Advertisement

ಉಪಚುನಾವಣೆ: ಸಿದ್ಧ-ರಾಮ ಸಮರ

06:00 AM Oct 23, 2018 | Team Udayavani |

ಬಳ್ಳಾರಿ/ಬೆಂಗಳೂರು ರಾಜ್ಯದಲ್ಲಿನ ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಬಿಸಿ ಪಡೆದುಕೊಂಡಿದ್ದು, ಬಳ್ಳಾರಿ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿ ನಾಯಕ ಬಿ. ಶ್ರೀರಾಮುಲು ನಡುವೆ ಮಾತಿನ ಕಾಳಗವೇ ನಡೆದಿದೆ. ರಾಮುಲುಗೆ 371 ಜೆ ಅಂದರೆ ಏನು ಅಂತಲೇ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರೆ, ವಿಧಾನಸಭೆ ಮತ್ತು ಲೋಕಸಭೆಯಲ್ಲಿ ನಾನು ಮಾತನಾಡುವಾಗ ನೀವು ನಿದ್ದೆಯಲ್ಲಿ ಇದ್ದೀರಿ ಅನ್ನಿಸುತ್ತಿದೆ ಎಂದು ರಾಮುಲು ತಿರುಗೇಟು ನೀಡಿದ್ದಾರೆ. 

Advertisement

ಜಿಲ್ಲೆಯ ಕೆಲವೆಡೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ, ಶ್ರೀರಾಮುಲುಗೆ 371ಜೆ ಅಂದರೆ ಏನು ಅಂತಲೇ ಗೊತ್ತಿಲ್ಲ, ಶ್ರೀರಾಮುಲುಗೆ ಗೊತ್ತಿರೋದು 326, 307, 323, 420 ಮಾತ್ರ. ಇಂಥವರಿಗೆ ಮತ ನೀಡಿದರೆ ಕ್ಷೇತ್ರದ ಅಭಿವೃದ್ಧಿ ಸಾಧ್ಯವೇ? ಈ ಹಿಂದೆಯೇ ಯಡಿಯೂರಪ್ಪನವರ ಜತೆ ಸೇರಿ ರಾಜ್ಯವನ್ನು ಲೂಟಿ ಮಾಡಿದ್ದಾರೆ. ಇಂಥವರನ್ನು ಅಧಿಕಾರದಿಂದ ದೂರವಿಡಿ,ಎಂದು ಆರೋಪ ಮಾಡಿದ್ದಾರೆ.

ರಾಮುಲುಗೆ ಕನ್ನಡ ಗೊತ್ತಿಲ್ಲ 
ಉಗ್ರಪ್ಪ ವಾಲ್ಮೀಕಿ ಸಮುದಾಯದ ದೊಡ್ಡ ನಾಯಕರು. ನೂರಕ್ಕೆ ನೂರು ಕನ್ನಡ ನಾಡಿನವರು. ಅವರಿಗೆ ಕನ್ನಡ ನಾಡು-ನುಡಿ ಬಗ್ಗೆ ಸ್ಪಷ್ಟ ಜ್ಞಾನವಿದೆ. ಆದರೆ ಶ್ರೀರಾಮುಲು ಅವರಿಗೆ ಸರಿಯಾಗಿ ಕನ್ನಡ ಭಾಷೆಯ ಜ್ಞಾನ ಇಲ್ಲ. ಮಾತನಾಡಲೂ ಬರುವುದಿಲ್ಲ. ಸ್ಪಷ್ಟ ಕನ್ನಡ ಮಾತನಾಡುವ ಉಗ್ರಪ್ಪ ಅವರನ್ನು ಆಯ್ಕೆ ಮಾಡಿ ಕಳುಹಿಸಿದರೆ ಲೋಕಸಭೆಯಲ್ಲಿ ರಾಜ್ಯದ ಸಮಸ್ಯೆ ಕುರಿತು ಧ್ವನಿ ಎತ್ತುತ್ತಾರೆ. ಶ್ರೀರಾಮುಲು ಇದುವರೆಗೆ ಲೋಕಸಭೆಯಲ್ಲಿ ಜಿಲ್ಲೆಯ ಅಭಿವೃದ್ಧಿಗಾಗಿ ಯಾವತ್ತೂ ಧ್ವನಿ ಎತ್ತಲ್ಲ. ಇದಕ್ಕೆ ಅವರ ಸಹೋದರಿ ಶಾಂತಾ ಸಹ ಹೊರತಾಗಿಲ್ಲ ಎಂದರು.

