ಹಾವೇರಿ: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಕೋಲ್ಡ್ ಸ್ಟೋರೆಜ್ ಗಳು ಭರ್ತಿಯಾದ ಕಾರಣ ಮೆಣಸಿನಕಾಯಿ ತುಂಬಿದ ಲಾರಿಗಳು ಸಾಲು ಕಟ್ಟಿ ನಿಂತ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಸೋಮವಾರ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ದಾಂಧಲೆ ನಡೆದಿತ್ತು. ದಿಢೀರ್ ಬೆಲೆ ಕುಸಿತವಾದ ಕಾರಣ ದಾಂಧಲೆ ಉಂಟಾಗಿತ್ತು. ಸೋಮವಾರ ಮೂರು ಲಕ್ಷಕ್ಕೂ ಹೆಚ್ಚು ಚೀಲ ಮೆಣಸಿನಕಾಯಿ ಮಾರುಕಟ್ಟೆಗೆ ಬಂದಿತ್ತು. ಇಂದು ಮತ್ತೊಮ್ಮೆ ಟೆಂಡರ್ ಪ್ರಕ್ರಿಯೆ ನಡೆಯಲಿದ್ದು, ಬಳಿಕ ದರ ನಿಗದಿಯಾಗಲಿದೆ.
ಬ್ಯಾಡಗಿಯಲ್ಲಿ ಮೆಣಸಿನಕಾಯಿ ಚೀಲಗಳಿಂದ ಕೋಲ್ಡ್ ಸ್ಟೋರೇಜ್ ಗಳು ತುಂಬಿದೆ. ಬ್ಯಾಡಗಿಯಲ್ಲಿರುವ 32 ಕೋಲ್ಡ್ ಸ್ಟೋರೇಜ್ ಗಳು ತುಂಬಿದ ಕಾರಣ ಕೋಲ್ಡ್ ಸ್ಟೋರೇಜ್ ಗಳ ಮುಂದೆ ರಸ್ತೆಯಲ್ಲಿ ಮೆಣಸಿನಕಾಯಿ ತುಂಬಿದ ಲಾರಿಗಳು ಸಾಲುಗಟ್ಟಿ ನಿಂತಿವೆ.
ಲಾರಿಗಳು ನಿಂತ ಹಿನ್ನೆಲೆ ಬೆಳ್ಳಂಬೆಳಗ್ಗೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸಾರ್ವಜನಿಕರು, ಲಾರಿ ಚಾಲಕರ ನಡುವೆ ಮಾತಿನ ಚಕಮಕಿ ನಡೆದಿದೆ. ಲಾರಿ ಚಾಲಕರನ್ನ ತರಾಟೆಗೆ ಜನರು ತೆಗೆದುಕೊಂಡರು.
ಪ್ರಕರಣ ದಾಖಲು: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ನಾಲ್ಕು ಪ್ರಕರಣ ದಾಖಲಾಗಿದೆ.
ಎಪಿಎಂಸಿ ಕಾರ್ಯದರ್ಶಿ, ಪೊಲೀಸ್ ಸಿಬ್ಬಂದಿ, ಮಾಧ್ಯಮದವರು ಹಾಗೂ ಅಗ್ನಿಶಾಮಕ ಇಲಾಖೆ ಸಿಬ್ಬಂದಿಯಿಂದ ನಾಲ್ಕು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಜೀವ ಬೆದರಿಕೆ, ಕೊಲೆಯತ್ನ, ಸರ್ಕಾರಿ ಆಸ್ತಿ ಹಾನಿ ಸೇರಿದಂತೆ ಹಲವು ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿದೆ.