ಬೆಂಗಳೂರು: ಮಾಜಿ ಸಚಿವ ಕುಮಾರ್ ಬಂಗಾರಪ್ಪ ಶುಕ್ರವಾರ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತ ವಿದಾಯ ಹೇಳಿದ್ದು, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಸಂಬಂಧ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ವಿರುದ್ಧ ವಾಗಾœಳಿ ನಡೆಸಿ ತಾವು ಪಕ್ಷ ತ್ಯಜಿಸಲು ಅವರ ವರ್ತನೆಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
1996 ರಿಂದ ಎರಡು ದಶಕಗಳಿಗೂ ಹೆಚ್ಚು ಕಾಲ ಕಾಂಗ್ರೆಸ್‌ನಲ್ಲಿ ಕೆಲಸ ಮಾಡಿದ್ದೇನೆ. ಪಕ್ಷವನ್ನು ಬಿಟ್ಟು ಹೋಗಲು ನೋವಾಗುತ್ತಿದೆ. ಆದರೆ, ರಾಜ್ಯದಲ್ಲಿ ಉತ್ತಮ ಹಾಗೂ ಭ್ರಷ್ಟಾಚಾರ ಮುಕ್ತ ಸರ್ಕಾರ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಈ ನಿರ್ಧಾರ ಅನಿವಾರ್ಯವಾಗಿದೆ ಎಂದು ಹೇಳಿದ ಅವರು, “ನನ್ನ ಕೈ ನಾನೇ ಕತ್ತರಿಸಿಕೊಳ್ಳುತ್ತಿದ್ದೇನೆ, ಯಾಕೆಂದರೆ ಅದು ನನ್ನ ತುತ್ತು ಕಸಿದುಕೊಂಡಿದೆ, ನಾನು ಯಾವುದೇ ಪಕ್ಷಕ್ಕೆ ಸೇರಿದರೂ ಬದ್ಧತೆ ಬದಲಾಗುವುದಿಲ್ಲ’ ಎಂದು ಮಾರ್ಮಿಕವಾಗಿ ನುಡಿದರು.
ರಾಜ್ಯ ವಿಧಾನಸಭೆಗೆ ಅವಧಿಗೂ ಮುನ್ನವೇ ಚುನಾವಣೆ ನಡೆಯುವ ಸಾಧ್ಯತೆಯಿದ್ದು ಡಿಸೆಂಬರ್‌ನಲ್ಲೇ ಚುನಾವಣೆ ಎದುರಾಗಲಿದೆ ಎಂದು ಭವಿಷ್ಯ ನುಡಿದರು.ಪತ್ರಿಕಾಗೋಷ್ಠಿಯುದ್ದಕ್ಕೂ ಕಾಗೋಡು ತಿಮ್ಮಪ್ಪ ಅವರ ವಿರುದ್ಧ ಹರಿಹಾಯ್ದ ಕುಮಾರ್ ಬಂಗಾರಪ್ಪ, ಶಿವಮೊಗ್ಗ ಜಿಲ್ಲೆಯಲ್ಲಿ ಕಾಗೋಡು ತಿಮ್ಮಪ್ಪ ಅವರು ಕಾಂಗ್ರೆಸ ಪಕ್ಷವನ್ನು ನಿರ್ಣಾಮವಾಗಲು ಏನು ಬೇಕೋ ಅದೆಲ್ಲವನ್ನೂ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿನ ಪಕ್ಷದ ಬೆಳವಣಿಗೆಯ ಬಗ್ಗೆ ರಾಜ್ಯಾಧ್ಯಕ್ಷ ಪರಮೇಶ್ವರ್ ಅವರಿಗೆ ಹಲವು ಬಾರಿ ಚರ್ಚಿಸಿದ್ದೇನೆ. ಅವರು ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಹೇಳಿದರು.