ಶ್ರೀರಾಮುಲು ಗಡ್ಡ ಬಿಟ್ಟು ನಾಟಕವಾಡುವುದನ್ನು ಕೈ ಬಿಡಬೇಕು. ಯಾವತ್ತಿಗೂ ಸಂಪೂರ್ಣ ಅವಧಿ ಪೂರೈಸದ ಶ್ರೀರಾಮುಲು ಎಂದಾದರೂ ಸಂಸತ್‌ ಅಧಿವೇಶನದಲ್ಲಿ ಬಾಯಿ ತೆರೆದಿದ್ದಾರೆಯೇ? ಯಾವ ಪುರುಷಾರ್ಥಕ್ಕಾಗಿ ಜೆ.ಶಾಂತಾ ಅವರನ್ನು ಆಯ್ಕೆ ಮಾಡಬೇಕಿದೆ. ಬಳ್ಳಾರಿಯಲ್ಲಿ ಗೂಂಡಾಗಳನ್ನು ಬಿಟ್ಟು ತಮ್ಮನ್ನು ಹೆದರಿಸಲು ಬಂದವರು ಸಾಮಾನ್ಯರನ್ನು ಬಿಟ್ಟಾರೆಯೇ ಎಂದರು.

ರಾಮುಲು ತಿರುಗೇಟು 
ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಾತನಾಡಿಯೇ ಇಲ್ಲ ಎಂಬ ಸಿದ್ದರಾಮಯ್ಯ ಅವರ ಆರೋಪಕ್ಕೆ ತಿರುಗೇಟು ಕೊಟ್ಟಿರುವ ಶ್ರೀರಾಮುಲು, ಸಂಸದನಾದ ಬಳಿಕ ಸಂಸತ್‌ನಲ್ಲಿ ಒಟ್ಟು 572 ಪ್ರಶ್ನೆ ಕೇಳಿದ್ದೇನೆ. 22 ಚರ್ಚೆಯಲ್ಲಿ ಭಾಗವಹಿಸಿದ್ದೇನೆ. ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿಯವರು, ಕೇವಲ 12 ಚರ್ಚೆಯಲ್ಲಿ ಭಾಗವಹಿಸಿ ಒಂದು ಪ್ರಶ್ನೆಯನ್ನೂ ಕೇಳಿಲ್ಲ. ಸಿದ್ದರಾಮಯ್ಯನವರು ಇದನ್ನೆಲ್ಲ ಸರಿಯಾಗಿ ತಿಳಿದುಕೊಂಡು ಮಾತನಾಡಬೇಕು. ಮಾತನಾಡೋ ಚಟಕ್ಕೆ ಏನೇನೋ ಮಾತನಾಡಬಾರದು. ಸಂಸದರ ಅನುದಾನ ಬಳಕೆಯಲ್ಲಿ ರಾಜ್ಯದಲ್ಲಿ ನಾನೇ ಪ್ರಥಮ ಸ್ಥಾನದಲ್ಲಿದ್ದು, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಎರಡನೇ ಸ್ಥಾನದಲ್ಲಿದ್ದಾರೆ. ಇದೆಲ್ಲ ಸಿದ್ದರಾಮಯ್ಯನವರಿಗೆ ಗೊತ್ತೇ ಇಲ್ಲ ಎಂದು ವ್ಯಂಗ್ಯವಾಡಿದರು.

Advertisement

ಇದಷ್ಟೇ ಅಲ್ಲ, ನಾನು ಬೇಟೆಗಾರ ಸಂಸ್ಕೃತಿಯುಳ್ಳ ವಾಲ್ಮೀಕಿ (ನಾಯಕ) ಸಮುದಾಯಕ್ಕೆ ಸೇರಿದ್ದರಿಂದ ಸಿದ್ದರಾಮಯ್ಯನವರು ಹಗರಿಬೊಮ್ಮನಹಳ್ಳಿಯಲ್ಲಿ  ನನ್ನ ಬಗ್ಗೆ ವ್ಯಂಗ್ಯದ ಮಾತನ್ನಾಡಿದ್ದಾರೆ. ಇದೇ ಕಾರಣಕ್ಕಾಗಿಯೇ 420 ಎಂದೆಲ್ಲ ಕರೆದಿದಿದ್ದಾರೆ ಎಂದು ರಾಮುಲು ಹೇಳಿದ್ದಾರೆ.

