Advertisement

18ರೊಳಗೆ ನನ್ನ ಅಂತಿಮ ನಿರ್ಧಾರ ತಿಳಿಸುವೆ

07:43 AM Mar 12, 2019 | Team Udayavani |

ನಾಗಮಂಗಲ: ನಾನು ಚುನಾವಣಾ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನನ್ನ ನಿರ್ಧಾರವನ್ನು ಮಾರ್ಚ್‌ 18ರೊಳಗೆ ಅಧಿಕೃತವಾಗಿ ತಿಳಿಸುತ್ತೇನೆ ಎಂದು ಸುಮಲತಾ ಅಂಬರೀಶ್‌ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ರಾಜಕೀಯ ಕ್ಷೇತ್ರಕ್ಕೆ ಅಭಿಮಾನಿಗಳ ಒತ್ತಾಯಕ್ಕೋಸ್ಕರ ಬಂದಿದ್ದೇನೆ ಹೊರತು ನನ್ನ ವೈಯಕ್ತಿಕ ಲಾಭಕ್ಕೋಸ್ಕರ ಅಲ್ಲ. ಅಭಿಮಾನಿಗಳು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ನಾನು ಸ್ಪರ್ಧಿಸುವ ವಿಚಾರದಲ್ಲಿ ಹಿಂದೆ ಸರಿಯದಂತೆ ಒತ್ತಡ ಹಾಕುತ್ತಿದ್ದಾರೆ.

ಅವರ ಆಸೆಯಂತೆ ನಾನು ನಡೆಯುತ್ತೇನೆ. ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ನನ್ನ ಅಂತಿಮ ನಿರ್ಧಾರವನ್ನು ಮಾರ್ಚ್‌ 18ರೊಳಗೆ ಅಧಿಕೃತವಾಗಿ ತಿಳಿಸುತ್ತೇನೆ. ಮಂಡ್ಯ ಕ್ಷೇತ್ರದಿಂದ ಟಿಕೆಟ್‌ ಅಂತಿಮಗೊಳ್ಳುವವರೆಗೂ ನಾನು ಸಮಾಧಾನದಿಂದಿರುತ್ತೇನೆ.

ಏಕೆಂದರೆ ರಾಜಕೀಯದಲ್ಲಿ ಅಂತಿಮ ಕ್ಷಣದಲ್ಲಿ ಅಥವಾ ಯಾವ ಸಂದರ್ಭದಲ್ಲಿ ಏನು ಬೇಕಾದರೂ ಬದಲಾವಣೆ ಆಗಬಹುದು. ನಾನು ಯಾರ ವಿರುದ್ಧವೂ ಟೀಕೆ ಮಾಡುವುದಿಲ್ಲ. ಸಮಾಧಾನದಿಂದ ಕಾಂಗ್ರೆಸ್‌ ನಿರ್ಧಾರವನ್ನು ಕಾಯುತ್ತೇನೆ ಎಂದು ಸ್ಪಷ್ಟಪಡಿಸಿದರು.

ಸಮಾಧಾನದ ವರ್ತನೆ: ನನ್ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಅದ್ಯಾವುದಕ್ಕೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಅಭಿಮಾನಿಗಳು ಸಮಾಧಾನದಿಂದ ವರ್ತಿಸುತ್ತಿದ್ದಾರೆ. ನಾನು ಸ್ಪರ್ಧೆ ಮಾಡುವುದಾದರೆ ಮಂಡ್ಯದಿಂದ ಮಾತ್ರ. ನಾನು ಬಿಜೆಪಿಗೆ ಹೋಗಲ್ಲ,  ಅವೆಲ್ಲಾ ಕೇವಲ ಗಾಳಿ ಸುದ್ದಿ, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮನ್ನಣೆ ನೀಡಬೇಡಿ ಎಂದರು. 

