Advertisement

ಮೈತ್ರಿ ಸರ್ಕಾರಕ್ಕೆ ತಕ್ಕ ಪಾಠ: ವಿರೂಪಾಕ್ಷಪ್ಪ

01:03 PM Jul 25, 2019 | Naveen |

ಬ್ಯಾಡಗಿ: ಬಿಜೆಪಿ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದ ಹಿನ್ನೆಲೆಯಲ್ಲಿ ಸ್ಥಳೀಯ ತಾಲೂಕು ಘಟಕದ ಬಿಜೆಪಿ ಕಾರ್ಯಕರ್ತರು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ನೇತೃತ್ವದಲ್ಲಿ ಪಟ್ಟಣದ ಹಳೇ ಪುರಸಭೆ ಎದುರು ವಿಜಯೋತ್ಸವ ಆಚರಿಸಿದರು.

Advertisement

ಬಳಿಕ ಮಾತನಾಡಿದ ಶಾಸಕ ವಿರೂಪಾಕ್ಷಪ್ಪ, ಕಳೆದ 14 ತಿಂಗಳಿಂದ ನಡೆಯುತ್ತಿದ್ದ ದುರಾಡಳಿತಕ್ಕೆ ತೆರೆ ಎಳೆದಂತಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಯಾರಿಗೂ ಶಾಶ್ವತವಲ್ಲ ಸರ್ಕಾರ ತಮ್ಮ ಸ್ವಂತ ಆಸ್ತಿ ಎಂಬಂತೆ ನಡೆದುಕೊಂಡ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರಕ್ಕೆ ಅದೇ ಪಕ್ಷದ ವಿಧಾನಸಭೆ ಸದಸ್ಯರು ತಕ್ಕ ಪಾಠ ಕಲಿಸಿದ್ದಾರೆ ಎಂದರು.

ಜೆಡಿಎಸ್‌ ಜೊತೆ ಕೈಜೋಡಿಸಬೇಕೋ ಬೇಡವೋ ಎಂಬುದರ ಬಗ್ಗೆ ಸೋತ ಅಭ್ಯರ್ಥಿಗಳ ಹಾಗೂ ಗೆದ್ದ ಶಾಸಕರ ಅಭಿಪ್ರಾಯವನ್ನು ಸೌಜನ್ಯಕ್ಕೂ ಪಡೆದುಕೊಳ್ಳದ ಕಾಂಗ್ರೆಸ್‌ ಹೈಕಮಾಂಡ್‌ ತಮ್ಮ ಪಕ್ಷದ ವಿರುದ್ಧವೇ ಗೆಲುವು ಸೋಲುಗಳನ್ನು ಕಂಡಿದ್ದ ಜೆಡಿಎಸ್‌ ಜೊತೆ ಕೈಜೋಡಿಸಿದ್ದು ಎಷ್ಟರಮಟ್ಟಿಗೆ ಸರಿ? ಫಲಿತಾಂಶ ಬಂದ ಕೆಲವೇ ಗಂಟೆಗಳಲ್ಲಿ ತನ್ನ ನಿರ್ಧಾರವನ್ನು ಪ್ರಕಟಿಸಿದ್ದರ ಪರಿಣಾಮ ಮೈತ್ರಿ ಸರ್ಕಾರ ಪೂರ್ಣಾವಧಿ ಮುಗಿಸಲು ಸಾಧ್ಯವಾಗಲಿಲ್ಲ ಎಂದ ಅವರು, ಅದಕ್ಕಾಗಿಯೇ ಬಿಜೆಪಿ ಇದೊಂದು ಅಪವಿತ್ರ ಮೈತ್ರಿ ಎಂದು ಬಿಂಬಿಸಲು ಕಾರಣ ಎಂದರು.

