ಬಿಟ್ಟೇವು ಜೀವಜಲ ಬಿಡಲ್ಲ’ ಎಂಬ ಘೋಷ ವಾಕ್ಯದೊಂದಿಗೆ ಎಸ್‌ ಜೆಜೆಎಂ ತಾಲೂಕು ಕ್ರೀಡಾಂಗಣದಿಂದ ಹೊರಡಲಿರುವ ಬೃಹತ್‌ ಪ್ರತಿಭಟನಾ ಮೆರವಣಿಗೆ, ಎಪಿಎಂಸಿ ಯಾರ್ಡ್‌, ಹಳೇ ಪುರಸಭೆ ಮುಖ್ಯರಸ್ತೆ, ಸ್ಟೇಶನ್‌
ರಸ್ತೆಗಳಲ್ಲಿ ಸಂಚರಿಸಿ ತಹಶೀಲ್ದಾರ್‌ ಕಚೇರಿ ತಲುಪಲಿದೆ. ಮೆರವಣಿಗೆಯಲ್ಲಿ ಹಲಗಿ, ಡೊಳ್ಳು ಕುಣಿತ, ಜಾಂಝ್ಮೇ ಳ ಹೆಜ್ಜೆ ಹಾಕಲಿದ್ದು, ನೂರಾರು ಟ್ರ್ಯಾಕ್ಟರ್‌ಗಳ ಮೆರವಣಿಗೆ ಕೂಡ ನಡೆಯಲಿದೆ ಎಂದರು.

ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ರೈತರ ಹೋರಾಟ ಬೆಂಬಲಿಸಿ ಜಿಲ್ಲೆಯಲ್ಲಿರುವ ಎಲ್ಲ
ಮಠಾಧಿಧೀಶರು ಸೇರಿದಂತೆ ಸಂಘ ಸಂಸ್ಥೆಗಳು, ರಾಜಕೀಯ ನಾಯಕರು, ಸಾರ್ವಜನಿಕರು ಪಕ್ಷಾತೀತವಾಗಿ ಬೆಂಬಲ ವ್ಯಕ್ತಪಡಿಸಿದ್ದು, ಹೋರಾಟ ಯಶಸ್ವಿಯತ್ತ ಸಾಗುತ್ತಿದೆ. ಮತ ಪಡೆದ ಬಳಿಕ ಅವರನ್ನೇ ಮರೆಯುವಂತಹ
ರಾಜಕಾರಣಿಗಳ ಹೊಣೆಗೇಡಿತನಕ್ಕೆ ನಾಳೆ ತಕ್ಕ ಉತ್ತರ ನೀಡಲಿದ್ದೇವೆ. ನೀರಿನ ಭವಣೆ ತಪ್ಪಿಸುವಂತೆ ಸರ್ಕಾರಗಳೆದುರು ಅಂಗಲಾಚುವಂತಹ ಸ್ಥಿತಿ ಬದಲಾಯಿಸಲು ನಿರ್ಧರಿಸಲಾಗಿದ್ದು, ಪ್ರಜಾಪ್ರಭುತ್ವಕ್ಕೆ ಹೊಸದೊಂದು ಭಾಷ್ಯ ಬರೆಯಲಿದೆ ಎಂದರು.

ಕಿರಣ ಗಡಿಗೋಳ ಮಾತನಾಡಿ, ಆಣೂರ ಕೆರೆ ತುಂಬಿಸಿದಲ್ಲಿ ತಾಲೂಕಿನ ಶೇ. 99ರಷ್ಟು ನೀರಿನ ಸಮಸ್ಯೆ ತಪ್ಪಲಿದೆ. ಈ ಕುರಿತು ಹಲವು ಬಾರಿ ಉಸ್ತುವಾರಿ ಸಚಿವರು, ಮಾಜಿ ಹಾಗೂ ಹಾಲಿ ಶಾಸಕರಿಗೆ ಯೋಜನೆಯ ಅನುಷ್ಠಾನಕ್ಕೆ ಮತ್ತು ಯೋಜನಾ ವೆಚ್ಚವನ್ನು ಬಜೆಟ್‌ನಲ್ಲಿ ಪ್ರಕಟಿಸುವಂತೆ ಮನವಿ ಸಲ್ಲಿಸಿದಾಗ್ಯೂ ಕೇವಲ ಕಾಗದಕ್ಕಷ್ಟೆ ಸೀಮಿತ ಮಾಡಲಾಗಿದೆ. ಜನಪ್ರತಿನಿಧಿಗಳಿಗೆ ಹೋರಾಟದ ಮೂಲಕ ಎಚ್ಚರಿಕೆ ಸಂದೇಶ ನೀಡಲಿದ್ದೇವೆ ಮತ್ತು ಯೋಜನೆ ಅನುಷ್ಠಾನಕ್ಕೆ ಬರುವವರೆಗೂ ನಿರಂತರವಾಗಿ ಪಕ್ಷಾತೀತವಾಗಿ ಸಾರ್ವಜನಿಕರೆಲ್ಲರೂ ಹೋರಾಡಲಿದ್ದೇವೆ
ಎಂದು ತಿಳಿಸಿದರು.

ಮೌನೇಶ ಕಮ್ಮಾರ ಮಾತನಾಡಿ, ಫೆ. 6ರಿಂದ 9ರ ವರೆಗೆ ಅಹೋರಾತ್ರಿ ಹೋರಾಟ ಮಾಡಿದ್ದೇವೆ. ಆದರೆ, ನಮ್ಮ ಹೋರಾಟಕ್ಕೆ ಸರ್ಕಾರ ಸೂಕ್ತ ಸ್ಪಂದನೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಬ್ಯಾಡಗಿ ಬಂದ್‌ಗೆ ಕರೆ ನೀಡಲಾಗಿದ್ದು, ವರ್ತಕರ ಸಂಘ, ನ್ಯಾಯವಾದಿಗಳ ಸಂಘ, ರಸ್ತೆ ಅಗಲೀರಣ ಸಮಿತಿ, ಎಪಿಎಂಸಿ, ಪುರಸಭೆ, ಭಜರಂಗದಳ, ಅಂಗವಿಕಲರ ಸಂಘ, ಗುಲಾಮೆ ಮುಸ್ತಫಾ ಸಮಿತಿ, ಅಂಜುಮನ್‌ ಸಮಿತಿ ಸೇರಿದಂತೆ ಪಕ್ಷಾತೀತವಾಗಿ ಎಲ್ಲ ಪಕ್ಷದ ಮುಖಂಡರು ಬೆಂಬಲ ನೀಡಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next