Advertisement

Belagavi: ಸರಕಾರದ ಬೇಜವಾಬ್ದಾರಿತನದಿಂದ ಬಾಣಂತಿಯರ ಸಾವು: ವಿಜಯೇಂದ್ರ

12:08 PM Dec 09, 2024 | Team Udayavani |

ಬೆಳಗಾವಿ: ಬಾಣಂತಿಯರು ಮತ್ತು ಹಸುಗೂಸುಗಳ ಸಾವಿನಲ್ಲಿ ರಾಜ್ಯ ಸರಕಾರದ ಬೇಜವಾಬ್ದಾರಿತನ ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಬೆಳಗಾವಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕಿಡಿಕಾರಿದರು.

Advertisement

ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಸೋಮವಾರ (ಡಿ.09) ಭೇಟಿ ನೀಡಿದ ನಂತರ ಮಾತನಾಡಿದ ಅವರು, ಸತ್ಯಾಂಶ ತಿಳಿಯಲು ಇಲ್ಲಿ ಬಂದಿದ್ದೇವೆ. ಆಸ್ಪತ್ರೆ ಭೇಟಿಯಲ್ಲಿ ರಾಜಕಾರಣದ ಪ್ರಶ್ನೆ ಇಲ್ಲ. ಇವತ್ತು ಬಡವರಿಗೆ ಅನ್ಯಾಯವಾಗುತ್ತಿದೆ. ಬಾಣಂತಿಯರು, ಹಸುಗೂಸುಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ಸದನದಲ್ಲಿ ಚರ್ಚಿಸುತ್ತೇವೆ ಎಂದರು.

ಉಸ್ತುವಾರಿ ಸಚಿವರು, ಆರೋಗ್ಯ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು ಈ ಸಾವುಗಳ ಕುರಿತು ತಲೆ ಕೆಡಿಸಿಕೊಂಡಿಲ್ಲ. ಸರಕಾರ ಈಗಲಾದರೂ ಗಮನಿಸಬೇಕು ಎಂಬ ದೃಷ್ಟಿಯಿಂದ ಇದರ ಕುರಿತು ಗಮನ ಸೆಳೆಯುತ್ತೇವೆ ಎಂದರು.

ಸರ್ಕಾರವೇ ಕಾರಣ: ಛಲವಾದಿ

ಆಸ್ಪತ್ರೆಗಳು ಶವಾಗಾರವಾಗುವ ಪರಿಸ್ಥಿತಿ ಎದುರಾಗಿದೆ. ಬಾಣಂತಿಯರು ಮತ್ತು ಹಸುಗೂಸುಗಳ ಸಾವಿನ ವಿಷಯದಲ್ಲಿ ರಾಜ್ಯಾದ್ಯಂತ ಗೊಂದಲದ ವಾತಾವರಣ ಇದೆ. ಆಸ್ಪತ್ರೆಗಳು ಶವಾಗಾರವಾಗುವ ಪರಿಸ್ಥಿತಿಯನ್ನು ನಾವು ನೋಡುತ್ತಿದ್ದೇವೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

Advertisement

ಕಾಂಗ್ರೆಸ್ ಸರಕಾರವೇ ಇಂಥ ಪರಿಸ್ಥಿತಿಗೆ ಕಾರಣ ಎಂದು ಆರೋಪಿಸಿದ ಅವರು, ಕಾಂಗ್ರೆಸ್ಸಿಗರು ಭ್ರಷ್ಟಾಚಾರ ಮಾಡುವ ಕಡೆ ಗಮನ ಕೊಡುತ್ತಿದ್ದು, ಆಸ್ಪತ್ರೆಗಳ ಮೇಲೆ ನಿಯಂತ್ರಣ ಇಲ್ಲವಾಗಿದೆ. ಔಷಧಿ ಕೊಂಡುಕೊಳ್ಳುವಾಗ ಬ್ಲಾಕ್ ಮಾಡಿದ ಕಳಪೆ ಔಷಧಿಗಳನ್ನು ಖರೀದಿಸಿ ಬಳಸಿದ್ದರಿಂದ ಅನೇಕ ಕಡೆ ಇಂಥ ದಾರುಣ ಘಟನೆಗಳು ನಡೆದಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next