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಅಸಮರ್ಪಕ ಮಳೆಯಿಂದ ಕೃಷಿ ವೈಫಲ್ಯವಾಗಿದ್ದು, ಕಳೆದಾರು ವರ್ಷಗಳಿಂದ ಮೇಲೆ ಏಳದಂತಹ ಸ್ಥಿತಿ ತಲುಪಿದೆ. ಅಷ್ಟಕ್ಕೂ ಹಾವೇರಿ ಜಿಲ್ಲೆಯಲ್ಲಿ ಅತೀ ಹೆಚ್ಚು ರೈತರು ಆತ್ಮಹತ್ಯೆ ಶರಣಾಗಿದ್ದು, ನೋವಿನ ಸಂಗತಿ ಆಣೂರು ಕೆರೆಗೆ ನೀರು ತುಂಬಿಸುವ ಯೋಜನೆಗೆ ಅನುದಾನ ನೀಡದೇ ದಿನಕ್ಕೊಂದು ಸುಳ್ಳು ಹೇಳಿಕೊಂಡು ತಿರುಗಾಡಿದ್ದ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ ವರ್ತನೆಯನ್ನು ಜಿಲ್ಲೆಯ ಯಾವೊಬ್ಬ ರೈತನು ಮರೆಯಲು ಸಾಧ್ಯವಿಲ್ಲ, ವಿಧಾನಸೌಧದಲ್ಲೇ ಕುಳಿತು ಇವರು ನಡೆಸಿದ ಕಳ್ಳಾಟಗಳಿಗೆ ಇದೀಗ ಉತ್ತರ ಸಿಕ್ಕಿದೆ ಎಂದರು.

ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನ ಮಾತನಾಡಿ, ಸರ್ಕಾರ ಪತನಗೊಳ್ಳಲು ಕಾಂಗ್ರೆಸ್‌ ಶಾಸಕರ ರಾಜೀನಾಮೆ ಅಥವಾ ಬಿಜೆಪಿ ಆಪರೇಶನ್‌ ಕಮಲ ಎಂದೆಲ್ಲಾ ಕಾಂಗ್ರೆಸ್‌ ಹೈಕಮಾಂಡ್‌ ವ್ಯಾಖ್ಯಾಯಿನಿಸುತ್ತಿದೆ. ಶಾಸಕರ ನಿರ್ಧಾರಕ್ಕೆ ವಿರುದ್ಧವಾಗಿ ತಾನು ತೆಗೆದುಕೊಂಡ ನಿರ್ಣಯಕ್ಕೆ ಇಂದಿನ ಸ್ಥಿತಿ ಉದ್ಭವವಾಗಿದೆ. ಮೈತ್ರಿ ಸರ್ಕಾರ ರಚಿಸುವ ಸಮಯದಲ್ಲಿ ಅದಕ್ಕಿದ್ದ ಉತ್ಸಾಹವನ್ನು ಸರ್ಕಾರ ಬೀಳುವ ಸಂದರ್ಭದಲ್ಲಿ ಪ್ರದರ್ಶಿಸದೇ ಸುಮ್ಮನಿದ್ದುದೇ ಇದಕ್ಕೆ ಸಾಕ್ಷಿ ಎಂದರು.

Advertisement

ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಶಂಕ್ರಣ್ಣ ಮಾತನವರ, ಕಾರ್ಯದರ್ಶಿ ವಿರೇಂದ್ರ ಶೆಟ್ಟರ, ಪುರಸಭೆ ಸದಸ್ಯರಾದ ಬಿ.ಎಂ.ಛತ್ರದ, ಬಾಲಚಂದ್ರ ಪಾಟೀಲ, ಶಿವರಾಜ ಅಂಗಡಿ, ಮೆಹಬೂಬ್‌ ಅಗಸನಹಳ್ಳಿ, ಫಕ್ಕೀರಮ್ಮ ಛಲವಾದಿ, ಸುಭಾಸ್‌ ಮಾಳಗಿ, ಈರಣ್ಣ ಬಣಕಾರ, ಮಂಜಪ್ಪ ಬಾರ್ಕಿ, ಹನುಮಂತ ಮ್ಯಾಗೇರಿ, ಕಲಾವತಿ ಬಡಿಗೇರ, ಮುಖಂಡರಾದ ಮುರಿಗೆಪ್ಪ ಶೆಟ್ಟರ, ವಿ.ವಿ.ಹಿರೇಮಠ, ಚಂದ್ರಣ್ಣ ಮುಚ್ಚಟ್ಟಿ, ಜಯಣ್ಣ ಮಲ್ಲಿಗಾರ, ಚನ್ನವೀರಗೌಡ, ಜೆ.ಸಿ,ಚಿಲ್ಲೂರಮಠ, ಗಿರೀಶ್‌ ಇಂಡಿಮಠ, ಸುರೇಶ ಅಸಾದಿ ಹಾಗೂ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next