ಯಾರೇ ಬಂದರೂ ಜನ ನನ್ನ ಕೈ ಬಿಡಲ್ಲ:
ಬಳ್ಳಾರಿ ಲೋಕಸಭೆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಆದರೂ, ಚುನಾವಣೆ ಅನಿವಾರ್ಯವಾಗಿದ್ದು, ಜಿಲ್ಲೆಯ ಮತದಾರರು ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಅವರನ್ನು ಕೈ ಬಿಡಲ್ಲ. ಕಾಂಗ್ರೆಸ್‌ ಅಭ್ಯರ್ಥಿ ಸೋಲಿನ ಭೀತಿಯಿಂದ ಜಿಲ್ಲೆಯಲ್ಲಿ 10 ಸಂಸದರು, 10 ಸಚಿವರು, 60 ಶಾಸಕರು ಬೀಡುಬಿಟ್ಟಿದ್ದಾರೆ. ಯಾರು ಬಂದರೂ, ಜಿಲ್ಲೆಯ ಜನರು ನನ್ನನ್ನು ಕೈ ಬಿಡಲ್ಲ ಎಂಬ ವಿಶ್ವಾಸವಿದೆ ಎಂದರು.

ಮಂಡ್ಯ ಅಸಮಾಧಾನ: ಸಿದ್ದುಗೆ ಜವಾಬ್ದಾರಿ
ಮಂಡ್ಯ ಲೋಕಸಭೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಕಣಕ್ಕಿಳಿಸದ ಕಾರಣ ಅಸಮಾಧಾನಗೊಂಡಿರುವ ಮಾಜಿ ಶಾಸಕರಾದ ಚೆಲುವರಾಯಸ್ವಾಮಿ, ರಮೇಶ್‌ ಬಂಡಿಸಿದ್ದೇಗೌಡರ ಮನವೊಲಿಸುವ ಹೊಣೆಗಾರಿಕೆಯನ್ನು ಸಮನ್ವಯ ಸಮಿತಿ ಆಧ್ಯಕ್ಷ ಸಿದ್ದರಾಮಯ್ಯ ಅವರಿಗೆ ವಹಿಸಲಾಗಿದೆ. 

ಇವರಿಬ್ಬರೂ ಪ್ರಚಾರಕ್ಕೆ ಬರುತ್ತಿಲ್ಲ ಎಂದು ಹೇಳಲಾಗುತ್ತಿದ್ದು, ಮಂಡ್ಯ ಉಸ್ತುವಾರಿ ಕೆ.ಜೆ.ಜಾರ್ಜ್‌ ಅವರ ಮನವೊಲಿಕೆಗೂ ಬಗ್ಗಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರಿಗೇ ಜವಾಬ್ದಾರಿ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಅಥವಾ ಬುಧವಾರ ಮಂಡ್ಯ ಕ್ಷೇತ್ರದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರ ಜಂಟಿ ಸಭೆಯನ್ನು ಸಿದ್ದರಾಮಯ್ಯ ಅವರು ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ಈ ಕುರಿತು ಉದಯವಾಣಿ ಜತೆ ಮಾತನಾಡಿದ ಚೆಲುವರಾಯಸ್ವಾಮಿ, ನಮಗೆ ಯಾವುದೇ ರೀತಿಯ ಅಸಮಾಧಾನ ಇಲ್ಲ. ಮಂಡ್ಯ ಹಾಗೂ ರಾಮನಗರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯೇ ಇಲ್ಲದಿರುವಾಗ ಯಾವ ಸಮಸ್ಯೆಯೂ ಇಲ್ಲ. ಸಿದ್ದರಾಮಯ್ಯ ಅವರು ಮಂಡ್ಯಗೆ ಪತ್ರಿಕಾಗೋಷ್ಠಿ ನಡೆಸಲು ಆಗಮಿಸುತ್ತಿದ್ದಾರೆ. ಆಗ ನಾವು ಹಾಜರಾಗುತ್ತೇವೆ. ಪಕ್ಷದ ನಾಯಕರು ನೀಡುವ ಸೂಚನೆ ಪಾಲಿಸುತ್ತೇವೆ ಎಂದು ಹೇಳಿದರು. ಅಲ್ಲದೆ ಪ್ರಚಾರಕ್ಕೆ ಜೆಡಿಎಸ್‌ನಿಂದ ಯಾವುದೇ ಮನವಿ ಬಂದಿಲ್ಲ ಎಂದೂ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next