ಮೈಸೂರು: ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ವಿರುದಟಛಿ ಕಣಕ್ಕಿಳಿಯಲು ಸಜ್ಜಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಭಾನುವಾರ ರಹಸ್ಯ ಸಭೆ ನಡೆಸಿದರು.
ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸ್ಥಳೀಯ ಮುಖಂಡರೊಂದಿಗೆ, ಪ್ರಮುಖವಾಗಿ ಕ್ಷೇತ್ರದ ಟಿಕೆಟ್
ಆಕಾಂಕ್ಷಿಗಳಾದ ಕಾ.ಪು.ಸಿದ್ದಲಿಂಗಸ್ವಾಮಿ, ಸದಾನಂದ, ಗುರು ಸ್ವಾಮಿ, ಕಾ.ಪು.ಸಿದ್ದವೀರಪ್ಪ, ಎಸ್.ಡಿ.ಮಹೇಂದ್ರ, ಎಸ್.ಸಿ.ಅಶೋಕ್ ಮತ್ತಿತರರೊಂದಿಗೆ ಆಪ್ತ ಸಮಾಲೋಚನೆ ನಡೆಸಿದರು. ಬಳಿಕ ಚಾಮುಂಡಿಬೆಟ್ಟ, ಸುತ್ತೂರು ಮಠ, ವಾಟಾಳು ಮಠಗಳಿಗೆ ಭೇಟಿ ನೀಡಿ, ಆಶೀರ್ವಾದ ಪಡೆದರು.
ರೇವಣ ಸಿದ್ದಯ್ಯ ಭೇಟಿ: ಇದಕ್ಕೂ ಮುನ್ನ, ಊಟಿ ರಸ್ತೆಯಲ್ಲಿರುವ ಫಾರ್ಮ್ಹೌಸ್‌ನಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ರೇವಣ ಸಿದ್ದಯ್ಯ ಅವರನ್ನು ಭೇಟಿ ಮಾಡಿ,ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದರು. ಬಳಿಕ ಮಾತನಾಡಿ, ಬಿಜೆಪಿ ಅಭ್ಯರ್ಥಿಯಾಗಿ ಎರಡು ಬಾರಿ ವರುಣಾ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಿಂದ ರೇವಣ್ಣ ಸಿದ್ದಯ್ಯ ಸ್ಪರ್ಧಿಸಿದ್ದಾರೆ. ಹೀಗಾಗಿ, ಅವರ ಆಶೀರ್ವಾದ, ಸಲಹೆ, ಮಾರ್ಗದರ್ಶನ ಪಡೆಯಲು ಬಂದಿದ್ದೇನೆ. ಮೈಸೂರು, ಚಾ.ನಗರದಲ್ಲೇ ಉಳಿದುಕೊಂಡು ಚುನಾವಣೆ ಮುಗಿಯುವವರೆಗೂ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ. ಆ ಮೂಲಕ ಪಕ್ಷ ಸಂಘಟನೆ ಮಾಡುತ್ತೇನೆ ಎಂದರು.
ರೇವಣ್ಣ ಸಿದ್ದಯ್ಯ ಮಾತನಾಡಿ, ಬಿಜೆಪಿಗೆ ಸೇರುವಂತೆ ಕೆಲವು ಮುಖಂಡರು ಆಹ್ವಾನಿಸಿದ್ದು, ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ವಿಜಯೇಂದ್ರ ಭೇಟಿ ವೇಳೆ ಯಾವುದೇ ಚರ್ಚೆ ನಡೆಸಿಲ್ಲ ಎಂದರು.