Advertisement

ರೈತರ ಆದಾಯ ದ್ವಿಗುಣಗೊಳಿಸಲು ಕಾಯ್ದೆಗಳಿಗೆ ತಿದ್ದುಪಡಿ ಮಾಡಲಾಗಿದೆ: ಬಿ.ವೈ.ರಾಘವೇಂದ್ರ

10:39 AM Dec 08, 2020 | keerthan |

ಶಿವಮೊಗ್ಗ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತ ಪರವಾದ ಕಾಯ್ದೆಗಳನ್ನು ಜಾರಿಗೆ ತಂದಿದೆ. ರೈತರ ಆದಾಯ ದ್ವಿಗುಣಗೊಳಿಸುವ ಸಲುವಾಗಿ ಕಾಯ್ದೆಗಳಿಗೆ ತಿದ್ದುಪಡಿ ಮಾಡಿದೆ. ರೈತರು ಇದನ್ನು ಅರ್ಥ‌ ಮಾಡಿಕೊಳ್ಳಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

Advertisement

ನಗರದಲ್ಲಿ ಮಾತನಾಡಿದ ಅವರು, ಈಗಾಗಲೇ ಕಳೆದ ಒಂದು ತಿಂಗಳಿಂದ ರೈತ ಸಂಘಟನೆಗಳು ಹೋರಾಟ ಮಾಡುತ್ತಿವೆ. ಇವತ್ತು ಕೂಡ ಕೇಂದ್ರದ ವಿರುದ್ಧ ಭಾರತ್ ಬಂದ್ ಅನ್ನು ರೈತರು ಮಾಡುತ್ತಿದ್ದಾರೆ. ಆದರೆ ಲೋಕಸಭೆಯಲ್ಲಿ ಸಾಕಷ್ಟು ಚರ್ಚೆ ಮಾಡಿಯೇ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ರೈತಪರ ಚಿಂತನೆ ಮಾಡುವ ಹಲವರು ಈಗಾಗಲೇ ಕಾಯ್ದೆಯನ್ನು ಸ್ವಾಗತಿಸಿದ್ದಾರೆ. ಇದರ ಪರಿಣಾಮ ಈಗಾಗಲೇ ಮಾರುಕಟ್ಟೆ ಹಾಗೂ ರೈತರ ಜೀವನದಲ್ಲಿ ಕಾಣುತ್ತಿದ್ದೇವೆ ಎಂದರು.

ಎಪಿಎಂಸಿ ಕಾಯ್ದೆಯ ಮೂಲಕ ಎಪಿಎಂಸಿ ಒಳಗೆ ಹಾಗೂ ಹೊರಗೆ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ, ಕೆಲವು ದಲ್ಲಾಳಿಗಳು ರಾಜಕೀಯ ದುರುದ್ದೇಶದಿಂದ ರೈತರ ಮುಖವಾಡ ಧರಿಸಿ ಪ್ರತಿಭಟನೆಗೆ ಕುಮ್ಮಕ್ಕು ನೀಡಿದ್ದಾರೆ. ರೈತರಿಂದ ಹೋರಾಟ ಮಾಡಿಸಿ, ಕೇಂದ್ರ ಸರ್ಕಾರದ ವಿರುದ್ಧ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ:ಭಾರತ್ ಬಂದ್: ಕಲಬುರಗಿಯಲ್ಲಿ ರೈತ ಸಂಘಟನೆಗಳ ಪ್ರತಿಭಟನೆ, ಸಾರಿಗೆ ಬಸ್ ಸಂಚಾರ ಸ್ಥಗಿತ

ಕೇಂದ್ರ ಸರ್ಕಾರ 2022ರೊಳಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶ ಹೊಂದಿದೆ. ಯೂರಿಯಾ ಗೊಬ್ಬರ ನಿರಂತರ ಪೂರೈಕೆ, ಕಿಸಾನ್ ಕಾರ್ಡ್, ಸಾಯಿಲ್ ಹೆಲ್ತ್ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ಜೊತೆಗೆ ಫಸಲ್ ಭೀಮಾ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ ಗಳನ್ನು ಜಾರಿಗೊಳಿಸಲಾಗಿದೆ ಎಂದರು.

Advertisement

2014 ರಲ್ಲಿ ಆಹಾರ ಧಾನ್ಯಗಳ ಉತ್ಪಾದನಾ ಪ್ರಮಾಣ 250 ಮಿಲಿಯನ್ ಟನ್ ಇತ್ತು. ಅದು 2020 ರ ವೇಳೆಗೆ 291 ಮಿಲಿಯನ್‌ ಟನ್ ಗೆ ಏರಿಕೆಯಾಗಿದೆ. ಇದೆಲ್ಲದರ ನಡುವೆಯೂ ಕೇಂದ್ರ ಸರ್ಕಾರದ ವಿರುದ್ದ ರೈತರನ್ನು ಎತ್ತಿಕಟ್ಟಿ ತಪ್ಪು ದಾರಿಗೆ ಎಳೆಯಲಾಗುತ್ತಿದೆ. ಮಸೂದೆಗಳ ತಿದ್ದುಪಡಿ ಆದ ನಂತರದಲ್ಲೇ ಕನಿಷ್ಟ ಬೆಂಬಲ ಬೆಲೆಯಡಿ ಕೇಂದ್ರ ಸರ್ಕಾರವೇ ಖರೀದಿ ಮಾಡಿದೆ. ಆದರೂ ಸಹ ನೂತನ ಕಾಯ್ದೆಯಿಂದ ಬೆಳೆಗಳಿಗೆ ಕನಿಷ್ಟ ಬೆಲೆ ರದ್ದಾಗಲಿದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ವಿರೋಧ ಪಕ್ಷಗಳು ಎಲ್ಲಾ ರೀತಿಯಲ್ಲಿಯೂ ಸೋತಿವೆ. ಹೀಗಾಗಿಯೇ ರೈತರ ಮೂಲಕ ಪ್ರತಿಭಟನೆ ಮಾಡಿಸುತ್ತಿದ್ದಾರೆ. ರೈತರು ಇದನ್ನು ಅರ್ಥ‌ ಮಾಡಿಕೊಳ್ಳಬೇಕು ಎಂದು ಸಂಸದ ರಾಘವೇಂದ್ರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next