Advertisement

ದರ್ಶನ್‌ ಬೆಂಬಲ: ಸಿನಿಮಾ ರಂಗದ ಹಲವರು ನನಗೆ ಬೆಂಬಲವಾಗಿ ನಿಂತಿದ್ದಾರೆ. ದರ್ಶನ್‌ ನನ್ನ ಹಿರಿಯ ಮಗನಿದ್ದಂತೆ, ಅವರು ಎಂದಿಗೂ ನನ್ನ ಬೆಂಬಲಕ್ಕೆ ನಿಲ್ಲುತ್ತಾರೆ. ಅಂಬರೀಶ್‌ ಬದುಕಿದ್ದಾಗ ಯಾವ ರೀತಿ ನಮ್ಮ ಕುಟುಂಬದ ಜೊತೆ ಪ್ರೀತಿ ಹೊಂದಿದ್ದರೋ ಇಂದಿಗೂ ಅದೇ ರೀತಿ ಇದ್ದಾರೆ. ಅವರು ಇಂದಿಗೂ ನನ್ನನ್ನು ಮದರ್‌ ಇಂಡಿಯಾ ಎಂದೇ ಕರೆಯುತ್ತಾರೆ. ಅದರಲ್ಲಿ ವಿಶೇಷತೆ ಏನು ಇಲ್ಲ, ನನಗೆ ಆದೇಶಿಸಿ ಸಾಕು, ನಾನು ನಿಮ್ಮ ಆಜ್ಞೆ ಪರಿಪಾಲಿಸುತ್ತೇನೆ ಎಂದು ಹೇಳುತ್ತಾರೆ ಎಂದರು.

ಸಾಮಾಜಿಕ ಜಾಲತಾಣ: ರಾಜಕೀಯವಾಗಿ ಸಾಮಾಜಿಕ ಜಾಲತಾಣವನ್ನು ತೆರೆದಿರುವ ಕುರಿತು ಪ್ರತಿಕ್ರಿಯಿಸಿ, ನಾನು ವೈಯಕ್ತಿಕವಾಗಿ ಸುಮಾರು ವರ್ಷಗಳಿಂದ ಸಾಮಾಜಿಕ ಜಾಲತಾಣ ಉಪಯೋಗಿಸುತ್ತಿದ್ದೇನೆ. ಈಗ ರಾಜಕೀಯವಾಗಿ ಮತದಾರರಿಂದ ಅನಿಸಿಕೆ ತಿಳಿಯಲು ಹಾಗೂ ನೇರವಾಗಿ ಕಾರ್ಯಕರ್ತರ ಜೊತೆ ಸಂಪರ್ಕದಲ್ಲಿರುವ ಉದ್ದೇಶದಿಂದ ರಾಜಕೀಯವಾದ ಸಾಮಾಜಿಕ ಜಾಲತಾಣ ತೆರೆದಿದ್ದೇನೆ ಎಂದರು.

ಸಿಎಂ ಕ್ಷಮೆ ಯಾಚಿಸಿರುವುದು ಸಂತೋಷ: ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಸುಮಲತಾರ ಚುನಾವಣೆ ಸ್ಪರ್ಧೆ ಕುರಿತು ಕುಹಕವಾಡಿರುವುದಕ್ಕೆ ರಾಜ್ಯಾದ್ಯಂತ ವ್ಯಾಪಕ ಚರ್ಚೆಯಾಗುತ್ತಿದ್ದಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರೇವಣ್ಣ ಪರವಾಗಿ ಕ್ಷಮೆಯಾಚಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿ ಸಿಎಂ ಕ್ಷಮೆ ಕೇಳಿರುವುದು ಸಂತೋಷ, ಆದರೆ ಆ ವಿಷಯ ಕುರಿತು ಬೇರೆ ಏನೂ ಪ್ರತಿಕ್ರಿಯಿಸುವುದಿಲ್ಲ ಎಂದರು.

ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಅಂಬರೀಶ್‌ ಅಭಿಮಾನಿಗಳ ಜೊತೆ ತಾಲೂಕಿನ ಕದಬಹಳ್ಳಿಯ ಕಾವೇಟಿ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸನ್ನ, ಮುಖಂಡ ಹೆಚ್‌.ಟಿ.ಕೃಷ್ಣೇಗೌಡ, ಎನ್‌.ಜೆ.ರಾಜೇಶ್‌, ದಿನೇಶ್‌, ತುರುಬನಹಳ್ಳಿ ರಾಜೇಗೌಡ, ಮರಿಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next