ಬ್ಯಾಡಗಿ: ದಾನಮ್ಮದೇವಿಯ ಎಂಟನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಸೇರಿದ್ದ ಸಾವಿರಾರು ಸಂಖ್ಯೆಯ ಮಹಿಳಾ ಭಕ್ತರ ಹರ್ಷೋದ್ಘಾರಗಳ ನಡುವೆ ರಥೋತ್ಸವ ಕಾರ್ಯಕ್ರಮವು ಬಹು ವಿಜೃಂಭಣೆಯಿಂದ ಮಂಗಳವಾರ ಸಂಜೆ ನೆರವೇರಿತು.
ಬಹುತೇಕ ಜಾತ್ರಾ ಮಹೋತ್ಸವಗಳಲ್ಲಿ ಪುರುಷರೇ ಎಲ್ಲ ಜವಾಬ್ದಾರಿ ಹೊತ್ತಿರುತ್ತಾರೆ. ಆದರೆ, ಸ್ಥಳೀಯ ದಾನಮ್ಮದೇವಿಯ ರಥೋತ್ಸವವನ್ನು ಮಹಿಳೆಯರೇ ಎಳೆಯುವುದು ಇಲ್ಲಿನ ವಿಶೇಷ. ಇದಕ್ಕಾಗಿ ಸುಂದರವಾಗಿ ಶೃಂಗಾರಗೊಂಡಿದ್ದ ರಥದಲ್ಲಿ ಗುಡ್ಡಾಪುರ ಕ್ಷೇತ್ರದ ದಾನಮ್ಮದೇವಿ ಉತ್ಸವಮೂರ್ತಿ ಕುರಿಸಿ ದೇವಸ್ಥಾನದ ಸುತ್ತ 5 ಪ್ರದಕ್ಷಿಣೆ ಹಾಕಿಸಲಾಯಿತು.
ಬೆಳ್ಳಿ ಪಲ್ಲಕ್ಕಿ: ರಥೋತ್ಸವದ ಮುಂಭಾಗದಲ್ಲಿಯೇ ದಾನಮ್ಮದೇವಿ ಇನ್ನೊಂದು ಮೂರ್ತಿ ಕುಳ್ಳರಿಸಿ ಬೆಳ್ಳಿ ಪಲ್ಲಕ್ಕಿ ರಥೋತ್ಸವದ ಜತೆಗೆ ಸಾಗಿತು. ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಭಕ್ತರು ದೇವಿ ದರ್ಶನ ಪಡೆದು ಪುನೀತರಾದರು. ಗುಡ್ಡಾಪುರ ಮಾದರಿ: ಮಹಾರಾಷ್ಟ್ರದ ಗುಡ್ಡಾಪುರದ ದಾನಮ್ಮದೇವಿ ರಥೋತ್ಸವಕ್ಕೂ ಇಲ್ಲಿನ ರಥೋತ್ಸವಕ್ಕೂ ಒಂದಕ್ಕೊಂದು ಸಾಮೀಪ್ಯವಿದೆ. ಗುಡ್ಡಾಪುರದ ಸನ್ನಿಧಿಯಲ್ಲಿ ನಡೆಯುವಂತೆ ಎಲ್ಲ ಧಾರ್ಮಿಕ ವಿಧಿವಿಧಾನಗಳನ್ನು ಇಲ್ಲಿಯೂ ನಡೆಸಿಕೊಂಡು ಬಂದಿದ್ದು, ಪ್ರತಿ ವರ್ಷವೂ ಛಟ್ಟಿ ಅಮವಾಸ್ಯೆ ದಿನದಿಂದು ರಥೋತ್ಸವ ನೆರವೇರುತ್ತಿದೆ. ಸುಮಾರು 20ಕ್ಕೂ ಹೆಚ್ಚು ಬೃಹತ್ ಗಾತ್ರದ ಪಾತ್ರೆಗಳಲ್ಲಿ ಪ್ರಸಾದ ಸಿದ್ಧಪಡಿಲಾಗಿತ್ತು. 10 ಸಾವಿರಕ್ಕೂ ಹೆಚ್ಚು ಜನರು ದೇವಿ ಪ್ರಸಾದ ಸವಿದರು.
ಜಾತ್ರಾ ಮಹೋತ್ಸವ ಸಂಪನ್ನ: ಸಕಲವಾದ್ಯವೈಭವಗಳೊಂದಿಗೆ ಅಲಂಕೃತಗೊಂಡ ದೇವಿ ರಥೋತ್ಸವ ಮುಕ್ತಾಯದ ಬಳಿಕ ಭಕ್ತರ ಹರ್ಷೋದ್ಘಾರಗಳ ನಡುವೆ ಏಳು ದಿನಗಳಿಂದ ನಡೆದುಕೊಂಡ ಬಂದಿದ್ದ ಜಾತ್ರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳು ಯಾವುದೇ ಅಡೆತಡೆಗಳಿಲ್ಲದೇ ಸಂಪನ್ನಗೊಂಡವು.
ಯಮುಂಬಾ ಕೋಚ್ ಭಾಗಿ: ಜಾತ್ರಾ ಮಹೋತ್ಸವದಲ್ಲಿ ಪ್ರೋ ಕಬಡ್ಡಿಯ ಯುಮುಂಬಾ ತಂಡದ ಕೋಚ್ ರವಿ ಶೆಟ್ಟಿ ಪಾಲ್ಗೊಂಡು ಬೆಳ್ಳಿ ಪಲ್ಲಕ್ಕಿಗೆ ಹೆಗಲು ಕೊಟ್ಟಿದ್ದು ಇಂದಿನ ಮತ್ತೂಂದು ವಿಶೇಷವಾಗಿತ್ತು.