ಆರೇಳು ವರ್ಷವಾದರೂ ಜಿಲ್ಲಾಧ್ಯಕ್ಷರು ಮುಂದುವರೆಯುತ್ತಾರೆ. ಕೆಲವು ಬಾರಿ ರಾತ್ರೋ ರಾತ್ರಿ ಪದಾಧಿಕಾರಿಗಳು ಬದಲಾಗುತ್ತಾರೆ. ಯಾವುದಕ್ಕೂ ಯಾರಿಂದಲೂ ಸ್ಪಷ್ಟ ಮಾಹಿತಿ ಇಲ್ಲ. ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರಕ್ಕೆ ಸಂಬಂಧ ಇಲ್ಲದಂತಾಗಿದೆ. ಮುಖ್ಯಮಂತ್ರಿಗಳು ಪಕ್ಷದ ಬೆಳವಣಿಗೆಯ ಬಗ್ಗೆ ಯಾವತ್ತೂ ತಲೆ ಕೆಡಿಸಕೊಳ್ಳುತ್ತಿಲ್ಲ. ಪಕ್ಷದ ಹೀನಾಯ ಸ್ಥಿತಿಯ ಬಗ್ಗೆ ಮಾತನಾಡುವ ಹಿರಿಯ ನಾಯಕರಿಗೆ ನೋಟಿಸ್ ಕೊಟ್ಟು ಅವರಿಗೆ ಅವಮಾನ ಮಾಡುವ ಪರಿಸ್ಥಿತಿ ತಲೆದೋರಿದೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಹೇಳಿಕೆಯನ್ನು ಪುನರುಚ್ಚರಿಸಿದ ಕುಮಾರ್ ಬಂಗಾರಪ್ಪ, ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರು ಬೇಕಿಲ್ಲ. ಏಜೆಂಟರು ಮತ್ತು ಡೀಲರ್ ಬೇಕಾಗಿದ್ದಾರೆ. ಹೀಗಾಗಿಯೇ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಹೇಳಿದರು. ತಾವು ಹಿಂದೆ ಬಿಜೆಪಿ ಹಾಗೂ ಪ್ರಧಾನಿ ಮೋದಿ ಮತ್ತು ಯಡಿಯೂರಪ್ಪ ಅವರ ವಿರುದ್ಧ ಸಾಕಷ್ಟು ಮಾತನಾಡಿದ್ದೇನೆ. ಅದೆಲ್ಲವನ್ನು ಈಗ ವಾಪಸ್ ಪಡೆಯುತ್ತಿದ್ದು, ಪ್ರಧಾನಿ ನಾಯಕತ್ವ ರಾಜ್ಯದಲ್ಲಿ ಯಡಿಯೂರಪ್ಪ ಅವರ ನಾಯಕತ್ವಕ್ಕೆ ಬೆಂಬಲ ನೀಡಲು ಮಾರ್ಚ್ 9 ರಂದು ಬಿಜೆಪಿ ಸೇರುವುದಾಗಿ ಅವರು ತಿಳಿಸಿದರು.
ಇದೇ ವೇಳೆ, ತಮ್ಮ ಸಹೋದರ ಮಧು ಬಂಗಾರಪ್ಪ ಅವರ ಬಗ್ಗೆಯೂ ಪರೋಕ್ಷವಾಗಿ ವಾಗ್ಧಾಳಿ ನಡೆಸಿದ ಕುಮಾರ್ ಬಂಗಾರಪ್ಪ, ತಂದೆ ತಾಯಿಯ ಸಾವನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡರೆ, ಅದು ಕ್ಷೇತ್ರದ ಹಾಗೂ ರಾಜ್ಯದ ಜನರಿಗೆ ಮೋಸ ಮಾಡಿದಂತಾಗುತ್ತದೆ. ತಂದೆ ತಾಯಿ ನಮಗೆ ದೇವರ ಸಮಾನ ಹಾಗಂತ ಅವರ ಹೆಸರಿನಲ್ಲಿ ಕಣ್ಣೀರು ಸುರಿಸಿ, ಭಾವನಾತ್ಮಕ ರಾಜಕಾರಣ ಮಾಡುವುದು ಬಹಳ ದಿನ ನಡೆಯುವುದಿಲ್ಲ ಎಂದು ಹೇಳಿದರು.
ತಾವು ಯಾವುದೇ ಷರತ್ತುಗಳಿಲ್ಲದೇ ಬಿಜೆಪಿ ಸೇರುತ್ತಿದ್ದು, ಬಿಜೆಪಿ ರಾಜ್ಯ ನಾಯಕರು ಯಾವುದೇ ಕೆಲಸ ಸೂಚಿಸಿದರೂ, ಕಾರ್ಯಕರ್ತನಾಗಿ ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ ಹೇಳಿದರು.